ನವದೆಹಲಿ: ವಾರಣಾಸಿ ಕೋರ್ಟ್ ನೇಮಿಸಿದ್ದ ವಕೀಲರ ಆಯೋಗವು ಜ್ಞಾನವಾಪಿ ಮಸೀದಿಯ ವಿವಾದಿತ ಸ್ಥಳದಲ್ಲಿ ತಾವು ನಡೆಸಿದ ಸರ್ವೇಕ್ಷಣೆಯ ವರದಿ ಮತ್ತು ವೀಡಿಯೋಗಳನ್ನು ವಾರಣಾಸಿ ಕೋರ್ಟಿಗೆ ಸಲ್ಲಿಸಿತು.
ಗುರುವಾರ ಸುಪ್ರೀಂ ಕೋರ್ಟ್ ಜ್ಞಾನ ವಾಪಿ ಮಸೀದಿ ಪ್ರಕರಣದ ವಿಚಾರಣೆಯನ್ನು ಮೇ 20ರ ಶುಕ್ರವಾರಕ್ಕೆ ಮುಂದೂಡಿತು. ದೂರುದಾರರು ಹೆಚ್ಚು ಸಮಯ ಕೇಳಿರುವುದರಿಂದ ಈ ವಿಷಯದಲ್ಲಿ ನಾಳೆವರೆಗೆ ಯಾವುದೇ ವಿಚಾರಣೆ ನಡೆಸಬೇಡಿ ಹಾಗೂ ತೀರ್ಮಾನ ತೆಗೆದುಕೊಳ್ಳಬೇಡಿ ಎಂದು ಸರ್ವೋಚ್ಚ ನ್ಯಾಯಾಲಯವು ವಾರಣಾಸಿ ನ್ಯಾಯಾಲಯಕ್ಕೆ ತಾಕೀತು ಮಾಡಿತು.
ಮುಚ್ಚಿದ ಲಕೋಟೆಗಳಲ್ಲಿ ಕಾಶಿ ವಿಶ್ವನಾಥ ದೇವಾಲಯ ಸಮುಚ್ಚಯದ ಜ್ಞಾನವಾಪಿ ಮಸೀದಿಯ ವಿವಾದಿತ ಪ್ರದೇಶದ ಸರ್ವೇಕ್ಷಣೆ ನಡೆಸಿದ ವಿವರಗಳನ್ನು ಆಯೋಗವು ಕೋರ್ಟಿಗೆ ಸಲ್ಲಿಸಿತು. ವಿಶೇಷ ಅಡ್ವಕೇಟ್ ಕಮಿಷನರ್ ವಿಶಾಲ್ ಸಿಂಗ್ ಮೂರು ಬಾಕ್ಸ್ ಗಳಲ್ಲಿ ಇವನ್ನೆಲ್ಲ ವಾರಣಾಸಿ ಕೋರ್ಟಿಗೆ ಒಪ್ಪಿಸಿದರು.
ಮೇ 14, 15, 16ರಂದು ಮುಖ್ಯ ಸರ್ವೆ ನಡೆದಿದ್ದು, ಅನಂತರ ಎರಡು ದಿನ ಹೆಚ್ಚುವರಿ ಸಮಯ ಪಡೆದು ಆಯೋಗವು ವರದಿ ಸಲ್ಲಿಸಿದೆ.
ಮಸೀದಿಯಲ್ಲಿ ಪ್ರಾರ್ಥನೆಗಳಿಗೆ ಯಾವುದೇ ಅಡೆತಡೆ ಮಾಡದಂತೆ ಆದೇಶಿಸಿರುವ ಸುಪ್ರೀಂ ಕೋರ್ಟು, ವಿವಾದಿತ ಪ್ರದೇಶದ ಬಗ್ಗೆ ವಿಚಾರಣೆಯನ್ನು ಕಾಯ್ದಿರಿಸಿದೆ.
ಆದರೆ ಮಸೀದಿಗೆ ಬರುತ್ತಿದ್ದ ನೀರಿನ ಪೈಪ್ ಗಳನ್ನು ಸೀಲ್ ಮಾಡಲಾಗಿರುವುದರಿಂದ ಮುಸ್ಲಿಮರಿಗೆ ವುಝು ಮಾಡುವುದು ಇತ್ಯಾದಿ ಸಾಧ್ಯವಾಗಿಲ್ಲ ಎಂದು ಹಿರಿಯರೊಬ್ಬರು ಹೇಳಿದರು.