ವಿಸ್ಮಯಾ ವರದಕ್ಷಿಣೆ ಸಾವು ಪ್ರಕರಣ: ಪತಿ ಕಿರಣ್ ಕುಮಾರ್ ಅಪರಾಧಿ ಎಂದು ಘೋಷಿಸಿದ ನ್ಯಾಯಾಲಯ

Prasthutha|

ತಿರುವನಂತಪುರಂ: ಕೇರಳದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ವರದಕ್ಷಿಣೆ ಕಿರುಕುಳದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡ ವಿಸ್ಮಯ ನಾಯರ್ ಪ್ರಕರಣದಲ್ಲಿ ಆಕೆ ಪತಿ ಕಿರಣ್ ಕುಮಾರ್ ನನ್ನು ದೋಷಿ ಎಂದು ಕೇರಳದ ಕೊಲ್ಲಂನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.

- Advertisement -


ಪ್ರಕರಣದ ತೀರ್ಪನ್ನು ಇಂದಿಗೆ ಕಾಯ್ದಿರಿಸಿದ್ದ ನ್ಯಾಯಾಲಯ, 304(ಬಿ), 498(ಎ), 306 ಐಪಿಸಿ ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಯ 3,4 ಆರೋಪದಡಿ ಪತಿಯನ್ನು ದೋಷಿ ಎಂದು ತೀರ್ಪು ನೀಡಿದೆ. ವಿಚಾರಣೆ ವೇಳೆ 42 ಸಾಕ್ಷಿಗಳು, 102 ದಾಖಲೆಗಳು ಮತ್ತು ಹಲವಾರು ಕರೆ ದಾಖಲೆಗಳನ್ನು ನ್ಯಾಯಾಲಯದಲ್ಲಿ ಪರಿಶೀಲಿಸಲಾಗಿದೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್ ಪಿಪಿ) ಹೇಳಿದ್ದಾರೆ. ನ್ಯಾಯಾಲಯದ ಮುಂದೆ ಸಲ್ಲಿಸಿದ ಸಾಕ್ಷ್ಯದ ಆಧಾರದ ಮೇಲೆ ಆರೋಪಿ ಪತಿ ವಿರುದ್ಧದ ಆರೋಪಗಳನ್ನು ಹೊರಿಸಲಾಗಿದೆ ಎಂದು ಪ್ರಾಸಿಕ್ಯೂಷನ್ ವಾದಿಸಿದೆ ಎಂದು ಅವರು ಹೇಳಿದರು.


ವರದಕ್ಷಿಣೆ ಕಿರುಕುಳದಿಂದ ವಿಸ್ಮಯಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕೇರಳ ಪೊಲೀಸರು 500 ಪುಟಗಳ ಚಾರ್ಜ್ಶೀಟ್ ನಲ್ಲಿ ಹೇಳಿದ್ದರು. ಸಂತ್ರಸ್ತೆಯ ಪತಿ ಎಸ್ ಕಿರಣ್ ಕುಮಾರ್(30) ವಿರುದ್ಧ ಐಪಿಸಿ ಅಡಿಯಲ್ಲಿ ಕ್ರಮವಾಗಿ ವರದಕ್ಷಿಣೆ ಸಾವು, ವರದಕ್ಷಿಣೆ ಕಿರುಕುಳ, ಆತ್ಮಹತ್ಯೆಗೆ ಪ್ರಚೋದನೆ, ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು ಮತ್ತು ಕ್ರಿಮಿನಲ್ ಬೆದರಿಕೆಯ ಅಪರಾಧಗಳಿಗಾಗಿ ಸೆಕ್ಷನ್ 304 ಬಿ, 498 ಎ, 306, 323 ಮತ್ತು 506 ರ ಅಡಿಯಲ್ಲಿ ಆರೋಪ ಹೊರಿಸಲಾಗಿತ್ತು.
ಆಯುರ್ವೇದ ವೈದ್ಯ ವಿದ್ಯಾರ್ಥಿನಿಯಾಗಿದ್ದ ವಿಸ್ಮಯಾ(23) ಕಳೆದ ಜೂನ್ 21, 2021 ರಂದು ಕೊಲ್ಲಂ ಜಿಲ್ಲೆಯ ಸಾಸ್ತಮಕೋಟಾದಲ್ಲಿ ತನ್ನ ಪತಿಯ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು.

- Advertisement -


ಈ ನಡುವೆ ಸಹಾಯಕ ಮೋಟಾರು ವಾಹನ ನಿರೀಕ್ಷಕರಾಗಿದ್ದ ಪತಿ ಕುಮಾರ್ ನನ್ನು ವರದಕ್ಷಿಣೆ ಕಿರುಕುಳ ನೀಡುವ ಮೂಲಕ ಆಕೆಯ ಸಾವಿಗೆ ಕಾರಣರಾಗಿದ್ದಾನೆ ಎಂಬ ಆರೋಪದಲ್ಲಿ ಬಂಧಿಸಿದ ಬಳಿಕ ರಾಜ್ಯ ಸರ್ಕಾರ ಆತನನ್ನು ಸೇವೆಯಿಂದ ವಜಾಗೊಳಿಸಿತ್ತು.
ಕಿರಣ್ ಕುಮಾರ್ ಪತ್ನಿ ವಿಸ್ಮಯಾ ಅವರು ಬ್ಯಾಚುಲರ್ ಆಫ್ ಆಯುರ್ವೇದಿಕ್ ಮೆಡಿಸಿನ್ ಮತ್ತು ಸರ್ಜರಿ ವಿದ್ಯಾರ್ಥಿಯಾಗಿದ್ದು, ಜೂನ್ 21 ರಂದು ಶವವಾಗಿ ಪತ್ತೆಯಾಗಿದ್ದಳು. ವರದಕ್ಷಿಣೆಗಾಗಿ ಆಕೆಗೆ ಕಿರುಕುಳ ನೀಡಲಾಗಿತ್ತು. ಆಕೆಯ ಸಾವಿನಲ್ಲಿ ಶಾಮೀಲಾಗಿದ್ದಾರೆ ಎಂದು ಶಂಕಿಸಿ ಕಿರಣ್ ಕುಮಾರ್ ನನ್ನು ಬಂಧಿಸಲಾಗಿತ್ತು.

Join Whatsapp