87ನೇ ವಯಸ್ಸಿನಲ್ಲಿ 12ನೇ ಪರೀಕ್ಷೆಯಲ್ಲಿ ಪಾಸ್ ಮಾಡಿದ ಮಾಜಿ ಮುಖ್ಯ ಮಂತ್ರಿ

Prasthutha|

ಚಂಡೀಗಡ: ಓದಿನ ಹಂಬಲವುಳ್ಳ ಎಷ್ಟೂ ವೃದ್ಧರು ಇಳಿ ವಯಸ್ಸಿನಲ್ಲಿ ಪರೀಕ್ಷೆ ಬರೆದು, ಉನ್ನತ ಶಿಕ್ಷಣ ಪಡೆದ ಉದಾಹರಣೆಗಳು ನಮ್ಮ ಮುಂದೆ ಇವೆ. ಆದರೆ ಹರ್ಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲ ಅವರು 87ನೇ ವಯಸ್ಸಿನಲ್ಲಿ 10 ಮತ್ತು 12ನೇ ತರಗತಿ ಪಾಸ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

- Advertisement -

ಚೌಟಾಲ ಅವರು 2021ರಲ್ಲಿ ಹರ್ಯಾಣ ಮುಕ್ತ ಮಂಡಳಿ ಅಡಿಯಲ್ಲಿ 12ನೇ ತರಗತಿ ಪರೀಕ್ಷೆಯಲ್ಲಿ ಹಾಜರಾಗಿದ್ದರು. ಆದರೆ ಅವರ ಫಲಿತಾಂಶವನ್ನು ತಡೆಹಿಡಿಯಲಾಗಿತ್ತು. ಏಕೆಂದರೆ ಅವರು 10ನೇ ತರಗತಿಯ ಇಂಗ್ಲಿಷ್ ಪರೀಕ್ಷೆಯಲ್ಲಿ ಇನ್ನೂ ಉತ್ತೀರ್ಣರಾಗಿರಲಿಲ್ಲ. ಹೀಗಾಗಿ 12ನೇ ತರಗತಿಯ ಫಲಿತಾಂಶ ಪಡೆದುಕೊಳ್ಳುವ ಸಲುವಾಗಿ ಅವರು 10ನೇ ತರಗತಿ ಪರೀಕ್ಷೆ ಬರೆದಿದ್ದರು.

ಕಳೆದ ವರ್ಷ ಬರೆದ 10ನೇ ತರಗತಿ ಇಂಗ್ಲಿಷ್ ವಿಷಯದ ಪರೀಕ್ಷೆಯಲ್ಲಿ 87 ವರ್ಷದ ಚೌಟಾಲ ಅವರು 100 ಅಂಕಗಳಿಗೆ 88 ಅಂಕಗಳನ್ನು ಗಳಿಸಿದ್ದಾರೆ. ಮಾಜಿ ಸಿಎಂ ಚೌಟಾಲ ಅವರು ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ದಿಲ್ಲಿಯ ತಿಹಾರ್ ಜೈಲಿನಲ್ಲಿ ಹತ್ತು ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾಗ, 2017ರಲ್ಲಿ ರಾಷ್ಟ್ರೀಯ ಮುಕ್ತ ಶಾಲೆ ಸಂಸ್ಥೆಯಿಂದ ಹತ್ತನೇ ತರಗತಿ ಪರೀಕ್ಷೆ ಬರೆದಿದ್ದರು. ಆಗ ಇಂಗ್ಲಿಷ್ ಹೊರತುಪಡಿಸಿ ಉಳಿದ ಎಲ್ಲ ವಿಷಯಗಳಲ್ಲಿಯೂ ಉತ್ತೀರ್ಣರಾಗಿದ್ದರು.

- Advertisement -

ಓಂ ಪ್ರಕಾಶ್ ಚೌಟಾಲ ಅವರು ತಮ್ಮ ಅಂಕ ಪಟ್ಟಿಗಳನ್ನು ಚಂಡೀಗಡದಲ್ಲಿ ಮಂಗಳವಾರ ಹರ್ಯಾಣ ಶಿಕ್ಷಣ ಮಂಡಳಿಯಿಂದ ಪಡೆದುಕೊಂಡಿದ್ದಾರೆ.



Join Whatsapp