ಬೆಂಗಳೂರು: ರಾಜ್ಯದಲ್ಲಿನ ಶಾಂತಿ, ಸೌಹಾರ್ದತೆಯ ವಾತಾವರಣವನ್ನು ಕಲುಷಿತಗೊಳಿಸಿ, ಧರ್ಮ ವೈಷಮ್ಯವನ್ನು ಮುನ್ನೆಲೆಗೆ ತಂದು ಈ ದೇಶವನ್ನು ಅವನತಿಯತ್ತ ತೆಗೆದುಕೊಂಡು ಹೋಗುತ್ತಿರುವ ಪ್ರಯತ್ನವನ್ನು ವಿಫಲಗೊಳಿಸಲು ಬಹುತ್ವ ಕರ್ನಾಟಕದ ವತಿಯಿಂದ ಉಡುಪಿ ಜಿಲ್ಲೆಯಲ್ಲಿ ಮೇ 14ರಂದು ಸಾಮರಸ್ಯ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ತಿಳಿಸಿದ್ದಾರೆ.
ಮಂಗಳವಾರ ನಗರದ ಪ್ರೆಸ್ ಕ್ಲಬ್ ನಲ್ಲಿ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೆಲವು ಶಕ್ತಿಗಳು ಸಮಾಜವನ್ನು ವಿಭಜನೆ ಮಾಡಲು ಮುಂದಾಗಿವೆ. ಸಮಾಜವನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಬೇಕು, ಸಮಸ್ಯೆಗಳನ್ನು ಮಾತುಕತೆ ಮೂಲಕ ಬಗೆಹರಿಸಬೇಕೇ ಹೊರತು ಗೂಂಡಾಗಿರಿಯಿಂದಲ್ಲ ಎಂದರು.
ಧಾರವಾಡದಲ್ಲಿ ದೇವಸ್ಥಾನದ ಎದುರು ಕಲ್ಲಂಗಡಿ ಮಾರುವ ವೃದ್ಧನ ಮೇಲೆ ಯಾವ ರೀತಿ ಹಲ್ಲೆ ನಡೆಸಲಾಯಿತು ಎಂಬುದನ್ನು ನಾವು ನೋಡಿದ್ದೇವೆ. ವಿದ್ಯಾರ್ಥಿಗಳು ಗಾಂಧಿಜೀ, ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಮುಂದಿಟ್ಟುಕೊಂಡು ಮಾತನಾಡಿದರೆ ಅವರನ್ನು ಯುಎಪಿಎ ಅಡಿಯಲ್ಲಿ ಜೈಲಿಗೆ ಅಟ್ಟಲಾಗುತ್ತದೆ. ಆದರೆ, ಬೀದಿಯಲ್ಲಿ ಗೂಂಡಾಗಿರಿ ಮಾಡುವವರ ವಿರುದ್ಧ ಮೌನವಹಿಸಲಾಗುತ್ತದೆ. ನಮ್ಮ ದೇಶ, ನಮ್ಮ ರಾಜ್ಯ ಯಾವ ದಿಕ್ಕಿನಲ್ಲಿ ಹೋಗುತ್ತಿದೆ ಎಂದು ಅವರು ಪ್ರಶ್ನಿಸಿದರು.
ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ಹಿಂದೂಗಳು ಮುಸ್ಲಿಮರ ಬಳಿ ವ್ಯಾಪಾರ ಮಾಡಬೇಡಿ ಎಂದು ಕರೆ ನೀಡುವ ಮೂಲಕ ದೇಶವನ್ನು ಯಾವ ದಿಕ್ಕಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದಾರೆ. ದೇವಸ್ಥಾನ, ಮಸೀದಿ, ಚರ್ಚ್ ಹೆಸರಿನಲ್ಲಿ ಎಲ್ಲಿಗೆ ಹೋಗುತ್ತಿದ್ದೇವೆ. ಧರ್ಮ ಎನ್ನುವುದು ಸಂವಿಧಾನಬದ್ಧವಾಗಿ ನೀಡಿರುವ ಆಯ್ಕೆ. ಆದರೆ, ಧರ್ಮದ ಬಲವಂತದ ಹೇರಿಕೆಗೆ ಅವಕಾಶವಿಲ್ಲ ಎಂದು ಅವರು ಹೇಳಿದರು.
ಮುಸ್ಲಿಮರು ಹಾಗೂ ಕ್ರೈಸ್ತರ ತುಷ್ಟೀಕರಣ ಮಾಡಲಾಗುತ್ತಿದೆ ಎಂದು ಆಪಾದನೆ ಮಾಡಲಾಗುತ್ತಿದೆ. ಈಗ ನೀವು ಒಂದು ವರ್ಗವನ್ನು ಇನ್ನೊಂದು ವರ್ಗದ ಮೇಲೆ ಎತ್ತಿ ಕಟ್ಟುವ ಮೂಲಕ ಏನು ಮಾಡುತ್ತಿದ್ದೀರಾ?. ಸರ್ಕಾರ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಬೇಕು. ಸಂವಿಧಾನದ ವಿರುದ್ಧವಾಗಿ ನಡೆಯುತ್ತಿರುವವರ ಕಿವಿ ಹಿಂಡಬೇಕು ಎಂದು ಮಾವಳ್ಳಿ ಶಂಕರ್ ಹೇಳಿದರು.
ಕುವೆಂಪು ಹೇಳಿದಂತೆ ನಮ್ಮ ರಾಜ್ಯವು ಸರ್ವ ಜನಾಂಗದ ಶಾಂತಿಯ ತೋಟ. ಆದರೆ, ಈ ತೋಟಕ್ಕೆ ಬೆಂಕಿ ಹಾಕುವ ಕೆಲಸವನ್ನು ಕೆಲವು ವ್ಯಕ್ತಿಗಳು, ಸಂಘ ಸಂಸ್ಥೆಗಳು ಮಾಡುತ್ತಿವೆ. ಅವುಗಳ ಮೇಲೆ ನಿಯಂತ್ರಣ ಹೇರುವ ಕೆಲಸವನ್ನು ಸರ್ಕಾರ ಮಾಡಬೇಕು. ಸಮಾಜದಲ್ಲಿ ಕದಡುತ್ತಿರುವ ಸಾಮರಸ್ಯವನ್ನು ಉಳಿಸುವ ಕೆಲಸವನ್ನು ನಾವು ಮಾಡಬೇಕು. ಅದಕ್ಕಾಗಿಯೇ, ಈ ಸಾಮರಸ್ಯ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಸಾಹಿತಿ ಡಾ.ಕೆ.ಷರೀಫಾ ಮಾತನಾಡಿ, ಉಡುಪಿಯಲ್ಲಿ ನಡೆಯಲಿರುವ ಈ ಸಾಮರಸ್ಯ ಸಮಾವೇಶದಲ್ಲಿ ಸಮಾಜದ ಎಲ್ಲ ವರ್ಗಗಳ ಜನ ಭಾಗವಹಿಸುತ್ತಿದ್ದಾರೆ. ಇದು ಎರಡನೆ ಸ್ವಾತಂತ್ರ್ಯ ಸಮರ ಇದರಲ್ಲಿ ಎಲ್ಲರೂ ಕೈ ಜೋಡಿಸಬೇಕು. ಪ್ರತಿದಿನ ಹಿಂದೂ-ಮುಸ್ಲಿಮ್ ಸಂಘರ್ಷ ಏರ್ಪಡುತ್ತಿದೆ. ಧರ್ಮ ಹಾಗೂ ರಾಜಕೀಯದ ಅಪವಿತ್ರ ಮೈತ್ರಿ ಈ ಕೋಮುವಾದ ಎಂದರು.
ನಾವು ಈ ಕೋಮುವಾದವನ್ನು ಮೀರಿ ಬದುಕುವ ಶೇ.95ರಷ್ಟು ಜನ ಇದ್ದೇವೆ. ಸಾಮರಸ್ಯ ಕದಡುವ ಶೇ.5ರಷ್ಟು ಜನರಿಂದ ನಾವು ಹೆದರಬೇಕಾ? ಧಾರವಾಡದಲ್ಲಿ ಕಲ್ಲಂಗಡಿ ಮಾರುತ್ತಿದ್ದ ವ್ಯಕ್ತಿಯ ಮೇಲೆ ನಡೆದ ಹಲ್ಲೆಯ ಬಳಿಕ ಮಾರನೆ ದಿನ ಹಿಂದೂ ಸಹೋದರರೇ ಹೋಗಿ ಅವರ ನೆರವಿಗೆ ನಿಂತಿದ್ದನ್ನು ನಾವು ಮರೆಯಬಾರದು ಎಂದು ಅವರು ಹೇಳಿದರು.
ದಲಿತ ಸಂಘರ್ಷ ಸಮಿತಿಯ ಮುಖಂಡ ಮೋಹನ್ ರಾಜ್ ಮಾತನಾಡಿ, ಆಳುವ ಸರಕಾರಗಳು ಕೋಮುವಾದದ ಪರ ಇವೆ. ದಲಿತರು, ಮುಸ್ಲಿಮರು, ಕ್ರೈಸ್ತರನ್ನು ಗುರಿಯಾಗಿಸಿಕೊಂಡು ಹಲ್ಲೆಗಳು ನಡೆಯುತ್ತಿವೆ. ಸರಕಾರ ಧರ್ಮನಿರಪೇಕ್ಷವಾಗಿ ವರ್ತಿಸಬೇಕು. ಆದರೆ, ಸರಕಾರವೇ ಒಂದು ಧರ್ಮದ ಪರವಾಗಿ ನಿಂತಿದೆ ಎಂದರು.
ದೆಹಲಿಯಲ್ಲಿ ಗಣರಾಜ್ಯೋತ್ಸವದ ಪರೇಡ್ ನಲ್ಲಿ ನಾರಾಯಣಗುರು ಸ್ತಬ್ಧ ಚಿತ್ರಕ್ಕೆ ಅವಕಾಶ ಸಿಗದೆ ಇದ್ದಿದ್ದರಿಂದ ಕರಾವಳಿಯಲ್ಲಿ ಸರ್ಕಾರದ ವಿರುದ್ಧ ಅಸಮಾಧಾನ ಮನೆ ಮಾಡಿತ್ತು. ಅದನ್ನು ಹೋಗಲಾಡಿಸಲು ಈ ಹಿಜಾಬ್ ವಿವಾದವನ್ನು ಮುನ್ನೆಲೆಗೆ ತರಲಾಯಿತು. ಆ ಮೂಲಕ ಜನರಲ್ಲಿ ಗೊಂದಲದ ವಾತಾವರಣ ನಿರ್ಮಿಸಲಾಯಿತು. ಬೆಂಗಳೂರಿನಿಂದ 300ಕ್ಕಿಂತ ಹೆಚ್ಚು ಜನ ಈ ಸಾಮರಸ್ಯ ನಡಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಮುಖಂಡ ವೀರಸಂಗಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.