ನವದೆಹಲಿ: ಕೇಂದ್ರ ಮತ್ತು ಪ್ರಧಾನಿ ನರೆಂದ್ರ ಮೋದಿ ವಿರುದ್ಧ ಮತ್ತೆ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ, ಪ್ರಧಾನಿ ಮೋದಿ ಒಬ್ಬ ಹಿಂದು ವಿರೋಧಿ ಎಂದು ಟೀಕಾಪ್ರಹಾರ ನಡೆಸಿದ್ದಾರೆ. ಟ್ವೀಟ್ ಮೂಲಕ ಕಿಡಿಕಾರಿರುವ ಸ್ವಾಮಿ, ಮೋದಿ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ಪ್ರಧಾನಿಯಾದಂತಹವರು ನೀಡಿದ ಭರವಸೆಗಳನ್ನು ಎತ್ತಿಹಿಡಿಯದೆ ಹಿಂದೂ ವಿರೋಧಿಯಾಗಿದ್ದಾರೆ ಎಂದಿದ್ದಾರೆ.
‘ರಾಮ ಮಂದಿರ ಕುರಿತಾದ ಸುಪ್ರೀಂ ಕೋರ್ಟ್ ನಿರ್ಣಯವನ್ನು ವಿಳಂಬಗೊಳಿಸಲಾಗುತ್ತಿದೆ. ಐತಿಹಾಸಿಕ ರಾಮ ಸೇತುವಿಗೆ ಪ್ರಾಚೀನ ಪರಂಪರೆಯ ಸ್ಥಾನಮಾನ ನೀಡುವುದಕ್ಕೆ ವಿಳಂಬವಾಗುತ್ತಿದೆ, ಉತ್ತರಾಖಂಡದ ಹಳೆಯ ದೇವಸ್ಥಾನಗಳನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಲಾಗಿದೆ, 1991ರ ಧಾರ್ಮಿಕ ಕಾಯ್ದೆಯನ್ನು ಕಾಯಿದೆಯನ್ನು ಹಿಂದೆಗೆದುಕೊಳ್ಳಲು ನಿರಾಕರಿಸಲಾಗುತ್ತಿದೆ’ ಎಂದು ಸುಬ್ರಮಣಿಯನ್ ಸ್ವಾಮಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ.
ಕೇಂದ್ರ ಹಾಗೂ ಬಿಜೆಪಿ ವಿರುದ್ಧ ಸುಬ್ರಮಣಿಯನ್ ಸ್ವಾಮಿ ಮುಗಿಬೀಳುವುದು ಇದು ಮೊದಲೇನಲ್ಲ, ನರೆಂದ್ರ ಮೋದಿ ಸರಕಾರದ ಆರ್ಥಿಕ ನೀತಿಯ ಬಗ್ಗೆ ಸದಾ ಟೀಕಿಸುತ್ತಲೇ ಬಂದಿರುವ ಸ್ವಾಮಿ ಸ್ವಪಕ್ಷೀಯರ ಕೆಂಗಣ್ಣಿಗೆ ಗುರಿಯಾಗುತ್ತಲೇ ಇದ್ದಾರೆ.