ಮಂಡ್ಯ: ನನ್ನ ಮಗಳಿಗೆ ನೀಡಲಾದ ಹಣ, ಉಡುಗೊರೆಯನ್ನು ಜನರ ಸೇವೆಗಾಗಿ ನೀಡುತ್ತೇನೆಂದು “ಅಲ್ಲಾಹು ಅಕ್ಬರ್” ಎಂದು ಕೂಗಿದ್ದ ವಿದ್ಯಾರ್ಥಿನಿ ಮುಸ್ಕಾನ್ ತಂದೆ ಮಹಮ್ಮದ್ ಹುಸೇನ್ ಖಾನ್ ತಿಳಿಸಿದ್ದಾರೆ.
“ಹಣ, ಉಡುಗೊರೆ ಕೊಡಲು ಬಂದವರಿಗೆ ಬೇಡ ಎಂದಿದ್ದೆವು. ಆದರೂ ಅವರು ನೀಡಿದ್ದಾರೆ. ಆ ಹಣದಲ್ಲಿ ಜನರ ಸೇವೆಗಾಗಿ ಆಂಬುಲೆನ್ಸ್ ಕೊಡುತ್ತೇನೆ. ದೇವರು ನಮ್ಮನ್ನು ಚೆನ್ನಾಗಿ ಇಟ್ಟಿದ್ದಾನೆ. ಅವರು ಕೊಟ್ಟ ದುಡ್ಡನ್ನು ಜನಸೇವೆಗೆ ನೀಡುತ್ತೇನೆ” ಎಂದು ಹೇಳಿದ್ದಾರೆ.
ಅಲ್‌ಖೈದಾ ಉಗ್ರ ಸಂಘಟನೆ ಮುಖ್ಯಸ್ಥನಿಂದ ಮುಸ್ಕಾನ್ ಹೊಗಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, “ಅವರು ಯಾರು ಅನ್ನೋದು ನನಗೆ ಗೊತ್ತಿಲ್ಲ. ಮಾಧ್ಯಮಗಳ ಮುಖಾಂತರ ಈ ವಿಚಾರ ತಿಳಿಯಿತು. ಅರಬ್ಬಿ ಭಾಷೆಯಲ್ಲಿ ಮಗಳನ್ನು ಹೊಗಳಿದ್ದಾರೆ. ಆದರೆ ಅವರ ಬಗ್ಗೆ ನನಗೇನೂ ಗೊತ್ತಿಲ್ಲ. ಇದೆಲ್ಲಾ ತಪ್ಪು, ಗೊಂದಲ ಮಾಡಿ ನಮ್ಮ ನಮ್ಮಲ್ಲಿ ಜಗಳ ತಂದಿಡಲು ಮಾಡುತ್ತಿದ್ದಾರೆ. ಈ ರೀತಿಯ ಹೊಗಳಿಕೆ ಬೇಕಾಗಿಲ್ಲ. ಅವರ ಬಗ್ಗೆ ಏನು ಗೊತ್ತಿಲ್ಲದೇ ಇದ್ದಾಗ ನಾನೇನು ಹೇಳಲು ಸಾಧ್ಯ? ಹಿಜಾಬ್ ಹಿಂದೆ ಉಗ್ರ ಸಂಘಟನೆಗಳ ಕೈವಾಡ ಇರುವುದರ ಬಗ್ಗೆ ಗೊತ್ತಿಲ್ಲ” ಎಂದಿದ್ದಾರೆ.
ಯಾರ‍್ಯಾರು ಏನೇನು ಮಾಡ್ತಿದ್ದಾರೋ ಗೊತ್ತಿಲ್ಲ. ನಾವು ಇಲ್ಲಿ ಬದುಕಿ ಜೀವನ ಮಾಡ್ತಿದ್ದೇವೆ. ಅಣ್ಣ ತಮ್ಮಂದಿರ ಹಾಗೆ ಪ್ರೀತಿ ಹಂಚಿ ಜೀವನ ಮಾಡುತ್ತಿದ್ದೇವೆ. ಬೇರೆ ದೇಶದವರು ಏನು ಮಾಡ್ತಿದ್ದಾರೋ ಗೊತ್ತಿಲ್ಲ. ನಮ್ಮ ದೇಶದಲ್ಲಿ ನಾವು ನೆಮ್ಮದಿಯಿಂದ ಇದ್ದೇವೆ. ಅವರ ದೇಶಗಳಲ್ಲಿ ಅವರು ನೋಡಿಕೊಳ್ಳಲಿ. ಅವರ ಮಾತುಗಳಿಗೆ ತಲೆಕೆಡಿಸಿಕೊಳ್ಳಲು ಆಗಲ್ಲ ಎಂದು ಮೊಹಮ್ಮದ್ ಹುಸೇನ್ ಖಾನ್ ಸ್ಪಷ್ಟಪಡಿಸಿದ್ದಾರೆ.