ಮರಡೋನ ಜೆರ್ಸಿ ದಾಖಲೆಯ 70 ಕೋಟಿ ರೂಪಾಯಿ ಮೌಲ್ಯಕ್ಕೆ ಹರಾಜು

Prasthutha|

1986ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಫುಟ್‌ಬಾಲ್ ದಿಗ್ಗಜ ಅರ್ಜೆಂಟಿನಾದ ಡಿಯಾಗೊ ಮರಡೊನಾ ಧರಿಸಿದ್ದ ಪೋಷಾಕು (ಜೆರ್ಸಿ), ಬರೋಬ್ಬರಿ ₹ 70 ಕೋಟಿ ಮೌಲ್ಯಕ್ಕೆ ಹರಾಜಾಗಿದೆ.
ಮೆಕ್ಸಿಕೋ ನಗರದಲ್ಲಿ 1986ರ ಜೂನ್ 22ರಂದು ನಡೆದಿದ್ದ ಫಿಫಾ ವಿಶ್ವಕಪ್ ಟೂರ್ನಿಯ ಇಂಗ್ಲೆಂಡ್ – ಅರ್ಜೆಂಟಿನಾ ನಡುವಿನ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಮರಡೊನಾ ಎರಡು ಗೋಲು ದಾಖಲಿಸಿದ್ದರು. ಇದರಲ್ಲಿ ಮೊದಲನೇ ಗೋಲು ‘ದೇವರ ಕೈ’ ಎಂದೇ ಫುಟ್ಬಾಲ್‌ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

- Advertisement -

ಹೆಡ್ಡರ್‌ ಎಂದು ಭಾವಿಸುವ ರೀತಿಯಲ್ಲಿ ಕೈಯಿಂದ ಗೋಲು ದಾಖಲಿಸಿದ್ದ ಮರಡೊನಾ ತಂಡವನ್ನು ಸೆಮಿಫೈನಲ್‌ಗೆ ಕೊಂಡೊಯ್ದಿದ್ದರು. ಆ ವರ್ಷ ಅರ್ಜೆಂಟಿನಾ ವಿಶ್ವ ಚಾಂಪಿಯನ್‌ ಪಟ್ಟಕ್ಕೇರುವಲ್ಲಿ ಮರಡೊನಾ ಪ್ರಧಾನ ಪಾತ್ರ ವಹಿಸಿದ್ದರು.
ಆ ಪಂದ್ಯದಲ್ಲಿ ಮರಡೊನಾ ಧರಿಸಿದ್ದ ಪೋಷಾಕನ್ನು ಸೋತ್‌ಬಿ ಸಂಸ್ಥೆಯು ಏಪ್ರಿಲ್ 20ರಂದು ಆನ್‌ಲೈನ್‌ನಲ್ಲಿ ಹರಾಜಿಗಿಟ್ಟಿತ್ತು. ಬುಧವಾರ ಹರಾಜನ್ನು ಕೊನೆಗೊಂಡಿದ್ದು, ʻಐತಿಹಾಸಿಕ ಜೆರ್ಸಿʼ ದಾಖಲೆಯ ₹ 71,16,66,690 ಕೋಟಿ ಮೌಲ್ಯಕ್ಕೆ ಮಾರಾಟವಾಗಿರುವುದಾಗಿ ಸೋತ್‌ಬಿ ತಿಳಿಸಿದೆ. ಆದರೆ ಖರೀದಿದಾರರ ಮಾಹಿತಿಯನ್ನು ಗೌಪ್ಯವಾಗಿಟ್ಟಿದೆ. ಇಂಗ್ಲೆಂಡ್ ತಂಡದ ಮಾಜಿ ಮಿಡ್‌ಫೀಲ್ಡರ್ ಸ್ಟೀವ್ ಹಾಜ್ ಅವರ ಸಂಗ್ರಹದಲ್ಲಿದ್ದ ಈ ಅಪೂರ್ವ ಪೋಷಾಕು ಖರೀದಿಗಾಗಿ ಏಳು ಮಂದಿ ಬಿಡ್‌ದಾರರು ಪೈಪೋಟಿ ನಡೆಸಿದ್ದರು.


ಕ್ರೀಡಾ ಸಲಕರಣೆಯ ಹರಾಜಿನಲ್ಲಿಯೇ ಅತ್ಯಂತ ಹೆಚ್ಚು ಮೌಲ್ಯ ಪಡೆದ ದಾಖಲೆ ಮರಡೊನಾ ಧರಿಸಿದ್ದ ಜೆರ್ಸಿ ಪಾಲಾಗಿದೆ. 2019ರಲ್ಲಿ ನ್ಯೂಯಾರ್ಕ್ ಯಾಂಕೀಸ್ ತಂಡದ ಬೇಬ್ ರುಥ್ ಧರಿಸಿದ್ದ ಪೋಷಾಕು ₹ 43 ಕೋಟಿಗೆ ಹರಾಜಾಗಿದ್ದು ಇದುವರೆಗಿನ ದಾಖಲೆಯಾಗಿತ್ತು.

- Advertisement -


`ದೇವರ ಕೈʼ ಎಂದಿದ್ದ ಮರಡೋನಾ !
ಇಂಗ್ಲೆಂಡ್‌ ವಿರುದ್ಧದ ಅಂದಿನ ಪಂದ್ಯದಲ್ಲಿಹೆಡರ್ ಮೂಲಕ ಮೊದಲ ಗೋಲ್ ದಾಖಲಿಸುವಾಗ ಚೆಂಡು ಮರಡೋನಾರ ಬಲಗೈಗೆ ಸವರಿತ್ತು. ನಿಯಮ ಪ್ರಕಾರ ಆ ಗೋಲ್ ಅಸಿಂಧುವಾಗಬೇಕಿತ್ತು. ಆದರೆ ರೆಫರಿ ಗಮನಕ್ಕೆ ಇದು ಬಾರದ ಕಾರಣ ಮತ್ತು ವಿಎಆರ್‌ (ವೀಡಿಯೋ ರಿವ್ಯೂ) ಆಯ್ಕೆ ಇಲ್ಲದಿದ್ದ ಕಾರಣ ಆ ಗೋಲು ʻಬೋನಸ್‌ʼ ಆಗಿ ಲಭಿಸಿತ್ತು. ಇದರಿಂದಾಗಿ 2-1 ಅಂತರದಿಂದ ಪಂದ್ಯ ಗೆದ್ದ ಅರ್ಜೆಂಟಿನಾ ಸೆಮಿಫೈನಲ್ ಪ್ರವೇಶಿಸಿತ್ತು.
ಪಂದ್ಯದ ಬಳಿಕ ಪ್ರತಿಕ್ರಿಯಿಸಿದ್ದ ಮರಡೋನಾ, ʻಆ ಗೋಲ್ ದಾಖಲಿಸಲು ನೆರವಾಗಿದ್ದು ಸ್ವಲ್ಪ ನನ್ನ ತಲೆ ಮತ್ತು ದೇವರ ಕೈ (ಹ್ಯಾಂಡ್ಸ್ ಆಫ್‌ ಗಾಡ್)ʼ ಎಂದಿದ್ದರು. ಆ ದಿನದಿಂದ ಮರಡೋನಾ ಅವರಿಗೆ ಹ್ಯಾಂಡ್ಸ್ ಆಪ್ ಗಾಡ್ ವಿಶೇಷಣ ಅಂಟಿಕೊಂಡಿತ್ತು. ಒಂದಷ್ಟು ವಿವಾದಗಳಿದ್ದರೂ ಮರಡೋನಾ ಶೋಷಿತರ ಪರ, ಸಮಾಜ ಪರ ನಿಲುವನ್ನು ಹೊಂದಿದ್ದರು. ಕಾಲ್ಚೆಂಡಿನಾಟದ ಕಾಲ್ಚಳಕದಲ್ಲಿ ಸರಿಸಾಟಿಯಿಲ್ಲದ ವಿಶ್ವ ಕಂಡ ಸರ್ವಶ್ರೇಷ್ಠ ಆಟಗಾರನಾಗಿದ್ದ ಡಿಯಾಗೊ ಮರಡೊನಾ, ನವೆಂಬರ್‌ 25, 2020ರಂದು ತನ್ನ 60ನೇ ವಯಸ್ಸಿನಲ್ಲಿ ನಿಧನರಾದರು.

Join Whatsapp