ಬೆಳಗಿಂದ ಸಂಜೆವರೆಗೆ ದುಡಿದ ದೇಹ ಹೇಗೆ ಒಂದಿಷ್ಟು ವಿಶ್ರಾಂತಿಯನ್ನು ಬಯಸುತ್ತದೆಯೋ ಹಾಗೆಯೇ ವರ್ಷ ಪೂರ್ತಿ ಬಿಡುವಿಲ್ಲದೇ ಜೀರ್ಣ ಕ್ರಿಯೆಯಲ್ಲಿ ತೊಡಗಿಸಿಕೊಂಡಿರುವ ಮಾನವನ ಜೀರ್ಣಾಂಗವೂ ಒಂದಿಷ್ಟು ವಿಶ್ರಾಂತಿ ಬಯಸುತ್ತದೆ. ಕೈ ಕಾಲು ಚಾಚಿ ಲೋಕದ ಪರಿವೆಯಿಲ್ಲದೇ ಮಾಡುವ ಒಂದು ದೀರ್ಘ ನಿದ್ರೆಯ ಬಳಿಕ ಹೇಗೆ ದೇಹಕ್ಕೆ ಮರಳಿ ದುಡಿಯುವ ಉತ್ಸಾಹ ಮತ್ತು ಶಕ್ತಿ ದೊರೆಯುತ್ತದೋ ಹಾಗೆಯೇ ಮಾನವನ ಜೀರ್ಣಾಂಗಕ್ಕೂ ಒಂದಿಷ್ಟು ವಿಶ್ರಾಂತಿ ಸಿಕ್ಕರೆ ಮತ್ತೆ ತನ್ನ ಕೆಲಸಗಳಲ್ಲಿ ಎಂದಿನ ಉತ್ಸಾಹದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದು ಇಸ್ಲಾಮೀ ಉಪವಾಸ ವ್ರತದ ಒಂದು ಆರೋಗ್ಯಪರವಾದ ದೃಷ್ಟಿಕೋನವೂ ಹೌದು.ಆದರೆ ನಮ್ಮ ರಮಝಾನ್ ಹಾಗಿರುತ್ತದಾ ಎಂಬ ಪ್ರಶ್ನೆ ನನ್ನನ್ನೂ ನಿಮ್ಮನ್ನೂ ಕಾಡದಿರದು. ಆ ಚರ್ಚೆಗೆ ಬರುವ ಮುನ್ನ ಒಂದೆರಡು ಪ್ರವಾದಿ ವಚನಗಳನ್ನು ನೋಡೋಣ.
ಪ್ರವಾದಿವರ್ಯರು ತನ್ನ ಒಂದು ವಚನದಲ್ಲಿ ‘ಮನುಷ್ಯನಿಗೆ ಆತನ ಹೊಟ್ಟೆಗಿಂತ ಕೆಟ್ಟ ಪಾತ್ರೆ ಇನ್ನೊಂದಿಲ್ಲ’ ಎಂದಿದ್ದಾರೆ. ಕನ್ನಡದ ಒಂದು ಪ್ರಸಿದ್ಧ ಉಕ್ತಿಯೂ ಈ ಪ್ರವಾದಿ ವಚನದ ಸಮರ್ಥನೆಯೆಂಬಂತೆ ಹುಟ್ಟಿಕೊಂಡಿತೇನೋ ಎನ್ನುವಷ್ಟು ಸಾಮ್ಯತೆ ಹೊಂದಿದೆ. ಆ ಉಕ್ತಿ ‘ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ’.
ಹಸಿವು ನೀಗಿದ ಬಳಿಕ ಉಣ್ಣುವ ಊಟ ಆರೋಗ್ಯಕ್ಕೆ ಹಾನಿಕರ ಎಂದೂ ಪ್ರವಾದಿವರ್ಯರು ನುಡಿದಿದ್ದಾರೆ. ಅದನ್ನು ತಪ್ಪಿಸಲೆಂದೇ ಪ್ರವಾದಿವರ್ಯರು ನೆಲದ ಮೇಲೆ ಕೂತು ಉಣ್ಣುತ್ತಿದ್ದರು ಮತ್ತು ಮಾನವ ಸಮೂಹಕ್ಕೆ ಅದೊಂದು ಮಾದರೀ ಬೋಜನಕ್ರಮ ಎಂದೂ ಬೋಧಿಸಿದ್ದಾರೆ. ಕಾಲುಗಳನ್ನು ಆರಾಮವಾಗಿ ಚಾಚಿ ಉಂಡಾಗ ಅಷ್ಟು ಬೇಗ ಹೊಟ್ಟೆ ತುಂಬುವುದೂ ಇಲ್ಲ. ಕಾಲುಗಳನ್ನು ಕ್ರಮಬದ್ಧವಾಗಿ ಮಡಚಿ ಕೂತು ಉಣ್ಣುವಾಗ ಹೊಟ್ಟೆ ಸಂಕುಚನಗೊಂಡ ಸ್ಥಿತಿಯಲ್ಲಿದ್ದು ಹಸಿವು ನೀಗುವಷ್ಟು ತಿಂದ ಕೂಡಲೇ ಹೊಟ್ಟೆ ತುಂಬಿತೆಂದು ಅರಿವಿಗೆ ಬರುತ್ತದೆ.
ಪ್ರವಾದಿವರ್ಯರು ತನ್ನ ವೈದ್ಯಕೀಯ ಪದ್ಧತಿಯಾದ ತಿಬ್ಬುನ್ನಬವಿಯಲ್ಲಿ ಹೊಟ್ಟೆಯನ್ನು ಮೂರು ಭಾಗಗಳಾಗಿ ವಿಂಗಡಿಸಲು ಬೋಧಿಸಿದ್ದಾರೆ. ಒಂದು ಭಾಗ ಆಹಾರಕ್ಕೆ, ಇನ್ನೊಂದು ಭಾಗ ನೀರಿಗೆ, ಮತ್ತೊಂದು ಭಾಗ ವಾಯುವಿಗೆ ಮೀಸಲಿಡಿ ಎಂದು ಬೋಧಿಸಿದ್ದಾರೆ. ನಾವಾದರೋ ವಾಯುವಿಗೆ ಬಿಡಿ ನೀರಿಗೂ ಜಾಗ ಬಿಡದೇ ಆಹಾರವನ್ನು ತುಂಬಿಸಿ ಬಿಡುತ್ತೇವೆ. ನಮ್ಮ ಹೊಟ್ಟೆ ಒಂದು ರಬ್ಬರ್ ಚೀಲದಂತಹ ವಸ್ತು ಅದಕ್ಕೆ ನಾವು ತುಂಬಿಸುತ್ತಾ ಹೋದಂತೆ ಅದು ಹಿಗ್ಗುತ್ತಾ ಹೋಗುತ್ತದೆ. ಡೊಳ್ಳು ಹೊಟ್ಟೆಯೆಂದರೆ ಬೇರೇನೂ ಅಲ್ಲ. ಅತಿಯಾಗಿ ತಿಂದು ಹಿಗ್ಗಿಸಿದ ಹೊಟ್ಟೆ. ನಾವು ಮಿತಿಯಲ್ಲಿ ತಿನ್ನುತ್ತಿದ್ದರೆ ಹೊಟ್ಟೆ ತನ್ನ ಸಹಜ ಸ್ಥಿತಿಯಲ್ಲೇ ಇರುತ್ತದೆ.
ನಮ್ಮ ಉಪವಾಸ ಹೇಗಿದೆ..?
ನಮ್ಮ ಉಪವಾಸವನ್ನು ಮುಸ್ಲಿಮೇತರ ಗೆಳೆಯರು ಮುಸ್ಲಿಮರ ತಿನ್ನುವ ತಿಂಗಳು ಎಂದೂ ನಮ್ಮ ಇಫ್ತಾರನ್ನು ಮುಸ್ಲಿಮರ ತಿನ್ನುವ ಸ್ಪರ್ಧೆಯೆಂದೂ ಗೇಲಿ ಮಾಡುತ್ತಾರೆ. ಒಂದು ಕ್ಷಣ ಯೋಚಿಸಿ ನೋಡಿ. ಈ ಗೇಲಿಯ ಹಿಂದೆ ಅದೆಷ್ಟು ವಾಸ್ತವ ಅಡಗಿದೆಯಲ್ವಾ..?
ಇಫ್ತಾರ್ ಹೆಸರಲ್ಲಿ ನಾವು ಅದೆಷ್ಟು ಬಗೆಯ ತಿಂಡಿಗಳನ್ನು, ಪಾನೀಯಗಳನ್ನು ತಯಾರಿಸುತ್ತೇವೆ. ಒಮ್ಮೆ ಯೋಚಿಸಿ ಅಷ್ಟು ಪಾನೀಯ ಮತ್ತು ತಿಂಡಿಗಳನ್ನು ನಮಗೆ ಉಪವಾಸವಲ್ಲದ ದಿನಗಳಲ್ಲಿ ಸೇವಿಸಲು ಸಾಧ್ಯವೇ..? ಈಗ ನೀವು ಹೀಗೂ ತರ್ಕಿಸಬಹುದು ಉಪವಾಸವಲ್ಲದಾಗ ನಾವು ಆಗಾಗ ತಿನ್ನುತ್ತಿರುವುದರಿಂದ ಅಷ್ಟೆಲ್ಲಾ ಸೇವಿಸಲು ಸಾಧ್ಯವಿಲ್ಲ, ಉಪವಾಸವೆಂದರೆ ನಾವು ಹಸಿವಲ್ಲಿರುವುದಲ್ವಾ ಆಗ ನಮಗೆ ಹೆಚ್ಚು ತಿನ್ನಲು ಸಾಧ್ಯವಾಗುತ್ತದೆ. ಇದು ಅಪ್ರಾಯೋಗಿಕವಲ್ಲವೇ..? ಉಪವಾಸ ಪಾರಣೆಗೈಯಲು ಒಂದು ಲೋಟ ಪಾನೀಯ ಕುಡಿದ ಕೂಡಲೇ ನಮ್ಮ ನಿಶ್ಯಕ್ತಿ ನೀಗುವುದಿಲ್ಲವೇ..? ಬರೀ ಒಂದು ಲೋಟ ಪಾನೀಯ ನಮಗೆ ಅಪಾರವಾದ ದೈಹಿಕ ಶಕ್ತಿಯನ್ನು ಮರಳಿ ನೀಡುತ್ತದಾದರೆ ನಮಗೆ ನಿಜಕ್ಕೂ ಎಷ್ಟು ಆಹಾರ ಅಗತ್ಯ ಎಂದು ನಾವು ಅರಿಯಲು ಸಾಧ್ಯ. ನಾವು ನಮ್ಮ ದೇಹದ ನಿಜವಾದ ಬೇಡಿಕೆಗನುಸಾರ ತಿಂದರೆ ನಮ್ಮ ಜೀರ್ಣಾಂಗದ ಮೇಲೆ ಯಾವ ಒತ್ತಡವೂ ಬೀಳುವುದಿಲ್ಲ. ಅದು ಸಹಜವಾಗಿಯೇ ಕೆಲಸ ಆರಂಭಿಸುತ್ತದೆ. ಒಂದು ಉದಾಹರಣೆ ನೋಡೋಣ. ಒಬ್ಬ ಕೂಲಿಯಾಳು ಬೆಳಗ್ಗೆ ಬಂದಾಗ ಫ್ರೆಶಾಗಿ ಇರುತ್ತಾನೆಂದು ಒಂದೇ ಏಟಿಗೆ ಆತನ ನಿಜವಾದ ಸಾಮರ್ಥ್ಯದ ದುಪ್ಪಟ್ಟು ಭಾರದ ಹೊರೆಯನ್ನು ಆತನ ತಲೆಯ ಮೇಲೆ ಇಟ್ಟು ಬಿಟ್ಟರೆ ಆತ ಹೇಗೆ ಒಮ್ಮೆಲೇ ಕುಗ್ಗಿ ಬಿಡುತ್ತಾನೋ ಹಾಗೆಯೇ ನಮ್ಮ ಜೀರ್ಣಾಂಗದ ನಿಜವಾದ ಸಾಮರ್ಥ್ಯಕ್ಕಿಂತ ದುಪ್ಪಟ್ಟು ಕೆಲಸವನ್ನು ಏಕಾಏಕಿ ನೀಡಿ ಬಿಟ್ಟರೆ ಅದಕ್ಕೂ ಸಲೀಸಾಗಿ ಕೆಲಸ ಮಾಡಲಾಗುವುದಿಲ್ಲ. ಅದು ತನ್ನ ಮಿತಿಯಷ್ಟನ್ನೇ ಜೀರ್ಣಿಸಬಲ್ಲುದು ಹೆಚ್ಚುವರಿಯನ್ನು ಹಾಗೆಯೇ ಬಿಟ್ಟು ಬಿಡುತ್ತದೆ. ಜೀರ್ಣಾಂಗವು ಜೀರ್ಣಿಸದೇ ಬಿಟ್ಟ ಆಹಾರವು ದೇಹದಲ್ಲಿ ಅತಿ ಕೊಬ್ಬಿನಂಶವಾಗಿ ಮಾರ್ಪಟ್ಟು ದೇಹದೊಳಗೆ ಹಾಗೆ ಉಳಿದು ಬಿಡುತ್ತದೆ.
ಒಂದು ವೇಳೆ ನಮ್ಮ ದೇಹದಲ್ಲಿ ಶಕ್ತಿ ಉತ್ಪಾದನೆಗೆ ಬೇಕಾದಷ್ಟು ಮಾತ್ರ ನಾವು ಸೇವಿಸಿದರೆ ಸುಲಭವಾಗಿ ಜೀರ್ಣವಾಗುತ್ತದೆ.
ಜೀವನ ಶೈಲಿಯಾಧಾರಿತ ಖಾಯಿಲೆಗಳ ನಿಯಂತ್ರಣದಲ್ಲಿ ಉಪವಾಸದ ಪಾತ್ರ
ಮಧುಮೇಹ, ರಕ್ತದೊತ್ತಡ, ಅತಿ ಕೊಬ್ಬಿನಂಶ, ಆಮ್ಲೀಯತೆ ಇವೆಲ್ಲವೂ ಜೀವನ ಶೈಲಿಯಾಧಾರಿತ ಖಾಯಿಲೆಗಳೆಂದು ವೈದ್ಯಕೀಯ ಜಗತ್ತು ಪ್ರತಿಪಾದಿಸುತ್ತದೆ. ಉಪವಾಸದ ನಿಜವಾದ ಕ್ರಮದೊಂದಿಗೆ ಅದನ್ನು ಅನುಷ್ಠಾನಿಸಿದರೆ ಜೀವನ ಶೈಲಿಯಾಧಾರಿತ ಖಾಯಿಲೆಗಳನ್ನು ನಿಯಂತ್ರಣಕ್ಕೆ ತರಲು ಸಾಧ್ಯವಿದೆ. ಆದರೆ ಇಫ್ತಾರ್ ಎನ್ನುವುದು ತಿನ್ನುವ ಸ್ಪರ್ಧೆಯಾದಾಗ ಜೀವನ ಶೈಲಿಯಾಧಾರಿತ ಖಾಯಿಲೆಗಳು ಬಿಗಡಾಯಿಸಲೂ ಬಹುದು.
ಮಧುಮೇಹಿಯೊಬ್ಬ ಉಪವಾಸ ಅನುಷ್ಠಾನಿಸುವುದರಿಂದ ಸಹಜವಾಗಿಯೇ ಆತನ ಆಹಾರ ಸೇವನೆ ನಿಯಂತ್ರಣದಲ್ಲಿರುತ್ತದೆ. ಮಧುಮೇಹಿಯೊಬ್ಬ ಚಿಕಿತ್ಸೆಗೆಂದು ಹೋದಾಗ ವೈದ್ಯ ಆತನಿಗೆ ಎಲ್ಲಕ್ಕಿಂತ ಮುಂಚಿತವಾಗಿ ಮತ್ತು ಕಟ್ಟುನಿಟ್ಟಾಗಿ ಸೂಚಿಸುವುದು ಪಥ್ಯಕ್ರಮ. ಮಧುಮೇಹ ಚಿಕಿತ್ಸೆಯಲ್ಲಿ ಮುಖ್ಯವಾಗಿ ಮಾಡಬೇಕಾದುದು ಆಹಾರ ನಿಯಂತ್ರಣ. ಅದಕ್ಕೆ ರಮಝಾನ್ ತಿಂಗಳು ಅತ್ಯಂತ ಸೂಕ್ತ ಕಾಲ. ಸೂರ್ಯೋದಯಕ್ಕಿಂತ ಮುಂಚೆ ತಿಂದು ಸೂರ್ಯಾಸ್ತದವರೆಗೆ ಹೊಟ್ಟೆಯನ್ನು ಖಾಲಿ ಬಿಟ್ಟು ಆ ಬಳಿಕ ಅತಿಯಾಗಿ ಆಹಾರ ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಉಪವಾಸದಿಂದ ಲಾಭವಾಗದು.
ಇಫ್ತಾರ್ ನಲ್ಲಿ ಪುಡ್ಡಿಂಗ್
ಹಿಂದಿನವರ ಹೆಸರು ಬೇಳೆ ಮತ್ತು ಬೆಲ್ಲದಿಂದ ತಯಾರಿಸುವ ಮಣ್ಣಿಯ ಜಾಗಕ್ಕೀಗ ಪುಡ್ಡಿಂಗ್ ಎಂಬ ಆಧುನಿಕ ಆಹಾರವೊಂದು ಬಂದಿದೆ. ಇದಕ್ಕೆ ಅಗತ್ಯವಾಗಿ ಮಿಲ್ಕ್ ಮೇಡ್ ಎಂಬ ಸಕ್ಕರೆಯ ಪಾಕ ಮತ್ತು ಹಾಲಿನಿಂದ ತಯಾರಿಸಿದ ಗಟ್ಟಿ ದ್ರಾವಣವೊಂದನ್ನು ಬಳಸಲೇ ಬೇಕಾಗುತ್ತದೆ. ಒಂದು ಚಮಚ ಮಿಲ್ಕ್ ಮೇಡ್ ನಲ್ಲಿ ಐದು ಚಮಚದಷ್ಟು ಸಕ್ಕರೆಯಂಶ ಇರುತ್ತದೆ. ಇಷ್ಟು ಅಗಾಧ ಸಕ್ಕರೆಯಂಶ ಇರುವ ಮಿಲ್ಕ್ ಮೇಡ್ ಬಳಸಿ ತಯಾರಿಸುವ ಪುಡ್ಡಿಂಗ್ ಗಳಿಗೆ ಮತ್ತೆ ಸಕ್ಕರೆಯನ್ನು ಸುರಿಯಲಾಗುತ್ತದೆ. ಇದು ಮಧುಮೇಹಿಗಳ ಸಕ್ಕರೆ ಅಂಶವನ್ನು ಏಕಾ ಏಕಿ ಮೇಲಕ್ಕೆ ಜಿಗಿಸಬಲ್ಲುದು. ಇಂತಹ ಅತೀ ಸಕ್ಕರೆಯಂಶದ ತಿಂಡಿಗಳನ್ನು ಇಫ್ತಾರ್ ನಲ್ಲಿ ಬಳಸುವುದರಿಂದ ಇಫ್ತಾರ್ ಮುಗಿದ ತುಸು ಹೊತ್ತಲ್ಲೇ ದೇಹಕ್ಕೆ ಮತ್ತೇರುತ್ತದೆ. ದೇಹವು ಹಾಸಿಗೆ ಬಯಸುತ್ತದೆ. ಇಡೀ ದಿನ ಖಾಲಿ ಹೊಟ್ಟೆಯಲ್ಲಿ ಕೂತು ಏಕಾ ಏಕಿ ಇಂತಹ ಅತೀ ಸಕ್ಕರೆಯಂಶವನ್ನು ಸೇವಿಸಿದರೆ ನಮ್ಮ ಮೇದೋಜ್ಜೀರಕ ಗ್ರಂಥಿ ಸ್ವಾಭಾವಿಕವಾಗಿ ಬಿಡುಗಡೆ ಮಾಡುವ ಇನ್ಸುಲಿನ್ ತೀರಾ ಸಾಲದೇ ಮಧುಮೇಹದ ಅಂಕಿಗಳು ಮೇಲಕ್ಕೆ ನೆಗೆಯುತ್ತದೆ. ಇಂತಹ ತಿಂಡಿಗಳನ್ನು ತಿಂದು ಬರುವ ಮತ್ತು ನಮ್ಮ ಸಹಜ ಪ್ರಕ್ರಿಯೆಗಳಿಗೂ ತಡೆಯೊಡ್ಡಬಲ್ಲುದು. ತರಾವೀಹ್ ನಂತಹ ಉತ್ತಮ ದೈಹಿಕ ವ್ಯಾಯಾಮ ನೀಡುವ ಪ್ರಾರ್ಥನೆಗಳು ಕೇವಲ ಯಾಂತ್ರಿಕವಾಗಿ ಬಿಡುವ ಸಾಧ್ಯತೆಯೂ ಅಧಿಕ.
ಇಫ್ತಾರ್ ನಲ್ಲಿ ಕರಿದ ತಿಂಡಿ
ಕಳೆದೊಂದು ದಶಕದಿಂದೀಚೆಗೆ ಇಫ್ತಾರ್ ನ ಮೆನುವಿನಲ್ಲಿ ಹಣ್ಣು ಹಂಪಲುಗಳ ಜಾಗವನ್ನು ಕರಿದ ತಿಂಡಿಗಳು ಆಕ್ರಮಿಸತೊಡಗಿವೆ. ರುಚಿಗಾಗಿ ಅಲ್ಪ ಪ್ರಮಾಣದಲ್ಲಿ ಕರಿದ ತಿಂಡಿಗಳನ್ನು ತಿಂದರೆ ಪರವಾಗಿಲ್ಲ. ಆದರೆ ನಮ್ಮ ಇಫ್ತಾರ್ ನ ಬಟ್ಟಲು ತುಂಬಾ ಕರಿದ ತಿಂಡಿಗಳೇ ತುಂಬಿ ಬಿಟ್ಟಿವೆ. ಇವು ಎರಡು ವಿಧದ ಆರೋಗ್ಯ ಸಮಸ್ಯೆಗಳನ್ನು ಬಿಗಡಾಯಿಸಬಹುದು.
1.ಅತಿ ಕೊಬ್ಬಿನಂಶ
2. ಆಮ್ಲೀಯತೆ (Acidity)
ಬೆಳಗಿಂದ ಕಾದ ಹೊಟ್ಟೆಗೆ ತಂಪಾದ ಹಣ್ಣಿನ ರಸ ಬಿದ್ದಾಗ ಒಂದು ವಿಧದ ಆಹ್ಲಾದ ಉಂಟಾಗುತ್ತದೆ. ಅದೇ ಸಂದರ್ಭದಲ್ಲಿ ಅತಿಯಾದ ಕರಿದ ತಿಂಡಿಗಳು ಹೊಟ್ಟೆ ಸೇರಿದಾಗ ಒಂದು ವಿಧದ ಅಮಲು ಉಂಟಾಗುತ್ತದೆ. ಇದು ನಮ್ಮ ಉತ್ಸಾಹವನ್ನು ಕುಂದಿಸುತ್ತದೆ. ದೇಹದಲ್ಲಿ ಅತಿ ಕೊಬ್ಬಾಗಿ ಮಾರ್ಪಟ್ಟು ಕೊಲೆಸ್ಟ್ರಾಲನ್ನು ಏರಿಸುತ್ತದೆ.ಆಮ್ಲೀಯ ಸಮಸ್ಯೆಯಿರುವವರ ಹೊಟ್ಟೆಯನ್ನು ಕಲಸು ಮೇಲೋಗರ ಮಾಡಿ ಬಿಡುತ್ತದೆ.
ಮಸಾಲೆ ಪದಾರ್ಥಗಳು
ಮಸಾಲೆ ಪದಾರ್ಥಗಳು ಅತಿಯಾಗಿ ಇಫ್ತಾರ್ ಬಟ್ಟಲು ಸೇರಿದಾಗ ನಮ್ಮ ಕೈ ನಮಗರಿವಿಲ್ಲದಂತೆ ಅವುಗಳತ್ತಲೇ ಚಾಚಲ್ಪಡುತ್ತದೆ. ಇದು ಆಮ್ಲೀಯತೆಯನ್ನು ಹೆಚ್ಚಿಸುತ್ತದೆ ಮಾತ್ರವಲ್ಲ ರಕ್ತದೊತ್ತಡ ಹೆಚ್ಚಿಸಲೂ ತನ್ನ ಕೊಡುಗೆಯನ್ನು ನೀಡುತ್ತದೆ.
ನಮ್ಮ ಹಿರಿಯರ ಇಫ್ತಾರ್ ಮೆನು:
ನಮ್ಮ ಹಿರಿಯರ ಇಫ್ತಾರ್ ಮೆನುವಿನಲ್ಲಿ ಕರಿದ ತಿಂಡಿಗಳಿರಲೇ ಇಲ್ಲ. ಒಂದು ಖರ್ಜೂರ, ದೇಹವನ್ನು ತಂಪಾಗಿಡಲು ಹೆಸರು ಕಾಳಿನ ಪಾನಕ, ತೆಂಗಿನ ಕಾಯಿಯ ಗಂಜಿ, ಒಮ್ಮೊಮ್ಮೆ ಹೆಸರು ಬೇಳೆಯ ಮಣ್ಣಿ ಇವಿಷ್ಟು ಕಡ್ಡಾಯವಾಗಿ ಇದ್ದವು. ಈಗಿನಂತೆ ಹಣ್ಣುಗಳೂ ಅಷ್ಟಾಗಿ ಇರಲಿಲ್ಲ. ಹೆಚ್ಚಿನವರು ಬಾಳೆ ಹಣ್ಣನ್ನು ಇಫ್ತಾರ್ ಗೆ ಬಳಸುತ್ತಿದ್ದರು. ಅದು ಜೀರ್ಣ ಕ್ರಿಯೆಗೂ ಉಪಕಾರಿ. ಇನ್ನಿತರ ಏನಾದರೂ ಹಣ್ಣುಗಳಿದ್ದರೆ ಹೆಚ್ಚಿನವುಗಳು ತಂತಮ್ಮ ಹಿತ್ತಲಲ್ಲೋ, ತೋಟದಲ್ಲೋ ಬೆಳೆದವುಗಳಷ್ಟೆ.
ಸಹರಿಗೆ ಮೊಸರಿನೊಂದಿಗೆ ಅನ್ನ. ಆದರೂ ಅವರು ಬೆಳಗಿಂದ ಸಂಜೆಯವರೆಗೆ ತೋಟದಲ್ಲೋ, ಕೂಲಿ ಕೆಲಸಗಳಲ್ಲೋ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದರು.
ಇಫ್ತಾರ್ ಮೆನು ಹೇಗಿರಬೇಕು..?
ನಾವು ಸೌದಿ ಅರೇಬಿಯಾದ ಮಸೀದಿಗಳ ಇಫ್ತಾರನ್ನು ವೀಡಿಯೋಗಳಲ್ಲಿ, ಚಿತ್ರಗಳಲ್ಲಿ ನೋಡಿರುತ್ತೇವೆ. ಎರಡು ಖರ್ಜೂರ ಒಂದು ಪುಟ್ಟ ಬಾಟಲಿ ನೀರು ಮತ್ತು ಒಂದಿಷ್ಟು ಹಣ್ಣುಗಳು..
ಇದು ಆರೋಗ್ಯಕ್ಕೆ ಸಂಬಂಧಿಸಿದಂತೆ ಅತ್ಯುತ್ತಮ ಇಫ್ತಾರ್ ಮೆನು. ಈ ರೀತಿಯ ಇಫ್ತಾರ್ ನಿಂದ ತರಾವೀಹ್ ನಮಾಝ್ ನಿರ್ವಹಿಸಲೂ ಕಷ್ಟವಾಗದು. ತರಾವೀಹ್ ನಮಾಝ್ ಸಲೀಸಾಗಿ ನಿರ್ವಹಿಸಿದ ಬಳಿಕ ಹೊಟ್ಟೆ ಮತ್ತೆ ಹಸಿಯತೊಡಗುತ್ತದೆ. ಆಗ ಹಸಿವು ನೀಗಿಸುವಷ್ಟು ತಿಂದರೆ ಸಾಕಾಗುತ್ತದೆ.
ಸಹರಿ ಪ್ರಬಲ ಪ್ರವಾದಿ ಚರ್ಯೆಯಾದುದರಿಂದ ಅದನ್ನು ಸರಿಯಾದ ಸಮಯಕ್ಕೆ ಉಣ್ಣಬೇಕು. ಕೆಲವರು ರಮಝಾನ್ ನಲ್ಲಿ ತಡರಾತ್ರಿ ಹನ್ನೆರಡು- ಒಂದು ಗಂಟೆಯವರೆಗೂ ಮಲಗದಿರುವುದರಿಂದ ಆಗಲೇ ಸಹರಿ ಉಂಡು ಮಲಗುವ ಅಭ್ಯಾಸ ಇಟ್ಕೊಂಡಿರುತ್ತಾರೆ. ಇದು ಅಸಲಿಗೆ ಸಹರಿಯಾಗುವುದೂ ಇಲ್ಲ. ಸಹರಿ ಮುಂಜಾವಿನ ಹೊತ್ತಿಗೆ ಉಣ್ಣುವುದೇ ಸರಿಯಾದ ಕ್ರಮ. ಸಹರಿಯಲ್ಲೂ ಅಷ್ಟೇ. ಹಸಿವು ನೀಗುವಷ್ಟು ತಿಂದರೆ ಸಾಕು.ಹೊಟ್ಟೆ ಬಿರಿಯುವಷ್ಟು ತಿಂದರೂ ನಮಗೆ ಅದರಿಂದಾಗಿ ಸಂಜೆ ವರೆಗೆ ಹಸಿವಾಗದಿರುವುದಿಲ್ಲ.
ಡಿಹೈಡ್ರೇಶನ್ ತಪ್ಪಿಸಲು ಏನು ಮಾಡಬೇಕು..?
ಡಿ ಹೈಡ್ರೇಶನ್ ಎಂದರೆ ಶರೀರದಲ್ಲಿ ನೀರಿನ ಕೊರತೆಯುಂಟಾಗುವುದು. ಇಫ್ತಾರ್ ಬಳಿಕ ಸಹರಿಯ ಮಧ್ಯದ ಅವಧಿಯಲ್ಲಿ ಆಗಾಗ ಶುದ್ಧ ನೀರನ್ನು ಕುಡಿಯುವುದರಿಂದ ಡಿ ಹೈಡ್ರೇಶನನ್ನು ತಪ್ಪಿಸಬಹುದು. ನೀರಿನ ಬದಲಿಗೆ ಸಕ್ಕರೆ ಬೆರೆಸಿದ ಪಾನಕಗಳನ್ನು ಕುಡಿಯುವುದರಿಂದ ಸಕ್ಕರೆಯಂಶವನ್ನು ಜೀರ್ಣಗೊಳಿಸಲು ಅದರಲ್ಲಿನ ದ್ರವವನ್ನು ಜೀರ್ಣಾಂಗವು ಬಳಸುತ್ತದೆ. ಶುದ್ಧ ನೀರು ಮಾತ್ರ ಕುಡಿಯುವುದರಿಂದ ಅದನ್ನು ಜೀರ್ಣಗೊಳಿಸುವ ಅಗತ್ಯ ಬೀಳದು. ಅದು ಹಗಲು ಹೊತ್ತಿನಲ್ಲಿ ಆಗಬಹುದಾದ ಡಿಹೈಡ್ರೇಶನ್ ನೀಗಿಸಲು ಉಪಕಾರಿಯಾಗಬಲ್ಲುದು.
ಈ ರೀತಿಯ ಸರಳ ಆಹಾರ ಪದ್ಧತಿಯನ್ನು ರಮಝಾನ್ ನಲ್ಲಿ ಪಾಲಿಸಿದರೆ ರಮಝಾನ್ ಮುಗಿಯುವ ಹೊತ್ತಿಗೆ ಕೊಬ್ಬು ಕರಗುತ್ತದೆ. ಮಧುಮೇಹ ಮತ್ತು ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ಆಮ್ಲೀಯತೆಯ ಸಮಸ್ಯೆಗೆ ಪರಿಹಾರ ದೊರಕುತ್ತದೆ. ರಮಝಾನ್ ಮುಗಿದ ಬಳಿಕವೂ ಬಾಯಿ ಚಪಲ ಮತ್ತು ಹೊಟ್ಟೆಯನ್ನು ನಿಯಂತ್ರಣದಲ್ಲಿಟ್ಟರೆ ಜೀವನಶೈಲಿಯಾಧಾರಿತ ಖಾಯಿಲೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಾಧ್ಯ.