ಕರಾವಳಿ ಲೇಖಕಿಯರ ವಾಚಕಿಯರ ಸಂಘದಿಂದ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರದಾನ

Prasthutha|

ಮಂಗಳೂರು: ತುಳು ಧರ್ಮ ಸಂಶೋಧನಾ ಕೇಂದ್ರದ ವತಿಯಿಂದ ಕೊಡಮಾಡುವ ಪೇರೂರು ರುಕ್ಕು ಪೂಜಾರ್ದಿ, ಬಾಗಿ ಪೂಜಾರ್ದಿ ಲೆಚ್ಚು ಪೂಜಾರ್ದಿ ನೆನಪಿನ ‘ಸಾವಿತ್ರಿಬಾಯಿ ಫುಲೆ’ ಪ್ರಶಸ್ತಿಯನ್ನು ಶಿಕ್ಷಕಿಯರಾದ ಸುಧಾ ನಾಗೇಶ್ ಹಾಗೂ ವಿಜಯಲಕ್ಷ್ಮಿ ಕಟೀಲು ಇವರಿಗೆ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಆಶ್ರಯದಲ್ಲಿ ಉರ್ವಸ್ಟೋರ್ ಸಾಹಿತ್ಯಸದನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೀಡಲಾಯಿತು.

- Advertisement -


ಸುಧಾ ನಾಗೇಶ್ ಮಾತನಾಡಿ “ಸಾವಿತ್ರಿಬಾಯಿ ಫುಲೆಯವರದು ಎವರೆಸ್ಟ್ ಎತ್ತರದ ಸಾಧನೆ. ನಾನಾದರೋ ಪುಟ್ಟ ದಿಣ್ಣೆ ಮಾತ್ರ” ಎಂದರು. ವಿಜಯಲಕ್ಷ್ಮೀ ಮಾತನಾಡಿ ನನ್ನ ತಾಯಿ ಕಷ್ಟಪಟ್ಟು ದುಡಿದು ಓದಿಸಿದ ಕಾರಣ ಇವತ್ತು ಶಿಕ್ಷಕಿಯಾಗಿ ಸ್ವಾವಲಂಬಿಯಾಗುವುದು ಸಾಧ್ಯವಾಗಿದೆ. ಸಾವಿತ್ರಿಬಾಯಿ ಅವರ ದಾರಿಯಲ್ಲಿ ನಡೆದು ಅವರ ಆದರ್ಶಗಳನ್ನು, ಅಕ್ಷರಿಕೆಯನ್ನು ಗ್ರಾಮೀಣ ಭಾಗದವರಿಗೆ ತಲುಪಿಸಲು ಯತ್ನಿಸುತ್ತೇನೆ ಎಂದರು.


ಅಧ್ಯಕ್ಷತೆ ವಹಿಸಿದ್ದ ಡಾ.ಜ್ಯೋತಿ ಚೇಳಾಯಿರು ಮಾತನಾಡಿ, “ಶಿಕ್ಷಣವು ಜನಸಾಮಾನ್ಯರಿಗೆ ಅದರಲ್ಲೂ ಮಹಿಳೆಯರಿಗೆ ನಿಷಿದ್ಧವೂ ದುರ್ಲಭವೂ ಆಗಿದ್ದ ಕಾಲದಲ್ಲಿ ಸಾವಿತ್ರಿಬಾಯಿ ಫುಲೆಯವರು ಶಿಕ್ಷಣವನ್ನು ಪಡೆದರು. ಶೋಷಣೆಯನ್ನು ಪ್ರಶ್ನಿಸಿದರು. ಸಾವಿರಾರು ಮಂದಿಗೆ ಓದು ಬರೆಹದ ಅವಕಾಶಗಳನ್ನು ಲಭ್ಯವಾಗಿಸಿದರು. ವೈಚಾರಿಕ ಗಟ್ಟಿತನವು ಜ್ಯೋತಿಬಾ ಮತ್ತು ಸಾವಿತ್ರಿಬಾಯಿ ಫುಲೆಯವರ ಸಾಮಾಜಿಕ ವಿಚಾರವಾದದ ಅಡಿಪಾಯವಾಗಿದೆ. ಮಕ್ಕಳಲ್ಲಿ ಪಕ್ಷಪಾತ ಮಾಡದೆ ಅವರ ಪ್ರತಿಭೆ, ಅರ್ಹತೆಗಳನ್ನು ಗುರುತಿಸುವವನೆ ನಿಜವಾದ ಗುರು. ಹೆತ್ತವರು ನನ್ನನ್ನು ಓದಿಸಿದ್ದರ ಫಲವಾಗಿ ಇವತ್ತು ಈ ಮಟ್ಟದಲ್ಲಿ ನಿಂತಿದ್ದೇನೆ. ಸಾವಿತ್ರಿಬಾಯಿಯಂಥವರ ಆದರ್ಶ, ತ್ಯಾಗಗಳು ನನ್ನಂಥ ಅಸಂಖ್ಯ ಮಂದಿಯ ಬದುಕನ್ನು ರೂಪಿಸಿವೆ” ಎಂದರು.

- Advertisement -


ಪೇರೂರು ಜಾರು ಸ್ವಾಗತಿಸಿ ಪ್ರಸ್ತಾವನೆಗೈದರು. ಅರುಣಾ ನಾಗರಾಜ್ ನಿರೂಪಿಸಿದರು. ಆಕೃತಿ ಭಟ್ ಆಶಯಗೀತೆ ಹಾಡಿದರು. ರೇಖಾ ವಂದನಾರ್ಪಣೆಗೈದರು.

Join Whatsapp