ಬೆಂಗಳೂರು: ಆತ್ಮಹತ್ಯೆಯಾಗಿರುವ ವ್ಯಕ್ತಿ ತನ್ನ ಸಾವಿಗೆ ಕಾರಣ ಯಾರು ಎಂಬುದನ್ನು ಡೆತ್ ನೋಟ್ ನಲ್ಲಿ ಸ್ಪಷ್ಟವಾಗಿ ತಿಳಿಸಿದ್ದು, ಕೂಡಲೇ ಆರೋಪ ಹೊತ್ತಿರುವ ಸಚಿವ ಈಶ್ವರಪ್ಪ ವಿರುದ್ಧ ಐಪಿಸಿ ಸೆಕ್ಷನ್ 302 ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಬೇಕು. ಕೂಡಲೇ ಆತನನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.
ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಿನ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ಆರೋಪಿ ಸಚಿವನ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಿಸಬೇಕು. ಈ 40% ಕಮಿಷನ್ ಆರೋಪ ಮಾಡಿರುವುದು ನಾವ್ಯಾರೂ ಅಲ್ಲ. ಗುತ್ತಿಗೆದಾರರ ಸಂಘ, ಗುತ್ತಿಗೆದಾರರು ಹಾಗೂ ಬಿಜೆಪಿ ಕಾರ್ಯಕರ್ತರೇ ಸರ್ಕಾರದ ಭ್ರಷ್ಟಾಚಾರ ಬಗ್ಗೆ ಈ ಆರೋಪ ಮಾಡಿದ್ದಾರೆ. ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದಲ್ಲಿ ಮುಖ್ಯಮಂತ್ರಿಗಳು ಯಾರ ರಕ್ಷಣೆಯನ್ನೂ ಮಾಡಬಾರದು. ಕೇವಲ ಮೌಖಿಕವಾಗಿ ತನಿಖೆ ಮಾಡುತ್ತೇವೆ, ಸತ್ಯಾಂಶ ತಿಳಿಯುತ್ತೇವೆ ಎಂದು ಕಾಲಹರಣ ಮಾಡಬಾರದು. ಕೂಡಲೇ ಎಫ್ ಐಆರ್ ದಾಖಲಿಸಿ, ಈಶ್ವರಪ್ಪನನ್ನು ಬಂಧಿಸಬೇಕು. ಈ ಹಿಂದೆ ಸಚಿವರುಗಳ ವಿರುದ್ಧದ ಪ್ರಕರಣದಲ್ಲಿ ಸರ್ಕಾರ ತನಿಖೆಯಲ್ಲಿ ಹಸ್ತಕ್ಷೇಪ ಮಾಡಿ ಬಿ ರಿಪೋರ್ಟ್ ಹಾಕಿ ರಕ್ಷಣೆ ಮಾಡಿದ್ದು, ಈ ಪ್ರಕರಣದಲ್ಲಿ ಆ ರೀತಿ ಮಾಡಬಾರದು ಎಂದು ಹೇಳಿದರು.
ಈ ಹಿಂದೆ ಇಂತಹ ಪ್ರಕರಣಗಳಲ್ಲಿ ಅನೇಕ ಸಚಿವರ ರಾಜೀನಾಮೆ ಪಡೆಯಲಾಗಿದೆ. ಈಗಲೂ ಆರೋಪ ಹೊತ್ತಿರುವ ಸಚಿವನ ವಿರುದ್ದ ಪ್ರಕರಣ ದಾಖಲಿಸಿ, ಆತನನ್ನು ವಜಾಗೊಳಿಸಬೇಕು, ಬಂಧಿಸಬೇಕು ಎಂದು ಆಗ್ರಹಿಸಿದರು.
ಇದು ಕೇವಲ ಆತ್ಮಹತ್ಯೆ ಪ್ರಕರಣವಲ್ಲ. ಇದೊಂದು ಕೊಲೆ ಪ್ರಕರಣ. ಈ ಸಾವಿಗೆ ಕಾರಣ ಯಾರು ಎಂದು ಬರೆದಿಟ್ಟು ಸಂತೋಷ್ ಸಾವಿಗೆ ಶರಣಾಗಿದ್ದಾರೆ. ಈ ಸಾವಿಗೆ ಕಾರಣ ಏನು ಎಂಬುದು ಇಡೀ ರಾಜ್ಯಕ್ಕೆ ತಿಳಿದಿದೆ. ಹೀಗಾಗಿ ಈಗ ರಾಜ್ಯದಲ್ಲಿ ಕಾನೂನನ್ನು ಯಾವ ರೀತಿ ಜಾರಿಗೆ ತರಲಾಗುತ್ತದೆ ಎಂಬುದಷ್ಟೇ ಈಗ ಉಳಿದಿರುವ ವಿಚಾರ ಎಂದು ಶಿವಕುಮಾರ್ ಹೇಳಿದರು.