ಬಿಜೆಪಿ/ ಸಂಘಪರಿವಾರ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದಾಗ ಏನೇನಾಗಿತ್ತು ? ಠಾಣೆಯ ಮೇಲೆ ಬೀಳೋ ಮುಸ್ಲಿಮ್ ಕಲ್ಲಿಗೂ, ಹಿಂದೂ ಕಲ್ಲಿಗೂ ಏನು ವ್ಯತ್ಯಾಸ ?

Prasthutha|

ಹುಬ್ಬಳ್ಳಿಯಲ್ಲಿ ಠಾಣೆಯ ಮೇಲೆ ನಡೆದ ಕಲ್ಲು ತೂರಾಟದಲ್ಲಿ ಮುಸ್ಲಿಮ್ ಯುವಕರು ಆರೋಪಿಗಳಾದರೆ ಪೊಲೀಸರು ಸಂತ್ರಸ್ತರಾಗಿದ್ದಾರೆ. ಇಡೀ ಪೊಲೀಸ್ ಇಲಾಖೆ, ಸರ್ಕಾರ ಮತ್ತು ಜನರು ಹುಬ್ಬಳ್ಳಿ ಪೊಲೀಸರ ಪರ ನಿಂತಿದ್ದಾರೆ. ಆದರೆ ಬಿಜೆಪಿ ಮತ್ತು ಸಂಘಪರಿವಾರ ನಡೆಸಿದ ಪೊಲೀಸ್ ಠಾಣೆಯ ಮೇಲಿನ ದಾಳಿಯಲ್ಲಿ ಸಂತ್ರಸ್ತರು, ಆರೋಪಿಗಳು ಪೊಲೀಸರೇ ಆಗಿರುತ್ತಾರೆ.

- Advertisement -

ಆಗ ಬಿಜೆಪಿ ಸರ್ಕಾರ, ಡಿ. ವಿ. ಸದಾನಂದ ಗೌಡರು ಮುಖ್ಯಮಂತ್ರಿಗಳು. 2011ರ ಡಿಸೆಂಬರ್ 14ರಂದು ಜಾಲ್ಸೂರಿನ ಹಿಂದೂ ಕಾರ್ಯಕರ್ತರು ಹಿಂದೂ ಹುಡುಗಿ-ಮುಸ್ಲಿಮ್ ಯುವಕ ಜೋಡಿಯನ್ನು ಹಿಡಿದು ಸುಳ್ಯ ಪೊಲೀಸರಿಗೆ ಒಪ್ಪಿಸಿದ್ದರು. ಇದೊಂದು ನೈತಿಕ ಪೊಲೀಸ್ ಗಿರಿ ಪ್ರಕರಣ. ಕಾನೂನಿನ ಪ್ರಕಾರ ಪೊಲೀಸರು ಹಿಂದೂ ಕಾರ್ಯಕರ್ತರ ಮೇಲೆ ಕೇಸು ದಾಖಲಿಸಬೇಕಿತ್ತು. ಬಿಜೆಪಿ ಸರ್ಕಾರವಾದ್ದರಿಂದ ನಮಗ್ಯಾಕೆ ಉಸಾಬರಿ ಎಂದು ಹಿಂದೂ ಕಾರ್ಯಕರ್ತರ ಮೇಲೂ ಕೇಸ್ ಹಾಕದೇ, ಜೋಡಿಗಳ ಮೇಲೂ ಕೇಸ್ ಹಾಕದೇ ಪೊಲೀಸರು ಬಿಟ್ಟು ಬಿಟ್ಟಿದ್ದರು.

ನಾವು ಹಿಡಿದುಕೊಟ್ಟ  ಜೋಡಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಅವರನ್ನು ಬಿಟ್ಟು ಬಿಟ್ಟಿದ್ದಕ್ಕೆ ಆಕ್ರೋಶಗೊಂಡ ಹಿಂದುತ್ವ ಕಾರ್ಯಕರ್ತರು  ರಾತ್ರಿ ಸುಮಾರು 9 ಗಂಟೆಗೆ ಪೊಲೀಸ್ ಠಾಣೆಯ ಎದುರು ಜಮಾಯಿಸಿ ಕಲ್ಲು ತೂರಾಟ ಮಾಡಿತ್ತು. ಕಲ್ಲು ತೂರಾಟದಲ್ಲಿ ಮಹಿಳಾ ಎಎಸ್ ಐ, ಪೊಲೀಸ್ ಸಬ್ ಇನ್ಸ್ ಸ್ಪೆಕ್ಟರ್, ಪೊಲೀಸ್ ಕಾನ್ಸ್ ಸ್ಟೇಬಲ್ ಗಳ ತಲೆ ಒಡೆದಿತ್ತು. ಇಡೀ ಠಾಣೆ ರಕ್ತಮಯವಾಗಿತ್ತು. ಇವೆಲ್ಲದಕ್ಕೂ ನಾನು ಪ್ರತ್ಯಕ್ಷ ಸಾಕ್ಷಿಯಾಗಿದ್ದೆ. ಕೊನೆಗೆ ಪೊಲೀಸರು ಅನಿವಾರ್ಯಾವಾಗಿ ಲಾಠಿ ಚಾರ್ಜ್ ಮಾಡಿದರು. ಆ ಬಳಿಕ ಪೊಲೀಸರು ಕಲ್ಲು ತೂರಾಟ ನಡೆಸಿದ್ದ ಹಿಂದುತ್ವ ಕಾರ್ಯಕರ್ತರು ಮತ್ತು ಬಿಜೆಪಿ ನಾಯಕರ ವಿರುದ್ದ ಎಫ್ ಐಆರ್ ದಾಖಲಿಸಿದರು.

- Advertisement -

ಆದರೆ ಹಲ್ಲೆಗೆ ಒಳಗಾದ ಪೊಲೀಸರು ಬಿಜೆಪಿ ನಾಯಕರು ಮತ್ತು ಹಿಂದುತ್ವ ಕಾರ್ಯಕರ್ತರ ಮೇಲೆ ಎಫ್ ಐಆರ್ ದಾಖಲಿಸಿದ್ದು ತಪ್ಪು ಎಂಬ ನಿರ್ಧಾರಕ್ಕೆ ಪೊಲೀಸ್ ಇಲಾಖೆ ಬಂದಿತ್ತು. ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಸೇರಿದಂತೆ ಸುಳ್ಯ ಠಾಣೆಯ ಪೊಲೀಸರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿತು. ಹಿಂದುತ್ವ ಕಾರ್ಯಕರ್ತರಿಂದ ತಲೆ ಒಡೆಸಿಕೊಂಡಿದ್ದಲ್ಲದೇ, ಬ್ಯಾಂಡೇಜ್ ಹಾಕಿದ ಸ್ಥಿತಿಯಲ್ಲೇ ಪೊಲೀಸರು ವರ್ಗಾವಣೆಗೆ ಒಳಗಾಗಬೇಕಾಯಿತು.

ವಿಷಯ ಇಷ್ಟಕ್ಕೇ ಮುಗಿಯುವುದಿಲ್ಲ. ಅಮಾಯಕ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ದುರುದ್ದೇಶದಿಂದ ಅಮಾನತು ಮಾಡಿದ ಬಗ್ಗೆ ಆಕ್ರೋಶಗೊಂಡ ಸುಳ್ಯ ಮತ್ತು ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಪೊಲೀಸರ ಪತ್ನಿಯರು ಮೊದಲ ಬಾರಿಗೆ ಪ್ರತಿಭಟನೆ ನಡೆಸಿದರು. ಡ್ಯೂಟಿ ಸಮಯದಲ್ಲಿ ಬಿಜೆಪಿ ಕಾರ್ಯಕರ್ತರು, ಹಿಂದುತ್ವ ಕಾರ್ಯಕರ್ತರಿಂದ ಹಲ್ಲೆಗೆ ಒಳಗಾಗಿದ್ದಲ್ಲದೇ, ಅಮಾನತುಗೊಂಡು ಅನ್ಯಾಯಕ್ಕೊಳಗಾಗಿರುವ ಪೊಲೀಸರಿಗೆ ವಾರದೊಳಗೆ ನ್ಯಾಯ ಒದಗಿಸಬೇಕು. ಇಲ್ಲದೇ ಇದ್ದರೆ ನಾವು ಮತ್ತು ನಮ್ಮ ಮಕ್ಕಳ ಸಾಮೂಹಿಕವಾಗಿ ಠಾಣೆಯ ಎದುರು ಉಪವಾಸ ಸತ್ಯಾಗ್ರಹ ನಡೆಸುತ್ತೇವೆ ಎಂದು ಪೊಲೀಸರ ಪತ್ನಿಯರು ಪುತ್ತೂರು ಎಎಸ್ಪಿಗೆ ಮನವಿ ಸಲ್ಲಿಸಿದರು. ಆದರೆ ಮೊದಲ ಬಾರಿ ಪ್ರತಿಭಟನೆ ನಡೆಸಿದ ಪೊಲೀಸರ ಪತ್ನಿಯ ಮನವಿಗೆ ಸರ್ಕಾರ ಕ್ಯಾರೇ ಅನ್ನಲಿಲ್ಲ. ವಿಪರ್ಯಾಸ ಎಂದರೆ ನಂತರದ ಬೆಳವಣಿಗೆಯಲ್ಲಿ ಹಿಂದೂ ಹಿತರಕ್ಷಣಾ ವೇದಿಕೆ ಬ್ಯಾನರ್ ನಡಿಯಲ್ಲಿ ಸುಳ್ಯ ಪೊಲೀಸರ ವಿರುದ್ಧ ನಡೆಸಿದ ಪ್ರತಿಭಟನಾ ಸಭೆಯಲ್ಲಿ ಹಿಂದೂ ಮುಖಂಡರು ಪೊಲೀಸ್ ಇಲಾಖೆಯ ಸಿಬಂದಿಯ ತಾಯಿ, ಪತ್ನಿ, ಅಕ್ಕ, ತಂಗಿಯರ ಬಗ್ಗೆ ಅವಹೇಳನಾಕಾರಿ ಮಾತುಗಳನ್ನಾಡಿದರು.

ಈಗ ಹೇಳಿ. ಸಂಘಪರಿವಾರ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದಾಗ ಮತ್ತು ಆ ಬಳಿಕದ ಪರಿಸ್ಥಿತಿಗೂ, ಮುಸ್ಲಿಮರು ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದಾಗ ಮತ್ತು ಆ ಬಳಿಕದ ಪರಿಸ್ಥಿತಿಗೂ ಏನು ವ್ಯತ್ಯಾಸ ? ಹಿಂದೂ ಕಾರ್ಯಕರ್ತರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರೆ ಹಲ್ಲೆಗೆ ಒಳಗಾದ ಪೊಲೀಸರೇ ಏಕಕಾಲದಲ್ಲಿ ಸಂತ್ರಸ್ತರೂ ಆರೋಪಿಗಳೂ ಆಗಿ, ಬ್ಯಾಂಡೇಜ್ ತೆಗೆಯುವ ಮೊದಲೇ ವರ್ಗಾವಣೆಯಾಗುತ್ತಾರೆ. ಸಾಲದ್ದಕ್ಕೆ ಪೊಲೀಸರ ಪತ್ನಿ, ತಾಯಿ, ಅಕ್ಕ ತಂಗಿಯರೂ ಅವಹೇಳನಕ್ಕೆ ಒಳಗಾಗಬೇಕಾಗುತ್ತದೆ. ಮುಸ್ಲೀಮರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರೆ ಮುಸ್ಲೀಮರೇ ಏಕಕಾಲದಲ್ಲಿ ಆರೋಪಿಗಳೂ, ಸಂತ್ರಸ್ತರೂ ಆಗುತ್ತಾರೆ. ಮುಸ್ಲೀಮರ ವಿರುದ್ದ ಹತ್ತಕ್ಕೂ ಹೆಚ್ಚು ಎಫ್ಐಆರ್ ದಾಖಲಿಸಿ, ರಾತ್ರೋರಾತ್ರಿ ಮನೆಗೆ ನುಗ್ಗಿ ಅಮಾಯಕ ಮುಸ್ಲೀಮರನ್ನೂ ಬಂಧಿಸಲಾಗುತ್ತದೆ. ಇದು ಹಿಂದೂ ಕಲ್ಲಿಗೂ, ಮುಸ್ಲಿಂ ಕಲ್ಲಿಗೂ ಇರುವ ವ್ಯತ್ಯಾಸ !

(ಲೇಖಕರ ಫೇಸ್ ಬುಕ್ ವಾಲ್ ನಿಂದ)

Join Whatsapp