ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯಾಗಲೀ, ರಾಜ್ಯದ ಮುಖ್ಯಮಂತ್ರಿಯಾಗಲೀ ಜನರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವುದಿಲ್ಲ. ಬದಲಾಗಿ ಸಮಾಜವನ್ನು ವಿಭಜನೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.
ನಗರದಲ್ಲಿ ಎಐಸಿಸಿಯ ನಿಕಟಪೂರ್ವ ಅಧ್ಯಕ್ಷ ರಾಹುಲ್ ಗಾಂಧಿಯವರ ಉಪಸ್ಥಿತಿಯಲ್ಲಿ ನಡೆದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಯ ಅನೈತಿಕ ಸರ್ಕಾರವಿದೆ. ಇದೊಂದು ಜನವಿರೋಧಿ, ಭ್ರಷ್ಟ ಸರ್ಕಾರ. ಕೋಮು ಸಂಘರ್ಷಕ್ಕೆ ದಾರಿ ಮಾಡಿಕೊಡುವಂತಹ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದೆ. ಮೊದಲಿಗೆ ಗೋಹತ್ಯೆ ನಿಷೇಧ , ನಂತರ ಮತಾಂತರ ನಿಷೇಧ ಕಾಯ್ದೆ, ಈಗ ಹಿಜಾಬ್, ಭಗವದ್ಗೀತೆ, ಹಲಾಲ್ ವಿಚಾರಗಳನ್ನು ಪ್ರಸ್ತಾಪ ಮಾಡಿದ್ದಾರೆ. ಸಂವಿಧಾನ, ಪ್ರಜಾಪ್ರಭುತ್ವ, ಬಹುತ್ವದ ಬಗ್ಗೆ ಗೌರವ ಇಲ್ಲದ ಕಾರಣ ಬಿಜೆಪಿಯವರು ಇಂತಹಾ ವಿಚಾರಗಳನ್ನು ಮುನ್ನೆಲೆಗೆ ತಂದು ಯುವಕರ ಮನಸ್ಸಲ್ಲಿ ದ್ವೇಷದ ವಿಷಬೀಜ ಬಿತ್ತುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಹಿಜಾಬ್ ಒಂದು ವಿವಾದವಾಗುವಂತಹ ವಿಷಯವಾಗಿರಲಿಲ್ಲ. ನೂರಾರು ವರ್ಷಗಳಿಂದ ಮುಸ್ಲಿಂ ಸಮುದಾಯದವರು ಆಚರಿಸಿಕೊಂಡು ಬಂದ ಪದ್ಧತಿ ಆಗಿತ್ತು. ಸರ್ಕಾರ ಮನಸ್ಸು ಮಾಡಿದ್ದರೆ ಆರಂಭದಲ್ಲೇ ವಿವಾದವನ್ನು ಬಗೆಹರಿಸಿ, ದೇಶಾದ್ಯಂತ ವ್ಯಾಪಿಸದಂತೆ ತಡೆಯಬಹುದಿತ್ತು. ಆರ್.ಎಸ್.ಎಸ್, ಭಜರಂಗದಳ, ಹಿಂದೂ ಮಹಾಸಭಾದವರು ಸರ್ಕಾರದ ಕುಮ್ಮಕ್ಕಿನಿಂದ ದೊಡ್ಡ ವಿಷಯವನ್ನಾಗಿ ವಿದ್ಯಾರ್ಥಿಗಳ ಮುಂದಿಟ್ಟು, ಮುಸ್ಲಿಮರನ್ನು ಖಳನಾಯಕರನ್ನಾಗಿ ಬಿಂಬಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಪಕ್ಷ ಎರಡೂ ಬಾರಿಯೂ ಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬಂದಿಲ್ಲ. 2008 ರಲ್ಲಿ ಯಡಿಯೂರಪ್ಪ ಅವರು ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿದರು. 2018 ರಲ್ಲಿ ಬಹುಮತ ಸಾಬೀತು ಮಾಡಲಾಗದೆ ಒಂದೇ ವಾರಕ್ಕೆ ರಾಜೀನಾಮೆ ನೀಡಿ, ಆ ನಂತರ ಆಪರೇಷನ್ ಕಮಲದ ಮೂಲಕ ಸಮ್ಮಿಶ್ರ ಸರ್ಕಾರವನ್ನು ಬೀಳಿಸಿ ಮುಖ್ಯಮಂತ್ರಿ ಸ್ಥಾನಕ್ಕೇರಿದರು. ಈ ಸರ್ಕಾರದ ಅವಧಿಯಲ್ಲಿ ಎರಡು ವರ್ಷ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದರು, ಈಗ ಬಸವರಾಜ ಬೊಮ್ಮಾಯಿ ಆ ಸ್ಥಾನದಲ್ಲಿ ಇದ್ದಾರೆ ಎಂದು ಟೀಕಿಸಿದರು.
ಈ ದೇಶ ಯಾವುದೋ ಒಂದು ಧರ್ಮದ ಜನರ ದೇಶವಲ್ಲ. ಎಲ್ಲ ಧರ್ಮಗಳ ಜನರ ತ್ಯಾಗ ಬಲಿದಾನದಿಂದ ನಮಗೆ ಸ್ವಾತಂತ್ರ್ಯ ದಕ್ಕಿದೆ. ಈ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಬೇಕಾದರೆ ಎಲ್ಲ ವರ್ಗದ ಜನರಿಗೆ ನ್ಯಾಯ ಕೊಡಬೇಕು. ರಾಜ್ಯದಲ್ಲಿ ಚುನಾವಣೆ ಹತ್ತಿರ ಬಂದಿರುವುದರಿಂದ ಕೋಮು ವೈಷಮ್ಯದ ವಿಚಾರಗಳನ್ನು ಮುನ್ನೆಲೆಗೆ ತರುತ್ತಿದ್ದಾರೆ. ನಾವು ಸಂವಿಧಾನವನ್ನು ಧರ್ಮವಾಗಿ ನಂಬಿರುವವರು, ನಮಗೆ ಸಂವಿಧಾನವೇ ಸಂಜೀವಿನಿ. ಈ ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಸಂವಿಧಾನದ ಆಶಯಗಳಂತೆ ಜೀವನ ಮಾಡಬೇಕು ಎಂದು ಹೇಳಿದರು .
ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಬಿಜೆಪಿ ಶಾಸಕರೇ ತಮ್ಮ ಪಕ್ಷದ ಸಚಿವರ ಭ್ರಷ್ಟಾಚಾರದ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಆದರೆ ಸರ್ಕಾರ ಭಂಡತನದಿಂದ ವರ್ತಿಸುತ್ತಿದೆ.ಇಂತಹಾ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಲು, ಸಮಾಜ, ದೇಶದ ಉಳಿವಿಗಾಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಎಂದು ಹೇಳಿದರು.