ಬೆಂಗಳೂರು: ರಾಜ್ಯದಲ್ಲಿ ವಿಶ್ವ ಹಿಂದು ಪರಿಷತ್, ಬಜರಂಗದಳದಂತಹ ಸಂಘಟನೆಗಳು ಧರ್ಮೋದ್ದಾರದ ಹೆಸರು ಹೇಳಿಕೊಂಡು ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಕಾರಣವಾಗುತ್ತಿವೆ. ಇನ್ನೊಬ್ಬರ ಅನ್ನ ಕಸಿಯುವುದು, ನೆಮ್ಮದಿಯ ನಾಡಿಗೆ ಕಿಚ್ಚು ಹಚ್ಚುವುದು ಧರ್ಮವಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಪಕ್ಷವೊಂದರ ಬಾಲಂಗೋಚಿಗಳಾಗಿರುವ ಆ ಸಂಘಟನೆಗಳು ಹಿಂದೂ ಸಮಾಜದ ಪ್ರಾತಿನಿಧಿಕ ಸಂಸ್ಥೆಗಳಲ್ಲ. ಜಾತಿ-ಧರ್ಮದ ಆಧಾರದಲ್ಲಿ ಜನರ ನಡುವೆ ಕಂದಕ ಸೃಷ್ಟಿಮಾಡುವ ಕೆಲಸವನ್ನು ಆ ಸಂಘಟನೆಗಳು ನಿರಂತರವಾಗಿ ಮಾಡುತ್ತಿವೆ ಎಂದು ಹರಿಹಾಯ್ದರು. ಈ ಕುರಿತು ಅವರು ತಮ್ಮ ಟ್ವೀಟರ್ ಖಾತೆಯಲ್ಲಿಯೂ ಟೀಕೆ ವ್ಯಕ್ತಪಡಿಸಿದ್ದಾರೆ.
ಕೊರೊನ ಕಾಲದಲ್ಲಿ ಬಹುತೇಕ ಸಂಘಟನೆಗಳು, ಜನಸಾಮಾನ್ಯರು ಜಾತಿ ಬೇಧ ಮೀರಿ ಜನಸೇವೆ ಮಾಡಿದ್ದಾರೆ. ಆದರೆ ಶವಸಂಸ್ಕಾರದಲ್ಲಿಯೂ ಕೀರ್ತಿ ಹುಡುಕುವ ಮಟ್ಟಕ್ಕೆ ಆ ಸಂಘಟನೆಗಳು ಹೋಗಿವೆ. ಶಿವಮೊಗ್ಗದಲ್ಲಿ ಸಚಿವರೇ ಸೆಕ್ಷನ್ 144 ಉಲ್ಲಂಘಿಸಿ ಹಿಂಸೆಗೆ ಪ್ರಚೋದನೆ ನೀಡುತ್ತಾರೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಧರ್ಮ ಎಂದರೆ ಇದೇನಾ ಎಂದವರು ಪ್ರಶ್ನಿಸಿದರು.