ನವದೆಹಲಿ: ದೇಶವಾಸಿಗಳು ಏನನ್ನು ತಿನ್ನಬೇಕು, ಏನನ್ನು ತಿನ್ನಬಾರದು ಎಂದು ಹೇಳುವುದು ಸರ್ಕಾರದ ಕೆಲಸವಲ್ಲ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.
ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಸಮುದಾಯಗಳ ನಡುವೆ ಯಾವುದೇ ಕೋಮು ಅಸಹಿಷ್ಣುತೆ ಇಲ್ಲ, ಕೇವಲ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕದಡಲು ಬಯಸುವ ಕೆಲವು ಶಕ್ತಿಗಳ ಸಂಚು ಇದು ಎಂದು ಹೇಳಿದ್ದಾರೆ.
ಭಾರತದಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಲಾಗಿಲ್ಲ ಮತ್ತು ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ನಿಷೇಧಿಸುವುದನ್ನು ಕೋಮು ಸಮಸ್ಯೆ ಎಂದು ಬಣ್ಣಿಸಬಾರದು ಎಂದು ಹೇಳಿದರು. ಹಲಾಲ್ ಮಾಂಸವನ್ನು ನಿಷೇಧಿಸಲು ಸರ್ಕಾರ ಯೋಜಿಸಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಭಾರತದ ಪ್ರಜೆಗಳಿಗೆ ಅವರು ಬಯಸಿದ್ದನ್ನು ತಿನ್ನುವ ಸ್ವಾತಂತ್ರ್ಯವಿದೆ ಎಂದು ಹೇಳಿದರು.