ತಿರುವನಂತಪುರ: ಹಜ್ ಯಾತ್ರೆಗೆ ತೆರಳಲು 65 ವರ್ಷದ ಮಿತಿ ಹೇರಿರುವುದರಿಂದ ಈ ಬಾರಿ ಸಾವಿರಾರು ಮಂದಿ ಹಜ್ ಯಾತ್ರೆ ಆಕಾಂಕ್ಷಿಗಳು ನಿರಾಶೆ ಅನುಭವಿಸಿದ್ದಾರೆ. ಹಿರಿಯ ನಾಗರಿಕರೊಂದಿಗೆ ಹಜ್ ಯಾತ್ರೆಗೆ ತೆರಳಲು ಅರ್ಜಿ ಸಲ್ಲಿಸಿರುವ ಮಹಿಳೆಯರು ಏಪ್ರಿಲ್ 22ರೊಳಗೆ ಮತ್ತೆ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಭಾರತೀಯ ಹಜ್ ಸಮಿತಿಯು ಹಜ್ ಯಾತ್ರೆಗೆ 65 ವರ್ಷದ ಮಿತಿ ಹಾಕಿ ಸುತ್ತೋಲೆ ಹೊರಡಿಸಿದೆ. ಇದರಿಂದ ದೇಶದ ಬಹಳಷ್ಟು ವಯಸ್ಸಾದ ಹಜ್ ಆಕಾಂಕ್ಷಿಗಳು ಆಘಾತಕ್ಕೆ ಒಳಗಾಗಿದ್ದಾರೆ. ಸರ್ಕಾರದ ಹೊಸ ನಿರ್ಧಾರದಿಂದ 90,000 ಜನ ಅರ್ಜಿದಾರರು ಹಜ್ ಗೆ ಹೋಗಲಾಗದ ಸ್ಥಿತಿ ತಲುಪಿದ್ದಾರೆ. ಸೌದಿ ಅರೇಬಿಯಾ ಸರಕಾರವೇ ಈ ಮಿತಿ ಸೂಚಿಸಿರುವುದರಿಂದ ಭಾರತದಲ್ಲೂ 65ರ ವಯಸ್ಸೇ ಕಡೆ ಎಂಬ ಮಿತಿ ಹೇರಲಾಗಿದೆ.
ಈ ನೀತಿಯಿಂದ ಮಹಿಳಾ ಯಾತ್ರಿಗಳಿಗೆ ಹೆಚ್ಚಿನ ಸಂಕಷ್ಟ ಉಂಟಾಗಿದೆ. ಹೆಚ್ಚಿನ ಮಹಿಳೆಯರು ಮನೆಯ ಹಿರಿಯ ವ್ಯಕ್ತಿ ( ಹಿರಿಯ ಮೆಹ್ರಮ್) ಎಂದರೆ ಹಿರಿಯ ಪುರುಷ ಜೊತೆಗಾರರೊಂದಿಗೆ ಹೋಗಲು ಅರ್ಜಿ ಸಲ್ಲಿಸಿದ್ದರು. ಇದೀಗ ಅವರೆಲ್ಲ ಅವಕಾಶ ಕಳೆದುಕೊಂಡಿದ್ದಾರೆ. ಅಂಥವರು ಕೂಡಲೆ ಕಡಿಮೆ ಪ್ರಾಯದ ಪುರುಷ ಜೊತೆಗಾರರೊಡನೆ ಹೋಗಲು ಅರ್ಜಿ ಸಲ್ಲಿಸಬಹುದು. ಏಪ್ರಿಲ್ 22ರೊಳಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವರಿಗೆ ಅವಕಾಶ ನೀಡಲಾಗಿದೆ.
ಏಪ್ರಿಲ್ 30, 2022ಕ್ಕೆ 65 ವರ್ಷ ದಾಟುವ ಯಾರನ್ನೂ ಹಜ್ ಯಾತ್ರೆಗೆ ಪರಿಗಣಿಸುವುದಿಲ್ಲ ಎಂದು ಹಜ್ ಸಮಿತಿಯ ಮುಖ್ಯ ಕಾರ್ಯಕಾರಿ ಅಧಿಕಾರಿಯಾದ ಮುಹಮ್ಮದ್ ಯಾಕೂಬ್ ಶೇಕ್ ತಿಳಿಸಿದ್ದಾರೆ. ರಾಜ್ಯ ಹಜ್ ಸಮಿತಿಯ ಚೇರ್ಮನ್ ಸಿ. ಮುಹಮ್ಮದ್ ಫೈಝಿ ಈ ಬಗ್ಗೆ ಮಾತನಾಡಿ, ಕೋವಿಡ್ ಇರುವ ಕಾರಣ ಹಲವು ಕಟ್ಟುನಿಟ್ಟುಗಳನ್ನು ವಿಧಿಸಲಾಗಿದೆ. ನಾವು ಸರಕಾರದ ನಿಯಮಾವಳಿಯ ಪ್ರಕಾರವೇ ಮಕ್ಕಾ ಯಾತ್ರೆಯನ್ನು ಏರ್ಪಾಟು ಮಾಡಬೇಕಾಗಿದೆ ಎಂದು ಹೇಳಿದರು.
65 ವರ್ಷ ಮೀರಿದವರು ಅರ್ಜಿ ಸಲ್ಲಿಸದಂತೆ ಮಾಡಲು ಸರಕಾರವು ಮೊದಲು ತೀರ್ಮಾನಿಸಿತ್ತು. ಡಿಸೆಂಬರ್ 14ರ ಒಂದು ಸುತ್ತೋಲೆಯಲ್ಲಿ ಇದನ್ನು ಸ್ಪಷ್ಟಪಡಿಸಲಾಗಿತ್ತು. ಸೌದಿ ಅರೇಬಿಯಾ ಸರಕಾರವೂ ಸಹ ಕಟ್ಟುನಿಟ್ಟುಗಳನ್ನು ಸಡಿಲಿಸಿತ್ತು.
ಆದರೆ ಮತ್ತೊಮ್ಮೆ ಕೊರೋನಾ ಸೋಂಕು ಕಾಣಿಸುತ್ತಲೇ ಸೌದಿ ಅರೇಬಿಯಾ ಸರಕಾರವು ಮತ್ತೆ ವಯೋಮಿತಿ ಮೊದಲಾದ ಕಟ್ಟುಪಾಡುಗಳನ್ನು ಮತ್ತೆ ಹೇರಿದೆ. ಈ ವರ್ಷದ ಹಜ್ ಯಾತ್ರಿಗಳು 65 ವರುಷದೊಳಗಿನವರಾಗಿರಬೇಕು ಮತ್ತು ಕೋವಿಡ್ ವಿರುದ್ಧ ಲಸಿಕೆ ಹಾಕಿಸಿಕೊಂಡವರಾಗಿರಬೇಕು ಎಂಬ ಷರತ್ತು ವಿಧಿಸಿದೆ.
ಸೌದಿ ಅರೇಬಿಯಾ ಸರಕಾರವೂ ಯಾವ್ಯಾವ ದೇಶದಿಂದ ಎಷ್ಟು ಜನ ಬರಬಹುದು ಎಂಬ ಕೋಟ ಸಹ ಕೊಟ್ಟಿಲ್ಲ. ಭಾರತವೂ ಆ ಕೋಟ ಸಂಖ್ಯೆಯ ಮೇಲೆಯೇ ಹೋಗಬೇಕಾಗಿದೆ ಎಂದು ಫೈಝಿ ತಿಳಿಸಿದರು.