ಮಂಗಳೂರು: ಕಳೆದ 2020ರ ಜೂನ್ 5ರಂದು ಮುಲ್ಕಿ ಬ್ಯಾಂಕ್ ಬಳಿ ಹಾಡಹಗಲೇ ನಡೆದಿದ್ದ ಉದ್ಯಮಿ ಅಬ್ದುಲ್ ಲತೀಫ್ ಕೊಲೆ ಪ್ರಕರಣದ ಆರೋಪಿಗಳಿಗೆ ರಾಜ್ಯ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
ಆರೋಪಿಗಳಾದ ಮುಲ್ಕಿ ನಗರ ಪಂಚಾಯತ್ ಸದಸ್ಯ ದಾವುದ್ ಹಕೀಂ, ಟಿಂಬರ್ ಬಾವ ಯಾನೆ ಮೊಹಮ್ಮದ್ ಬಾವ, ಮುಸ್ತಫ ಪಕ್ಷಕೆರೆಗೆ ನೀಡಿದ್ದ ಜಾಮೀನನ್ನು ರದ್ದುಗೊಳಿಸುವಂತೆ ಲತೀಫ್ ಪತ್ನಿ, ನ್ಯಾಯವಾದಿ ಮುಬೀನಾ ಸುಪ್ರೀಂ ಮೆಟ್ಟಿಲೇರಿದ್ದರು. ಇದೀಗ ಸುಪ್ರೀಂ ಕೋರ್ಟ್ ಆರೋಪಿಗಳ ಜಾಮೀನನ್ನು ರದ್ದುಗೊಳಿಸಿದೆ. ಪೀರ್ಯಾದಿದಾರರ ಪರ ಸುಪ್ರೀಂ ಕೋರ್ಟ್ ವಕೀಲ ಶೇಖರ ದೇವದಾಸ ವಾದ ಮಂಡಿಸಿದ್ದರು.
ಸುಪ್ರೀಂ ಕೋರ್ಟ್ ಜಾಮೀನು ತಿರಸ್ಕರಿಸಲ್ಪಟ್ಟ ಆರೋಪಿಗಳಾದ ದಾವೂದ್ ಹಕೀಂ, ಮೊಹಮ್ಮದ್ ಬಾವ, ಮುಸ್ತಫ ಮತ್ತು ಕಾಪಿಕಾಡ್ ನಿವಾಸಿ ಮಯ್ಯದ್ದಿ, ಪಕ್ಷಿಕೆರೆಯ ಬಶೀರ್ ಹುಸೈನ್ ಇನ್ನೂ ತಲೆಮರೆಸಿಕೊಂಡಿದ್ದು, ಇನ್ನೂ ಬಂಧನವಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿ ವಫಾ, ಮೊಹಮ್ಮದ್ ರಾಝಿಮ್, ಮೊಹಮ್ಮದ್ ಹಾಶಿಂ, ಅಬೂಬಕರ್ ಸಿದ್ದೀಕ್, ನಿಸಾರ್ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಕೊಲೆ ಪ್ರಕರನದಲ್ಲಿ 10 ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದರೂ 5 ಮಂದಿಯ ಮಾತ್ರ ಬಂಧನವಾಗಿದ್ದು, ಇನ್ನುಳಿದ 5 ಮಂದಿ ಬಂಧನವಾಗದ ಹಿನ್ನೆಲೆಯಲ್ಲಿ ಹೈಕೋರ್ಟ್ ನಲ್ಲಿ ರಾಜ್ಯ ಸರಕಾರ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು, ಪೊಲೀಸ್ ಆಯುಕ್ತ, ಮುಲ್ಕಿ SHO ವಿರುದ್ಧ ರಿಟ್ ಅರ್ಜಿ ಸಲ್ಲಿಕೆಯಾಗಿದೆ.