ಮ್ಯಾಡ್ರಿಡ್: ಫುಟ್ಬಾಲ್ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ್ದ ಯುಇಎಫ್ಎ ಚಾಂಪಿಯನ್ಸ್ ಲೀಗ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಅತಿಥೇಯ ರಿಯಲ್ ಮ್ಯಾಡ್ರಿಡ್, ಬಲಿಷ್ಠ ಮ್ಯಾಂಚೆಸ್ಟರ್ ಸಿಟಿ ತಂಡದ ವಿರುದ್ಧ ರೋಚಕ ಗೆಲುವು ದಾಖಲಿಸಿ, ಫೈನಲ್ ಪ್ರವೇಶಿಸಿದೆ.
ರಿಯಲ್ ಮ್ಯಾಡ್ರಿಡ್‌ನ ತವರು ಮೈದಾನ ಸ್ಯಾಂಟಿಯಾಗೋ ಬರ್ನೆಬ್ಯೂನಲ್ಲಿ ನಡೆದ ಸೆಮಿಫೈನಲ್‌ನ ದ್ವಿತೀಯ ಚರಣದ ಪಂದ್ಯದಲ್ಲಿ 3-1 ಗೋಲುಗಳ ಅಂತರದಲ್ಲಿ ರಿಯಲ್ ಮ್ಯಾಡ್ರಿಡ್ ತಂಡವನ್ನು ಮಣಿಸುವಲ್ಲಿ ಕಾರ್ಲೋ ಎನ್ಸಲೊಟಿ ಬಳಗ ಯಶಸ್ವಿಯಾಗಿದೆ. ಮೊದಲ ಚರಣದಲ್ಲಿ 3-4 ಅಂತರದಲ್ಲಿ ಅನುಭವಿಸಿದ್ದ ಸೋಲಿಗೆ ತನ್ನದೇ ನೆಲದಲ್ಲಿ ಸೇಡು ತೀರಿಸಿಕೊಂಡಿದೆ.
ಪೂರ್ಣಾವಧಿಯ ಅಂತಿಮ ನಿಮಿಷದವರೆಗೂ ಇಂಗ್ಲಿಷ್ ಕ್ಲಬ್ ಮ್ಯಾಂಚೆಸ್ಟರ್ ಮೊದಲ ಸಿಟಿ, ಏಕೈಕ ಗೋಲಿನ ಮುನ್ನಡೆ ಸಾಧಿಸಿತ್ತು. ಪಂದ್ಯ ಇನ್ನೇನು ಮುಗಿಯಲಿದೆ ಎಂಬಲ್ಲಿಂದ ಪುಟಿದೆದ್ದ ಅತಿಥೇಯ ರಿಯಲ್ ಮ್ಯಾಡ್ರಿಡ್ 5 ನಿಮಿಷದ ಅಂತರದಲ್ಲಿ ಮೂರು ಗೋಲು ದಾಖಲಿಸಿ ಅಮೋಘ ʻಕಮ್‌ಬ್ಯಾಕ್ʼ ಗೆಲುವು ದಾಖಲಿಸಿತು. ರಿಯಲ್ ಮ್ಯಾಡ್ರಿಡ್ ಪರ 90, 91ನೇ ನಿಮಿಷದಲ್ಲಿ ರೊಡ್ರಿಗೋ ಮತ್ತು 95ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಅವಕಾಶದಲ್ಲಿ ಸ್ಟಾರ್ ಆಟಗಾರ ಕರೀಮ್ ಬೆನ್ಝಮಾ ಗೋಲು ದಾಖಲಿಸಿ ತಂಡಕ್ಕೆ ಅವಿಸ್ಮರಣೀಯ ಗೆಲುವು ತಂದುಕೊಟ್ಟರು.
68ನೇ ನಿಮಿಷದಲ್ಲಿ ಬದಲಿ ಆಟಗಾರನಾಗಿ ಮೈದಾನಕ್ಕಿಳಿದ 21 ವರ್ಷದ ರೊಡ್ರಿಗೋ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಗೆಲುವಿನ ಸಂಭ್ರಮಾಚರಣೆಗೆ ಸಿದ್ಧರಾಗಿದ್ದ ಮ್ಯಾನ್ ಸಿಟಿ ಅಭಿಮಾನಿಗಳಿಗೆ ಆಘಾತ ನೀಡಿದರು. 89ನೇ ನಿಮಿಷದವರೆಗೂ 1-0 ಗೋಲಿನಿಂದ ಮುನ್ನಡೆ ಸಾಧಿಸಿದ್ದ ಸಿಟಿ, ಎರಡು ನಿಮಿಷ ಕಳೆಯುವಷ್ಟರಲ್ಲಿ 2 ಗೋಲುಗಳನ್ನು ಬಿಟ್ಟುಕೊಟ್ಟು ತೀವ್ರ ನಿರಾಸೆ ಅನುಭವಿಸಿತು. ಸೆಮಿಪೈನಲ್‌ನ ಎರಡು ಚರಣದ ಪಂದ್ಯಗಳ ಬಳಿಕ ರಿಯಲ್ ಮ್ಯಾಡ್ರಿಡ್ ಒಟ್ಟು 6-5 ಗೋಲುಗಳ ಅಂತರದಲ್ಲಿ ಫೈನಲ್ ಪ್ರವೇಶಿಸಿದೆ.