20ನೇ ಓವರ್ನ ಕೊನೆಯ ಎಸೆತದವರೆಗೂ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್, ಕೊನೆಗೂ ಗೆಲುವಿನ ನಿಟ್ಟುಸಿರು ಬಿಟ್ಟಿದೆ. ರಾಹುಲ್ ಪಡೆ ನೀಡಿದ್ದ 211 ರನ್ಗಳ ಕಠಿಣ ಗುರಿಯನ್ನು ಬೆನ್ನಟ್ಟಲು ಅಂತಿಮ ಎಸೆತದವರೆಗೂ ಹೋರಾಡಿದ ಕೋಲ್ಕತ್ತಾ ನೈಟ್ ರೈಡರ್ಸ್, 2 ರನ್ಗಳ ವೀರೋಚಿತ ಸೋಲಿಗೆ ಶರಣಾಗಿದೆ.
ಮಾರ್ಕಸ್ ಸ್ಟೋಯ್ನಿಸ್ ಎಸೆದ ಇನ್ನಿಂಗ್ಸ್ನ 20ನೇ ಓವರ್ನಲ್ಲಿ ಕೆಕೆಆರ್ ಗೆಲುವಿಗೆ 21 ರನ್ಗಳ ಅಗತ್ಯವಿತ್ತು. ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದ ರಿಂಕು ಸಿಂಗ್, ನಂತರದ ಎರಡು ಎಸೆತಗಳನ್ನು ಸತತವಾಗಿ ಸಿಕ್ಸರ್ಗೆ ಅಟ್ಟಿದ್ದರು. ಹೀಗಾಗಿ ಕೆಕೆಆರ್ ಗೆಲುವಿಗೆ ಉಳಿದ ಮೂರು ಎಸೆತಗಳಲ್ಲಿ ಕೇವಲ 5 ರನ್ಗಳ ಅಗತ್ಯವಿತ್ತು. ನಾಲ್ಕನೇ ಎಸೆತದಲ್ಲಿ 2 ರನ್ ಪಡೆದ ಸಿಂಗ್, 5ನೇ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಪ್ರಯತ್ನಿಸಿ, ಎವಿನ್ ಲೂಯಿಸ್ ಎಡಗೈಯಲ್ಲಿ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾದರು. ಮೂರು ರನ್ ಅಗತ್ಯವಿದ್ದ ಅಂತಿಮ ಎಸೆತದಲ್ಲಿ ಸ್ಟ್ರೈಕ್ನಲ್ಲಿದ್ದ ಉಮೇಶ್ ಯಾದವ್ ಕ್ಲೀನ್ ಬೌಲ್ಡ್ ಆದರು. ಆ ಮೂಲಕ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದ ಪಂದ್ಯವನ್ನು ಲಕ್ನೋ ರೋಚಕವಾಗಿ ಗೆದ್ದು ಪ್ಲೇ ಆಫ್ ಹಂತಕ್ಕೆ ಲಗ್ಗೆ ಇಟ್ಟಿತು.
ಕೇವಲ 15 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 2 ಬೌಂಡರಿ ನೆರವಿನಿಂದ 40 ರನ್ ಗಳಿಸಿದ್ದ ರಿಂಕು ಸಿಂಗ್, ತಂಡವನ್ನು ಗೆಲುವಿನ ಗೆರೆ ದಾಟಿಸುವ ಹೊಸ್ತಿಲಲ್ಲಿ ಅಮೋಘ ಕ್ಯಾಚ್ಗೆ ಬಲಿಯಾದದ್ದು ಪಂದ್ಯದ ‘ಟರ್ನಿಂಗ್ ಪಾಯಿಂಟ್’ ಆಯಿತು. ಮಧ್ಯಮ ಕ್ರಮಾಂಕದಲ್ಲಿ ನಾಯಕ ಶ್ರೇಯಸ್ ಅಯ್ಯರ್ 50 ರನ್, ನಿತೀಶ್ ರಾಣಾ 42 ಮತ್ತು ಸ್ಯಾಮ್ ಬಿಲ್ಲಿಂಗ್ಸ್ ಬಿರುಸಿನ 36 ರನ್ ಗಳಿಸಿದರು.
ಲಕ್ನೋ ಪರ ಬೌಲಿಂಗ್ನಲ್ಲಿ ಮೊಹ್ಸಿನ್ ಖಾನ್ ಮತ್ತು ಸ್ಟೋಯ್ನಿಸ್ ತಲಾ ಮೂರು ವಿಕೆಟ್ ಗಳಿಸುವಲ್ಲಿ ಯಶಸ್ವಿಯಾದರು. ಉಳಿದಂತೆ ಆವೇಶ್ ಖಾನ್ 60 ಜೇಸನ್ ಹೋಲ್ಡರ್ 45 ರನ್ ನೀಡಿ ದುಬಾರಿಯಾದರು. ಈ ಸೋಲಿನೊಂದಿಗೆ ಕೋಲ್ಕತ್ತಾ 15ನೇ ಆವೃತ್ತಿಯಲ್ಲಿ ತನ್ನ ಅಭಿಯಾನವನ್ನು ಲೀಗ್ ಹಂತದಲ್ಲೇ ಕೊನೆಗೊಳಿಸಿದೆ.