►► ಬಜರಂಗದಳ ತರಬೇತಿಯನ್ನು ಪೊಲೀಸ್ ತರಬೇತಿಗೆ ಹೋಲಿಸಿದ ಬಿಜೆಪಿ ಮುಖಂಡ
ಕೊಡಗು: ಶೌರ್ಯ ಪ್ರಶಿಕ್ಷಣ ಹೆಸರಿನಲ್ಲಿ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಿರುವ ಬಜರಂಗದಳದ ನಡೆಯನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸಮರ್ಥಿಸಿಕೊಂಡಿದ್ದಾರೆ. ತರಬೇತಿ ಕುರಿತು ಪ್ರತಿಕ್ರಿಯಿಸಿರುವ ಅವರು, ಬಜರಂಗದಳ ಕಾರ್ಯಕರ್ತರಿಗೆ ಏರ್’ಗನ್ ತರಬೇತಿ ನೀಡಿರುವುದು ಮೊದಲಲ್ಲ ಎಂದು ಹೇಳಿದ್ದಾರೆ.
ಬಜರಂಗದಳ ಪ್ರತೀ ವರ್ಷವೂ ಆತ್ಮ ರಕ್ಷಣೆಗಾಗಿ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ತರಬೇತಿಯನ್ನು ನೀಡುತ್ತದೆ. ಶಾಲಾ ಮಕ್ಕಳಿಗೆ ಗನ್ ತರಬೇತಿ ನೀಡಲಾಗಿಲ್ಲ. ಅಲ್ಲದೇ ಬಾಂಬ್ ಹಾಕಲು ಕಲಿಸಿಕೊಟ್ಟಿಲ್ಲ, ಏರ್’ಗನ್ ತರಬೇತಿಯನ್ನು ನೀಡಿದ್ದೇವೆ, ಈ ತರಬೇತಿ ಹೊಸದಾಗಿ ಶುರುವಾಗಿಲ್ಲ, ಇದರಲ್ಲಿ ತಪ್ಪೇನಿದೆ ಎಂದು ಸಿಟಿ ರವಿ ಪ್ರಶ್ನಿಸಿದ್ದಾರೆ.
ಇನ್ನು ಬಜರಂಗದಳದ ಅಕ್ರಮ ಶಸ್ತ್ರಾಸ್ತ್ರದ ತರಬೇತಿಯನ್ನು ಪೊಲೀಸ್ ತರಬೇತಿಗೆ ಹೋಲಿಸಿರುವ ರವಿ, ಪೊಲೀಸರೂ ಈ ತರಬೇತಿಯನ್ನು ಆಯೋಜಿಸುತ್ತಾರೆ, ಬಜರಂಗದಳವೂ ಈ ತರಬೇತಿಯನ್ನು ಆಯೋಜಿಸಿದೆ ಎಂದಿದ್ದಾರೆ. ಅಲ್ಲದೇ ಎಕೆ 47 ಅನ್ನು ನಾವು ಕೊಟ್ಟಿಲ್ಲ ಎಂದು ಬಹಿರಂಗವಾಗಿ ಸಮರ್ಥಿಸಿಕೊಂಡಿದ್ದಾರೆ.
ಕೊಡಗಿನಲ್ಲಿ ಬಜರಂಗದಳವು ಶೌರ್ಯ ಪ್ರಶಿಕ್ಷಣದ ನೆಪದಲ್ಲಿ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ತರಬೇತಿ ಸೇರಿದಂತೆ ತ್ರಿಶೂಲ ದೀಕ್ಷೆ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಬಜರಂಗದಳದ ವಿರುದ್ಧ ಕ್ರಮಕ್ಕೆ ಎಸ್ ಡಿಪಿಐ, ಕಾಂಗ್ರೆಸ್ ಸಹಿತ ಕೆಲವು ಪಕ್ಷಗಳು ಕ್ರಮಕ್ಕೆ ಒತ್ತಾಯಿಸಿತ್ತು.