ಐಪಿಎಲ್ 2022; ಮೊದಲ ಜಯದ ನಿರೀಕ್ಷೆಯಲ್ಲಿರುವ ಮುಂಬೈಗೆ ರಾಜಸ್ಥಾನ ಸವಾಲು

Prasthutha|

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ನ 15ನೇ ಆವೃತ್ತಿಯಲ್ಲಿ ಶನಿವಾರ ಎರಡು ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ಸತತ 2 ಸೋಲು ಕಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಭರ್ಜರಿ ಫಾರ್ಮ್ ನಲ್ಲಿರುವ ಗುಜರಾತ್ ಟೈಟನ್ಸ್ ತಂಡದ ಸವಾಲನ್ನು ಎದುರಿಸಲಿದೆ. ರಾತ್ರಿ ನಡೆಯುವ 2ನೇ ಪಂದ್ಯದಲ್ಲಿ ಸೋಲಿನ ಸರಪಳಿಯಲ್ಲಿ ಸಿಲುಕಿ ಒದ್ದಾಡುತ್ತಿರುವ ಮುಂಬೈ ಇಂಡಿಯನ್ಸ್, ಸಂಜು ಸ್ಯಾಮ್ಸನ್ ಸಾರಥ್ಯದ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಡಿವೈ ಪಾಟೀಲ್ ಮೈದಾನದಲ್ಲಿ ಮೊದಲ ಗೆಲುವಿಗಾಗಿ ಹೋರಾಟ ನಡೆಸಲಿದೆ.

- Advertisement -

ಆರ್ ಸಿಬಿ vs ಗುಜರಾತ್ ಟೈಟನ್ಸ್

ಚೊಚ್ಚಲ ಐಪಿಎಲ್ ಆಡುತ್ತಿರುವ ಗುಜರಾತ್ ಟೈಟನ್ಸ್ ಇದುವರೆಗೂ ಆಡಿರುವ 8 ಪಂದ್ಯಗಳಲ್ಲಿ 7 ಪಂದ್ಯಗಳಲ್ಲಿ ಗೆದ್ದು ಬಲಿಷ್ಠ ತಂಡವಾಗಿ ರೂಪುಗೊಂಡಿದೆ. ಮತ್ತೊಂದೆಡೆ ಅದೇ ರಾಗ ಅದೇ ಹಾಡು ಎಂಬಂತೆ ಆರ್ ಸಿಬಿ ತಂಡ ಈ ಬಾರಿಯೂ ಪ್ಲೇ ಆಫ್ ಹಂತಕ್ಕೇರಲು ಕಠಿಣ ಹಾದಿಯನ್ನು ದಾಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.  ಆಡಿರುವ 9 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಸಾಧಿಸಿದೆ. ಕಳೆದ ಎರಡು ಪಂದ್ಯಗಳಲ್ಲಿ ಕ್ರಮವಾಗಿ ಹೈದರಾಬಾದ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳಿಗೆ ಶರಣಾಗಿದೆ.

- Advertisement -

ಬೆಂಗಳೂರು ತಂಡ ಬ್ಯಾಟಿಂಗ್ ವಿಭಾಗದಲ್ಲಿ ಹೆಚ್ಚು ಸಮಸ್ಯೆ ಎದುರಿಸುತ್ತಿದೆ. ಅಗ್ರ ಕ್ರಮಾಂಕದಲ್ಲಿ ಡು ಪ್ಲೆಸಿಸ್, ಕೊಹ್ಲಿ, ಮ್ಯಾಕ್ಸ್ವೆಲ್ ಬ್ಯಾಟ್ ನಿಂದ ಪಂದ್ಯವನ್ನು ಗೆಲ್ಲಿಸಿಕೊಡುವ ಇನ್ನಿಂಗ್ಸ್ ಇನ್ನೂ ಬಂದಿಲ್ಲ. ಕೊಹ್ಲಿ ಕಳಪೆ ಫಾರ್ಮ್ ತಂಡವನ್ನು ಚಿಂತೆಗೀಡು ಮಾಡಿದೆ. ಎದುರಾಳಿ ಪಾಲಯದಲ್ಲಿ ಮುಹಮ್ಮದ್ ಶಮಿ, ಫರ್ಗ್ಯೂಸನ್, ರಶೀದ್ ಖಾನ್ ಅವರಂತಹ ವಿಶ್ವ ದರ್ಜೆಯ ಬೌಲಿಂಗ್ ವಿಭಾಗವನ್ನು  ಎದುರಿಸುವುದು ಆರ್ಸಿಬಿ ಬ್ಯಾಟರ್ ಗಳಿಗೆ ಅಗ್ನಿಪರೀಕ್ಷೆಯಾಗಲಿದೆ.

ಆರ್ಸಿಬಿ ವಿರುದ್ಧದ ಪಂದ್ಯವನ್ನು ಗೆದ್ದರೆ, ಮೊದಲ ತಂಡವಾಗಿ ಗುಜರಾತ್ ಫ್ಲೇ ಆಫ್ ಹಂತ ಪ್ರವೇಶಿಸಲಿದೆ.

ಸೋಲಿನ ಸರಪಳಿ ಕಳಚುತ್ತಾ ಮುಂಬೈ ?

15ನೇ ಆವೃತ್ತಿಯಲ್ಲಿ ಆಡಿರುವ 8 ಪಂದ್ಯಗಳಲ್ಲಿ ಸೋಲು ಕಂಡಿರುವ ಮುಂಬೈ ಇಂಡಿಯನ್ಸ್, ಈಗಾಗಲೇ ಪ್ಲೇ ಆಫ್ ಸ್ಪರ್ಧೆಯಿಂದ ಹೊರನಡೆದಿದೆ. 5 ಬಾರಿಯ ಚಾಂಪಿಯನ್ ತಂಡ ಈ ಬಾರಿಯ ಟೂರ್ನಿಯಲ್ಲಿ ಮೊದಲ ಗೆಲುವಿನ ನಿರೀಕ್ಷೆಯಲ್ಲಿದ್ದು, ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ. ರಾಜಸ್ಥಾನ ಆಡಿರುವ 8 ಪಂದ್ಯಗಳಲ್ಲಿ ಕೇವಲ 2 ಪಂದ್ಯಗಳಲಷ್ಟೇ ಸೋಲು ಕಂಡಿದೆ. ನಾಯಕ ರೋಹಿತ್ ಶರ್ಮಾ ಕಳಪೆ ಫಾರ್ಮ್ ಸೇರಿದಂತೆ ಎಲ್ಲಾ ವಿಭಾಗದಲ್ಲೂ ಮುಂಬೈ ವೈಫಲ್ಯ ಮುಂದುವರಿದಿದೆ. ಮತ್ತೊಂದೆಡೆ ಜಾಸ್ ಬಟ್ಲರ್, ಯುಝವೇಂದ್ರ ಚಾಹಲ್, ಟ್ರೆಂಟ್ ಬೌಲ್ಟ್ ಅಮೋಘ ಪ್ರದರ್ಶನ ನೀಡುತ್ತಿದ್ದು, ನಾಯಕ ಸಂಜು ಸ್ಯಾಮ್ಸನ್ ಒತ್ತಡವಿಲ್ಲದೆ ಪಂದ್ಯಗಳನ್ನು ಗೆಲ್ಲಲು ನೆರವಾಗುತ್ತಿದ್ಧಾರೆ.



Join Whatsapp