ಸಕಲೇಶಪುರ: ಮಲೆನಾಡು ಭಾಗದಲ್ಲಿ ಮಿತಿ ಮೀರಿರುವ ಕಾಡಾನೆ ಸಮಸ್ಯೆ ವಿಚಾರದಲ್ಲಿ ಆಳುವವರ ಮಾತುಗಳು ಯಾವುದೇ ಪ್ರಯೋಜನಕ್ಕೆ ಬರುತ್ತಿಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ.
ತನ್ನದಲ್ಲದ ತಪ್ಪಿಗೆ ಕೂಲಿ ಕಾರ್ಮಿಕನೊಬ್ಬ ಇಂದು ಕಾಡಾನೆ ತುಳಿತಕ್ಕೆ ಬಲಿಯಾಗಿದ್ದಾನೆ. ತಾಲೂಕಿನ ಕಬ್ಬಿನಗದ್ದೆ ಗ್ರಾಮದ ರವಿ (48) ಮೃತ ವ್ಯಕ್ತಿ.
ಗಾಳಿಗುಡ್ಡ ಗ್ರಾಮದ ದಿವಾನ್ ಎಸ್ಟೇಟ್ ನ ಮಾಲೀಕ ಬಸವರಾಜು ಎಂಬುವರ ಕಾಫಿ ತೋಟದಲ್ಲಿ ಇಂದು ಬೆಳಿಗ್ಗೆ ಸುಮಾರು 20 ಮಂದಿ ಕೂಲಿ ಕಾರ್ಮಿಕರು ಎಂದಿನಂತೆ ಕೆಲಸ ಮಾಡುತ್ತಿದ್ದರು.
ಈ ವೇಳೆ ಏಕಾಏಕಿ ದಾಳಿ ಮಾಡಿದ ಒಂಟಿ ಸಲಗ ಯಾರದೋ ಮೇಲಿನ ಸಿಟ್ಟಿಗೆ, ತನ್ನ ಮತ್ತು ತನ್ನನ್ನು ನಂಬಿದವರ ಹೊಟ್ಟೆ ತುಂಬಿಸಿಕೊಳ್ಳಲು ದುಡಿಯಲು ಬಂದಿದ್ದ ಬಡಪಾಯಿ ಕಾರ್ಮಿಕನನ್ನು ತುಳಿದು ಸಾಯಿಸಿದೆ.
ಸಾವಿಗೆ ಕೊನೆ ಎಂದು:
ಮಲೆನಾಡು ಭಾಗದ ಸಕಲೇಶಪುರ, ಆಲೂರು, ಬೇಲೂರು, ಅರಕಲಗೂಡು ಮೊದಲಾದ ಕಡೆಗಳಲ್ಲಿ ಉಪಟಳ ನೀಡುತ್ತಿರುವ ಕಾಡಾನೆ ಹಿಂಡಿನ ಆಟಾಟೋಪಕ್ಕೆ ಕಡಿವಾಣ ಎಂದು ಎಂಬುದು ಈ ಭಾಗದಲ್ಲಿ ಕಳೆದ ಹಲವು ವರ್ಷಗಳಿಂದ ನೊಂದು, ಬೇಯುತ್ತಿರುವ ಜನರ ಪ್ರಶ್ನೆಯಾಗಿದೆ.
ಆನೆ-ಮಾನವರ ನಡುವಿನ ಸಂಘರ್ಷಕ್ಕೆ ಕಡಿವಾಣ ಹಾಕಬೇಕಿದ್ದ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ದುರಂತ ಸಂಭವಿಸಿದಾಗ ಮಾತ್ರ ಪರಿಹಾರದ ಮಾತುಗಳನ್ನಾಡಿ ನಂತರ ಸುಮ್ಮನೆ ಕೂರುವುದು ಕಾಡಾನೆ ಕಾಟ ಮಿತಿ ಮೀರಲು ಕಾರಣವಾಗಿದೆ ಎಂಬುದು ಅನೇಕರ ದೂರಾಗಿದೆ.