ಲಾರ್ಡ್ಸ್ ಮೈದಾನದಲ್ಲಿ ‘ಆಝಾನ್’ ಇಂಪು: ಕ್ರೀಡಾಂಗಣದಲ್ಲಿ ಮೊದಲ ಬಾರಿಗೆ ಇಫ್ತಾರ್ ಆಯೋಜನೆ

Prasthutha|

ಲಾರ್ಡ್ಸ್: ಕ್ರಿಕೆಟ್’ನ ʻತವರು ಮೈದಾನʼ ಎಂದೇ ಪ್ರಸಿದ್ಧವಾಗಿರುವ ಇಂಗ್ಲೆಂಡ್ ನ ಲಾರ್ಡ್ಸ್ ಸ್ಟೇಡಿಯಂ, ಪವಿತ್ರ ರಮಝಾನ್ ತಿಂಗಳಲ್ಲಿ ಐತಿಹಾಸಿಕ ಬದಲಾವಣೆಗೆ ಸಾಕ್ಷಿಯಾಗಿದೆ. ಇದೇ ಮೊದಲ ಬಾರಿಗೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು ಗಣ್ಯರಿಗೆ ಇಫ್ತಾರ್ ಕೂಟವನ್ನು ಆಯೋಜಿಸಿದೆ. ಇಸಿಬಿಯ ಐಟಿ ಹೆಲ್ಪ್ಡೆಸ್ಕ್ ಅನ್ನು ನಿರ್ವಹಿಸುವ ತಮೀನಾ ಹುಸೇನ್ ಈ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

- Advertisement -

ಲಾರ್ಡ್ಸ್ ʻಲಾಂಗ್ರೂಮ್ʼನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಇಸಿಬಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಾಮ್ ಹ್ಯಾರಿಸನ್, ʻಈ ಅಪೂರ್ವ ಸಂಜೆಯಲ್ಲಿ ಕ್ರಿಕೆಟ್ ಮೂಲಕ ಪ್ರೀತಿಯ ಸಂಪರ್ಕ ಸಾಧಿಸುವುದರ ಜೊತೆಗೆ, ನಂಬಿಕೆ, ಸಂಸ್ಕೃತಿಗಳ ಕುರಿತು ಇನ್ನಷ್ಟು ಆಳವಾಗಿ ಅರ್ಥೈಸಿಕೊಳ್ಳಲು ಇಫ್ತಾರ್ ಮೂಲಕ ಸಾಧ್ಯವಾಗಿದೆʼ ಎಂದು ಸಂತಸ ಹಂಚಿಕೊಂಡರು. ಇಂಗ್ಲೆಂಡ್ ನ ಏಕದಿನ ತಂಡದ ನಾಯಕ ಇಯಾನ್ ಮಾರ್ಗನ್, ಮಾಜಿ ನಾಯಕ ಗ್ರಹಾಂ ಗೂಚ್, ಲಿಡಿಯಾ ಗ್ರೀನ್ವೇ ಮತ್ತು ಟಮ್ಮಿ ಬ್ಯೂಮಾಂಟ್ ಸೇರಿದಂತೆ ಅನೇಕ ಹಾಲಿ-ಮಾಜಿ ಕ್ರಿಕೆಟಿಗರು, ಆಹ್ವಾನಿತರು ಉಪಸ್ಥಿತರಿದ್ದರು.

“ಇಸಿಬಿ ಆಯೋಜಿಸಿದ್ದ ಮೊದಲ ಇಫ್ತಾರ್, ನಿಜವಾಗಿಯೂ ಆನಂದದಾಯಕ ಸಂಜೆಯಾಗಿತ್ತು. ರಮಝಾನ್ ಕರೀಮ್” ಎಂದು ಮೋರ್ಗನ್ ಟ್ವೀಟ್ ಮಾಡಿದ್ದಾರೆ.

- Advertisement -

 ಲಾರ್ಡ್ಸ್ ಜೊತೆಗೆ, ಎಡ್ಜ್ಬಾಸ್ಟನ್ ಮೈದಾನದಲ್ಲೂ ಪಂದ್ಯ ಪ್ರಾರಂಭವಾಗುವ ಮೊದಲು ಸ್ಥಳೀಯ ಕ್ರಿಕೆಟಿಗರು, ತರಬೇತುದಾರರು ಮತ್ತು ಕ್ಲಬ್ ಸಿಬ್ಬಂದಿಗೆ ಇಫ್ತಾರ್ ಕೂಟವನ್ನು ಆಯೋಜಿಸಲಾಗಿತ್ತು.

ಹಿರಿಯ ಮೌಲ್ವಿ ಹಸನ್ ರಸೂಲ್ ಅವರು ಪ್ರಾರ್ಥನೆಯ ಕರೆ (ಆಝಾನ್) ಕೊಡುತ್ತಿರುವುದನ್ನು ಮತ್ತು ಕಾರ್ಯಕ್ರಮದಲ್ಲಿ ಭಾಗಿಯಾದವರು ತದೇಕಚಿತ್ತದಿಂದ ಆಲಿಸುತ್ತಿರುವ ವೀಡಿಯೋವನ್ನು ಇಸಿಬಿ ತನ್ನ ಟ್ವಿಟರ್ ಹ್ಯಾಂಡಲ್ ಮತ್ತು ಅಧಿಕೃತ ವೆಬ್ ಸೈಟ್ ನಲ್ಲಿ ಹಂಚಿಕೊಂಡಿದೆ.

Join Whatsapp