ಪಠ್ಯಪುಸ್ತಕ ಪರಿಷ್ಕರಣೆ ವಿವಾದ; ಮತ್ತೆ ವೈರಲ್ ಆದ ಕುವೆಂಪುರನ್ನು ಅವಮಾನಿಸಿದ ರೋಹಿತ್ ಚಕ್ರತೀರ್ಥರ ಹಳೆಯ ಪೋಸ್ಟ್

Prasthutha|

ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ 2017ರ ಮಾರ್ಚ್ ನಲ್ಲಿ  ರಾಷ್ಟ್ರಕವಿ  ಕುವೆಂಪು ರಚಿಸಿದ ನಾಡಗೀತೆಯನ್ನು ತಿರುಚಿ ಫೇಸ್ ಬುಕ್ ನಲ್ಲಿ ಅವಮಾನಿಸಿದ್ದ ಹಳೆಯ ಪೋಸ್ಟ್  ಇದೀಗ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.

- Advertisement -

“ಜೈ ಕಾಂಗ್ರೆಸ್ ಜನನಿಯ ತನುಜಾತೆ ಜಯಹೇ ಅರೇಬಿಕ್ ಮಾತೆ…..ಜೈ ಸುಂದರ ಮಟನ್ ಅಂಗ್ಡಿಗಳ ಸಾಲೇ” ಎಂದು ಬರೆದು ಹಾಕಿದ್ದ ಪೋಸ್ಟ್ ಸಾಕಷ್ಟು ವೈರಲ್ ಆಗಿತ್ತು.   ರೋಹಿತ್ ಚಕ್ರತೀರ್ಥ ವಿಕೃತಿ ಮೆರೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದ  ಸಾವಿರಾರು ಕುವೆಂಪು ಅಭಿಮಾನಿಗಳು ಮತ್ತು ನೆಟ್ಟಿಗರು, ನಾಡಗೀತೆಯನ್ನು ಅವಮಾನಿಸಿದ ಅವರನ್ನು ಕೂಡಲೇ ಬಂಧಿಸಬೇಕು ಎಂದೂ  ಒತ್ತಾಯಿಸಿದ್ದರು. ಆದರೆ, ಅವರ ಬಂಧನವಾಗಿರಲಿಲ್ಲ.

ಇದೀಗ ವಿವಾದಕ್ಕೊಳಗಾಗಿರುವ 10ನೇ ತರಗತಿ ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿ ಆ ಪೋಸ್ಟ್  ಮತ್ತೆ ವೈರಲ್ ಆಗಿದೆ.  

- Advertisement -

ಕರ್ನಾಟಕ ಸರ್ಕಾರ ಶಿಕ್ಷಣ ಇಲಾಖೆಯು ಶಾಲಾ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗೆ ರೋಹಿತ್ ಚಕ್ರತೀರ್ಥರನ್ನು ಅಧ್ಯಕ್ಷರನ್ನಾಗಿ 2021 ರಲ್ಲಿ ಘೋಷಿಸಿದ  ವೇಳೆಯಲ್ಲೂ  ಈ ಪೋಸ್ಟ್  ತುಂಬಾ ಸದ್ದು ಮಾಡಿತ್ತು. ಇಂತಹ ನಾಡದ್ರೋಹಿಯನ್ನು ಶಿಕ್ಷಣ ಇಲಾಖೆಯ ಉನ್ನತ ಹುದ್ದೆಗೆ ಆಯ್ಕೆ ಮಾಡಿರುವುದು ಅಕ್ಷಮ್ಯ ಎಂಬ ಮಾತುಗಳೂ ಕೇಳಿಬಂದಿದ್ದವು. ಈ ವಿರೋಧವನ್ನು ಲೆಕ್ಕಿಸದ ಸರ್ಕಾರ ಚಕ್ರತೀರ್ಥ ಅವರನ್ನೇ ಶಾಲಾ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗೆ ನೇಮಕ ಮಾಡಿತ್ತು.

ಇದೀಗ ಅವರು 10ನೇ ತರಗತಿ ಕನ್ನಡ ನುಡಿ ಪಠ್ಯಪುಸ್ತಕದಿಂದ ಭಗತ್ ಸಿಂಗ್ ಪಠ್ಯದ  ಬದಲಿಗೆ ಆರ್ ಎಸ್ ಎಸ್ ಸಂಸ್ಥಾಪಕ ಕೆ ಬಿ ಹೆಡಗೇವಾರ್ ಪಠ್ಯವನ್ನು ಸೇರ್ಪಡೆಗೊಳಿಸಿದ್ದಾರೆ. ಅಲ್ಲದೆ, ಸಮಾಜ ವಿಜ್ಞಾನ ಪುಸ್ತಕದಿಂದ ಸಾಮಾಜಿಕ ಹೋರಾಟಗಾರರಾದ ನಾರಾಯಣ ಗುರು ಮತ್ತು ಪೆರಿಯಾರ್ ಪಠ್ಯವನ್ನು ಕೈಬಿಡಲಾಗಿದ್ದು, ಟಿಪ್ಪು ಪಠ್ಯದ ಅನೇಕ ಭಾಗಗಳನ್ನು ತೆಗೆದುಹಾಕಲಾಗಿದೆ.

ಪ್ರಸ್ತುತ ಭಾರೀ ಚರ್ಚೆಗೆ ಗ್ರಾಸವಾಗಿರುವ ಈ ವಿಚಾರ ಶಿಕ್ಷಣ ತಜ್ಞರ ಮತ್ತು ಪ್ರಗತಿಪರರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ರೋಹಿತ್ ಚಕ್ರತೀರ್ಥ ಅವರ ಹಳೆಯ ಪೋಸ್ಟ್ ಮತ್ತೊಮ್ಮೆ ವೈರಲ್ ಆಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಲೇ ಮಧ್ಯಪ್ರವೇಶಿಸಿ ರೋಹಿತ್ ಚಕ್ರತೀರ್ಥ ಮತ್ತು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರನ್ನು ವಜಾ ಮಾಡಬೇಕು ಎಂಬ ಒತ್ತಾಯಗಳು ಸಾಮಾಜಿಕ  ವಲಯಗಳಿಂದ  ಕೇಳಿಬರುತ್ತಿವೆ.



Join Whatsapp