ಹೊಸದಿಲ್ಲಿ: ಉತ್ತರ ಪ್ರದೇಶದ ಲಾತಿಪುರ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ, ಅಮಾನುಷವಾಗಿ ಥಳಿಸಿ, ಚಿತ್ರಹಿಂಸೆ ನೀಡಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ಉತ್ತರ ಪ್ರದೇಶ ಸರ್ಕಾರಕ್ಕೆ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್ ನೀಡಿದೆ.
ಈ ಮಹಿಳೆ ಪೊಲೀಸ್ ಅಧಿಕಾರಿಯ ಮನೆಗೆಲಸದಾಕೆ ಎನ್ನಲಾಗಿದ್ದು, ಮಹಿಳೆಗೆ ಕಿರುಕುಳ ನೀಡಿದ್ದಕ್ಕೆ ಸಂಬಂಧಿಸಿದ ಮಾಧ್ಯಮ ವರದಿಗಳನ್ನು ಗಮನಿಸಿ, ಎನ್ಎಚ್ಆರ್ಸಿ ಸ್ವಯಂಪ್ರೇರಿತ ವಾಗಿ ಈ ಪ್ರಕರಣವನ್ನು ಕೈಗೆತ್ತಿಕೊಂಡಿದೆ.
ಎನ್ಎಚ್ಆರ್ಸಿ ಆಯುಕ್ತರು ಪ್ರಕರಣದ ಸಂಬಂಧ ಉತ್ತರ ಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾ ನಿರ್ದೇಶಕರಿಗೆ ನೋಟಿಸ್ ನೀಡಿದ್ದು, ಈ ಬಗ್ಗೆ ನಾಲ್ಕು ವಾರಗಳ ಒಳಗಾಗಿ ವಿವರವಾದ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.
ಇದಕ್ಕೆ ಕಾರಣವಾದ ಪೊಲೀಸ್ ಅಧಿಕಾರಿಯ ವಿರುದ್ಧ ಕೈಗೊಳ್ಳಲಾದ ಕ್ರಮ ಮತ್ತು ಮಹಿಳೆಗೆ ನೀಡಿದ ಪರಿಹಾರದ ಬಗ್ಗೆಯೂ ವಿವರ ನೀಡುವಂತೆ ಆದೇಶಿಸಿದೆ.