ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸೋಲಿನ ಸರಣಿ ಮುಂದುವರಿದಿದೆ. ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್, ಚೆನ್ನೈ ತಂಡವನ್ನು 8 ವಿಕೆಟ್ ಗಳ ಅಂತರದಲ್ಲಿ ಭರ್ಜರಿಯಾಗಿ ಸೋಲಿಸಿದೆ.
ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 7 ವಿಕೆಟ್ ನಷ್ಟದಲ್ಲಿ 154 ರನ್’ಗಳಿಸಿತ್ತು. ಸಾಧಾರಣ ಮೊತ್ತವನ್ನು ಕೇವಲ 2 ವಿಕೆಟ್ ನಷ್ಟದಲ್ಲಿ ಬೆನ್ನಟ್ಟಿದ ಹೈದರಾಬಾದ್, ಇನ್ನೂ 2.2 ಓವರ್ ಬಾಕಿ ಇರುವಾಗಲೇ ಗೆಲುವಿನ ನಗೆ ಬೀರಿತು.
ಹೈದರಾಬಾದ್ ಪರ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಭರ್ಜರಿ ಅರ್ಧಶತಕ ಗಳಿಸಿ ಮಿಂಚಿದರು. 50 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 5 ಬೌಂಡರಿ ನೆರವಿನಿಂದ 75 ರನ್ ಗಳಿಸಿ ಡ್ವೈನ್ ಬ್ರಾವೋಗೆ ವಿಕೆಟ್ ಒಪ್ಪಿಸಿದರು. ನಾಯಕ ಕೇನ್ ವಿಲಿಯಮ್ಸನ್ 32 ರನ್ ಗಳಿಸಿ ನಿರ್ಗಮಿಸಿದರು. ರಾಹುಲ್ ತ್ರಿಪಾಠಿ 39 ಮತ್ತು ನಿಕೊಲಸ್ ಪೂರನ್ 5 ರನ್ ಗಳಿಸಿ ಅಜೇಯರಾಗುಳಿದರು.
ನಾಯಕ ಜಡೇಜಾ 6 ಬೌಲರ್‌ಗಳನ್ನು ಕಣಕ್ಕಿಳಿಸಿದರೂ, ಹೈದರಾಬಾದ್ ತಂಡದ 2 ವಿಕೆಟ್ ಗಳನ್ನು ಪಡೆಯಲಷ್ಟೇ ಶಕ್ತರಾರದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್, ಮೊಯಿನ್ ಅಲಿ 48 ರನ್, ಅಂಬಟಿ ರಾಯುಡು 27 ಹಾಗೂ ನಾಯಕ ಜಡೇಜಾ ಗಳಿಸಿದ 23 ರನ್ ಗಳ ನೆರವಿನಿಂದ 7 ವಿಕೆಟ್ ನಷ್ಟದಲ್ಲಿ 154 ರನ್ ಗಳಿಸಿತ್ತು.
ಹೈದರಾಬಾದ್ ಪರ ಟಿ ನಟರಾಜನ್ ಮತ್ತು ವಾಷಿಂಗ್ಟನ್ ಸುಂದರ್ ತಲಾ 2 ವಿಕೆಟ್ ಪಡೆದರು.
ಐಪಿಎಲ್ 2022 | ಮುಂದುವರಿದ ಚೆನ್ನೈ ಸೋಲಿನ ಸರಣಿ, ಸತತ ನಾಲ್ಕನೇ ಸೋಲು
Prasthutha|