ಆರೆಸ್ಸೆಸ್ ದೃಷ್ಟಿಯಲ್ಲಿ ಹಿಂದೂ ಆಗಲೂ 40% ಕಮಿಷನ್ ಹೊಡೆಯಬೇಕಾ: ವಿಪಕ್ಷನಾಯಕ ಸಿದ್ದರಾಮಯ್ಯ ಕಿಡಿ

Prasthutha|

ಬೆಂಗಳೂರು: ಆರೆಸ್ಸೆಸ್ ದೃಷ್ಟಿಯಲ್ಲಿ ಹಿಂದೂ ಆಗಲೂ 40% ಕಮಿಷನ್ ಹೊಡೆಯಬೇಕಾ? ಬ್ಲೂ ಫಿಲ್ಮ್ ನೋಡಬೇಕಾ? ಗಣಿ ಲೂಟಿ ಮಾಡಬೇಕಾ? ಚೆಕ್ ನಲ್ಲಿ ದುಡ್ಡು ಪಡೆದು ಜೈಲಿಗೆ ಹೋಗಬೇಕಾ? ರೇಪ್ ಮಾಡಬೇಕಾ? ಏನು ಮಾಡಬೇಕು? ಹೇಳಿಬಿಡಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಆರೆಸ್ಸೆಸ್ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಅವರು, ‘ನಾನು ಪ್ರಶ್ನೆ ಮಾಡಿದ್ದು ಆರೆಸ್ಸೆಸ್ ಎಂಬ ಸಂಸ್ಥೆಯನ್ನು. ಉತ್ತರಿಸುವವರು ಬಿಜೆಪಿ ನಾಯಕರು. ಇವರು ಯಾಕೆ ಬಡಿದುಕೊಳ್ಳುತ್ತಿದ್ದಾರೆ?. ಆರೆಸ್ಸೆಸ್ ನಾಯಕರು ಓದು-ಬರಹ ಗೊತ್ತಿಲ್ಲದವರೇ? ಅವರೇ ಉತ್ತರಿಸಲಿ ಎಂದು ಕಿಡಿಕಾರಿದ್ದಾರೆ.

ಹಿಂದೂ ಧರ್ಮದ ರಕ್ಷಣೆಗಾಗಿಯೇ ಅವತಾರ ಎತ್ತಿ ಬಂದಂತೆ ಮಾತನಾಡುತ್ತಿರುವ ಆರೆಸ್ಸೆಸ್ ನಾಯಕರು ಬೆಂಬಲಿಸುತ್ತಿರುವುದು ಮಾತ್ರ ಬಿಜೆಪಿ ಎಂಬ ರಾಜಕೀಯ ಪಕ್ಷವನ್ನು. ಯಾಕೆ ಬಿಜೆಪಿಯಲ್ಲಿರುವವರು ಮಾತ್ರ ಹಿಂದೂಗಳೇ? ಬಿಜೆಪಿಯಲ್ಲಿರುವವರು ಮಾತ್ರ ಹಿಂದೂಗಳೆಂದು ಯಾವ ಆಧಾರದಲ್ಲಿ ಆರೆಸ್ಸೆಸ್ ತೀರ್ಮಾನಿಸಿದೆ? ಆರೆಸ್ಸೆಸ್ ದೃಷ್ಟಿಯಲ್ಲಿ ಹಿಂದೂ ಆಗಲು ಹೊಂದಿರಬೇಕಾದ ಅರ್ಹತೆಗಳೇನು? ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.

- Advertisement -

ಆರೆಸ್ಸೆಸ್ ಪ್ರತಿಪಾದಿಸುವ ಹಿಂದೂ ಧರ್ಮದಲ್ಲಿ ದಲಿತರು, ಹಿಂದುಳಿದ ಜಾತಿಗಳ ಸ್ಥಾನಮಾನ ಏನು? ಆರೆಸ್ಸೆಸ್ ಯಾಕೆ ಮೀಸಲಾತಿ, ಭೂಸುಧಾರಣೆಯನ್ನು ವಿರೋಧಿಸುತ್ತಾ ಬಂದಿದೆ? ಇದರ ಫಲಾನುಭವಿಗಳು ಹಿಂದುಗಳು ಅಲ್ಲವೇ? ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆರೆಸ್ಸೆಸ್ ದೃಷ್ಟಿಯಲ್ಲಿ ಹಿಂದೂ ಆಗಲೂ 40% ಕಮಿಷನ್ ಹೊಡೆಯಬೇಕಾ? ಬ್ಲೂ ಫಿಲ್ಮ್ ನೋಡಬೇಕಾ? ಗಣಿ ಲೂಟಿ ಮಾಡಬೇಕಾ? ಚೆಕ್ ನಲ್ಲಿ ದುಡ್ಡು ಪಡೆದು ಜೈಲಿಗೆ ಹೋಗಬೇಕಾ? ರೇಪ್ ಮಾಡಬೇಕಾ? ಏನು ಮಾಡಬೇಕು? ಹೇಳಿಬಿಡಿ ಎಂದು ಗುಡುಗಿದ್ದಾರೆ.

ಹಸಿದ ಹೊಟ್ಟೆಗೆ ಅನ್ನ, ಎಳೆಯ ಮಕ್ಕಳಿಗೆ ಹಾಲು, ರೈತರ ಬೆಳೆಗೆ ನ್ಯಾಯದ ಬೆಲೆ, ಯುವಜನರಿಗೆ ಉದ್ಯೋಗ, ಅವಕಾಶ ವಂಚಿತರಿಗೆ ಸಮಾನ ಅವಕಾಶ, ಜಾತಿ ತಾರತಮ್ಯದಿಂದ ಅನ್ಯಾಯಕ್ಕೀಡಾದವರಿಗೆ ಸಾಮಾಜಿಕ ನ್ಯಾಯ.. ಹಿಂದೂ ಆಗಲು ಇಷ್ಟು ಅರ್ಹತೆ ಸಾಲದೇ? ಎಂದು ಅವರು ಪ್ರಶ್ನಿಸಿದ್ದಾರೆ.

ಹಿಂದೂಗಳೆಲ್ಲ ಒಂದು ಎಂದು ಕಂಠಶೋಷಣೆ ಮಾಡುತ್ತಿರುವ ಆರೆಸ್ಸೆಸ್ ತನ್ನ ಸಂಘಟನೆಯ ಪದಾಧಿಕಾರಗಳನ್ನೆಲ್ಲಾ ಯಾಕೆ ಒಂದು ಜಾತಿಗೆ ಮೀಸಲಿಟ್ಟಿದೆ? ಆರೆಸ್ಸೆಸ್ ನ ಪದಾಧಿಕಾರಿಗಳಲ್ಲಿ ಎಷ್ಟು ಮಂದಿ ದಲಿತರು, ಹಿಂದುಳಿದ ಜಾತಿಯವರಿದ್ದಾರೆ? ಎಂದು ಸವಾಲೆಸೆದಿದ್ದಾರೆ.

ಆರೆಸ್ಸೆಸ್ ದೃಷ್ಟಿಯಲ್ಲಿ ಹಿಂದೂ ಧರ್ಮದ ವ್ಯಾಖ್ಯಾನ ಏನು? ಹಿಂದೂ ಆಗಲು ಹಿಂದೂ ತಂದೆ-ತಾಯಿ ಹೊಟ್ಟೆಯಲ್ಲಿ ಹುಟ್ಟಿದರೆ ಸಾಕಾ? ಇಲ್ಲವೇ ಬಿಜೆಪಿ ಎಂಬ ರಾಜಕೀಯ ಪಕ್ಷದ ಸದಸ್ಯರಾಗಬೇಕಾ? ಹಿಂದೂಗಳೆಲ್ಲ ಒಂದು ಎಂದು ಕಂಠ ಶೋಷಣೆ ಮಾಡುತ್ತಿರುವ ಆರ್.ಎಸ್.ಎಸ್ ಯಾಕೆ ಹಿಂದೂ ಧರ್ಮದ ಅನಿಷ್ಠಗಳಾದ ಅಸ್ಪೃಶ್ಯತೆ, ಅಸಮಾನತೆ, ಮೂಢ ನಂಬಿಕೆ, ಕಂದಾಚಾರಗಳ ಬಗ್ಗೆ ಮಾತನಾಡುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಹಿಂದೂ ಧರ್ಮದೊಳಗಿನ ಅನಿಷ್ಠ ಗಳನ್ನು ಪ್ರಶ್ನಿಸಿದ ಮಾತ್ರಕ್ಕೆ ನನ್ನಂತಹವರು ಹಿಂದೂ ವಿರೋಧಿ ಆಗುವುದಾದರೆ? ಇದೇ ಕೆಲಸ ಮಾಡಿರುವ ಸ್ವಾಮಿ ವಿವೇಕಾನಂದ, ಕನಕದಾಸ, ನಾರಾಯಣ ಗುರುಗಳನ್ನು ಏನೆಂದು ಕರೆಯುತ್ತೀರಿ? ಎಂದು ಅವರು ಆರೆಸ್ಸೆಸ್ ನಾಯಕರನ್ನು ಕೇಳಿದ್ದಾರೆ.

ಆರೆಸ್ಸೆಸ್ ನಾಯಕರೇ ನಿಮ್ಮ ಆತ್ಮವನ್ನು ಸಾಕ್ಷಿಯಾಗಿಟ್ಟುಕೊಂಡು ಹೇಳಿಬಿಡಿ. ನಿಮ್ಮ ನಿಷ್ಠೆ ರಾಷ್ಟ್ರಧ್ವಜಕ್ಕೋ? ಭಗವಾ ಧ್ವಜಕ್ಕೋ? ನಿಮ್ಮ ನಿಷ್ಠೆ ಸಂವಿಧಾನಕ್ಕೋ ? ಮನುಸ್ಮೃತಿಗೋ? ನಿಮ್ಮ ನಿಷ್ಠೆ ಗಾಂಧೀಜಿಗೋ? ಗೋಡ್ಸೆಗೋ? ಎಂದು ಪ್ರಶ್ನಿಸಿದ್ದಾರೆ.

ಆರೆಸ್ಸೆಸ್ ನಾಯಕರೇ, ಈ ರಿಮೋಟ್ ಕಂಟ್ರೋಲ್ ರಾಜಕೀಯ ಬಿಟ್ಟು ಬಿಡಿ. ನಿಮ್ಮ ತತ್ವ-ಸಿದ್ದಾಂತದ ಬಗ್ಗೆ ಅಷ್ಟೊಂದು ವಿಶ್ವಾಸ ನಿಮಗಿದ್ದರೆ ಈ ಹಿಂಬಾಗಿಲ ರಾಜಕೀಯ ಮಾಡದೆ ನೇರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಬಿಡಿ, ಗೆಲುವು ಕೋಮುವಾದದ್ದೋ? ಜಾತ್ಯತೀತತೆಯದ್ದೋ? ನೋಡಿಯೇ ಬಿಡೋಣ ಎಂದು ಸವಾಲೆಸೆದಿದ್ದಾರೆ.



Join Whatsapp