ಶಿವಮೊಗ್ಗ: ತಂದೆಯವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಕರ್ನಾಟಕದಲ್ಲಿ ಕೋಮು ಉದ್ವಿಗ್ನತೆ ಹೆಚ್ಚುತ್ತಿದೆ ಎಂದು ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ತಂದೆ ಮುಖ್ಯಮಂತ್ರಿಯಾಗಿದ್ದಾಗ ಶಾಂತಿ, ಕೋಮು ಸೌಹಾರ್ದತೆ ಇತ್ತು ಆದರೆ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ವಹಿಸಿಕೊಂಡ ನಂತರ ಪರಿಸ್ಥಿತಿ ಬದಲಾಗಿದೆ ಎಂದು ಹೇಳಿದರು.
ಆದರೆ ತಕ್ಷಣವೇ ಕೋಮು ಉದ್ವಿಗ್ನತೆಗೆ ವಿರೋಧ ಪಕ್ಷಗಳನ್ನು ದೂಷಿಸುವ ಮೂಲಕ ಬೊಮ್ಮಾಯಿಯನ್ನು ಸಮರ್ಥಿಸಿಕೊಂಡ ಅವರು ‘ಇದು ಚುನಾವಣಾ ವರ್ಷವಾಗಿರುವುದರಿಂದ, ಮತದಾರರನ್ನು ಧ್ರುವೀಕರಿಸಲು ವಿರೋಧ ಪಕ್ಷಗಳು ಉದ್ದೇಶಪೂರ್ವಕವಾಗಿ ಕೋಮು ಸಮಸ್ಯೆಗಳನ್ನು ಎತ್ತಿ ಹಿಡಿಯುತ್ತಿವೆ. ಬಿಜೆಪಿಯವರು ಹಾಗೆ ಮಾಡುವುದಿಲ್ಲ’ ಎಂದು ಹೇಳಿದರು.
ಶಿವಮೊಗ್ಗದಲ್ಲಿ ಹೆಚ್ಚುತ್ತಿರುವ ಕೋಮು ಉದ್ವಿಗ್ನತೆಯನ್ನು ಪರಾಮರ್ಶಿಸಿದ ವಿಜಯೇಂದ್ರ, ‘ತಂದೆಯವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹೆಚ್ಚಿನ ಘರ್ಷಣೆಗಳು ಆಗಿರಲಿಲ್ಲ, ಏಕೆಂದರೆ ಅವುಗಳನ್ನು ನಿಯಂತ್ರಣದಲ್ಲಿಡಲು ಅವರು ಯಶಸ್ವಿಯಾಗಿದ್ದಾರೆ. ಈಗ ಪರಿಸ್ಥಿತಿ ನಿಯಂತ್ರಿಸಲು ಸಿಎಂ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಪಿಎಸ್ ಐ ನೇಮಕಾತಿ ಹಗರಣವನ್ನು ಉಲ್ಲೇಖಿಸಿ, ‘ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿರುವಾಗ ವಿರೋಧ ಪಕ್ಷಗಳ ನಾಯಕರು ಸಚಿವರ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಇಂತಹ ಹೇಳಿಕೆಗಳ ಮೂಲಕ ಕಾಂಗ್ರೆಸ್ ನಾಯಕರು ಮತ್ತೆ ಅಧಿಕಾರಕ್ಕೆ ಬರುವ ಹಗಲು ಕನಸು ಕಾಣುತ್ತಿದ್ದಾರೆ’ ಎಂದರು.