ನವದೆಹಲಿ: ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ- ಯುಎಪಿಎಯನ್ನು ರದ್ದುಗೊಳಿಸುವ ಖಾಸಗಿ ಮಸೂದೆಯನ್ನು ಶುಕ್ರವಾರ ಕಾಂಗ್ರೆಸ್ ಸಂಸದ ಶಶಿ ತರೂರ್ ಮಂಡಿಸಿದ್ದಾರೆ.
UAPA ವ್ಯಕ್ತಿಗಳ ಗೌಪ್ಯತೆ ಮತ್ತು ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುತ್ತದೆ. ಇದು ವ್ಯಕ್ತಿಯ ಗೌಪ್ಯತೆಗೆ ಕಾನೂನುಬಾಹಿರ ಹಸ್ತಕ್ಷೇಪದಿಂದ ರಕ್ಷಿಸುವ ಸಾಂವಿಧಾನಿಕ ನಿಬಂಧನೆಗಳನ್ನು ಉಲ್ಲಂಘಿಸುತ್ತದೆ ಎಂದು ತರೂರ್ ಪ್ರತಿಪಾದಿಸಿದ್ದಾರೆ.
ಯುಎಪಿಎ ಸರ್ಕಾರದ ದುರುಪಯೋಗದ ಸಾಧನವಾಗಿದೆ ಎಂದು ಆಪಾದಿಸಿದ ಅವರು, ಇದರಲ್ಲಿ 66% ಪ್ರಕರಣಗಳು ಯಾವುದೇ ಹಿಂಸಾಚಾರವನ್ನು ಒಳಗೊಂಡಿಲ್ಲ, 56% ಅನ್ನು ಎರಡು ವರ್ಷಗಳವರೆಗೆ ಯಾವುದೇ ದೋಷಾರೋಪ ಪಟ್ಟಿ ಇಲ್ಲದೆ ಬಂಧಿಸಲಾಗಿದೆ ಮತ್ತು 2014 ರಿಂದ ಅಪರಾಧದ ಪ್ರಮಾಣವು 2.4% ರಷ್ಟು ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ಹೇಳಿದರು.
ಯುಎಪಿಎ ಭಾರತದಲ್ಲಿ ಪ್ರಾಥಮಿಕವಾಗಿ ಭಯೋತ್ಪಾದನೆ ನಿಗ್ರಹ ಕಾನೂನಾಗಿದ್ದು, ಇದನ್ನು ಮೂಲತಃ 1967 ರಲ್ಲಿ ಆಗಿನ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿತ್ತು. ಈ ಕಾಯಿದೆಯ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿದೆ ಮತ್ತು ದೇಶಕ್ಕೆ ಇನ್ನೂ ಅಂತಹ ಕಾನೂನು ಅಗತ್ಯವಿದೆಯೇ ಎಂದು ಸುಪ್ರೀಂ ಕೋರ್ಟ್ ಕೂಡ ಕೇಂದ್ರವನ್ನು ಕೇಳಿತ್ತು.