ಮಂಗಳೂರು: ಆಂಧ್ರ ಪ್ರದೇಶದಲ್ಲಿ ಉಂಟಾದ ಅಸನಿ ಚಂಡುಮಾರುತ ಪರಿಣಾಮ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ರಾಜ್ಯದ ಕರಾವಳಿ, ಮಲೆನಾಡು, ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿ ವರುಣನ ಆರ್ಭಟ ಹೆಚ್ಚಾಗಿದೆ. ಕಡಲನಗರಿ ಮಂಗಳೂರು ಸೇರಿದಂತೆ ಉಡುಪಿ ಜಿಲ್ಲೆಯಲ್ಲಿ ಮಳೆಗಾಲದ ವಾತಾವರಣದ ಅನುಭವ ಉಂಟಾಗಿದೆ. ಕಳೆದ ಕೆಲವು ದಿನಗಳಿಂದ ಬಿಸಿಲಿನ ಧಗೆಗೆ ಬಸವಳಿದಿದ್ದ ಕರಾವಳಿಗರಿಗೆ ಇದೀಗ ಕೂಲ್ ಕೂಲ್ ವಾತಾವರಣ ಸೃಷ್ಟಿಯಾಗಿದೆ.
ಅಸನಿ ಚಂಡಮಾರುತದ ಪರಿಣಾಮದಿಂದ ಕಡಲ ನಗರಿ ಮಂಗಳೂರಿನಲ್ಲಿ ಕಳೆದ ನಾಲ್ಕು ದಿನದಿಂದ ಕರಾವಳಿಯಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಬುಧವಾರ ಬೆಳಗ್ಗೆಯಿಂದಲೇ ಭಾರೀ ಮಳೆ ಸುರಿದಿದೆ. ಇದೀಗಾಗಲೇ ಮಳೆಗಾಲ ಶುರುವಾಗಿದೆ ಎಂದು ಕರಾವಳಿಗರು ಅಭಿಪ್ರಾಯಪಟ್ಟಿದ್ದು, ಇಂದೂ ಮಳೆ ಸುರಿಯುತ್ತಿದೆ. ನಿನ್ನೆ ಸುರಿದ ಭಾರೀ ಮಳೆಯಿಂದ ನೇತ್ರಾವತಿ, ಕುಮಾರಧಾರ ಸೇರಿದಂತೆ ವಿವಿಧ ನದಿಗಳಲ್ಲಿ ಕೆಂಪು ನೀರು ಹರಿಯಲು ಶುರುವಾಗಿದೆ.
ಇದೀಗಾಗಲೇ ಹವಾಮಾನ ಇಲಾಖೆ ಅಸನಿ ಚಂಡಮಾರುತದ ಪರಿಣಾಮ ರಾಜ್ಯದಲ್ಲಿ ನಾಲ್ಕು ದಿನಗಳ ಭಾರೀ ಮಳೆ ಸುರಿಯುವ ಮುನ್ಸೂಚನೆ ನೀಡಿದೆ.