ರಾಜ್ಯದೆಲ್ಲೆಡೆ ಮುಸ್ಲಿಮರ ವ್ಯಾಪಾರಕ್ಕೆ ತಡೆ: ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲು ವಕೀಲರ ನಿಯೋಗ ಆಗ್ರಹ

Prasthutha|

ಬೆಂಗಳೂರು: ಬೆಂಗಳೂರು ನಗರ ಸೇರಿದಂತೆ ಕರ್ನಾಟಕ ರಾಜ್ಯಾದ್ಯಂತ ಕೆಲವು ವ್ಯಕ್ತಿಗಳು ಮತ್ತು ಸಂಘಟನೆಗಳು ಧರ್ಮದ ಹೆಸರಿನಲ್ಲಿ ವಿವಿಧ ಧರ್ಮಗಳ ಜನರ ಮಧ್ಯೆ ದ್ವೇಷವನ್ನು ಉಂಟು ಮಾಡುತ್ತಿದ್ದು, ಇಂತಹ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವವರ ವಿರುದ್ಧ ಸ್ವಯಂ ಪ್ರೇರಿತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಶನ್ ಫಾರ್ ಜಸ್ಟಿಸ್ ಸಂಘಟನೆಯ ನಿಯೋಗ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂಥ್ ಅವರಿಗೆ ಮನವಿ ಸಲ್ಲಿಸಿದೆ.

- Advertisement -

ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೆಲವು ಸಮಾಜಘಾತುಕ, ಶಾಂತಿ ಭಂಜಕ ವ್ಯಕ್ತಿಗಳು ಮತ್ತು ಸಂಘಟನೆಗಳು ಇತ್ತೀಚಿನ ದಿನಗಳಲ್ಲಿ ಒಂದು ಕೋಮಿನ, ಅದರಲ್ಲೂ ವಿಶೇಷವಾಗಿ ಮುಸ್ಲಿಮ್ ವ್ಯಾಪಾರಿಗಳನ್ನು ಜಾತ್ರೆ, ಸಂತೆ, ಹಬ್ಬ ಹರಿದಿನಗಳಲ್ಲಿ ವ್ಯಾಪಾರ ನಡೆಸದಂತೆ ಮತ್ತು ಹಿಂದೂ ಗ್ರಾಹಕರು ಮುಸ್ಲಿಮರ ಸಾಮಾಗ್ರಿಗಳನ್ನು ಖರೀದಿಸದಂತೆ ಕರೆ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಮುಸ್ಲಿಮ್ ವ್ಯಾಪಾರಿಗಳು ಹಿಂದೂಗಳ ಜಾತ್ರೆ, ಹಬ್ಬಗಳಲ್ಲಿ ವ್ಯವಹಾರ ನಡೆಸದಂತೆ ಬೆದರಿಕೆ ಹಾಕಲಾಗುತ್ತಿದೆ. ಹಾಡಹಗಲೇ ಬೆಂಗಳೂರಿನಂತಹ ನಗರದಲ್ಲಿ ಪುನೀತ್ ಕೆರೆಹಳ್ಳಿ, ಪ್ರಶಾಂತ್ ಸಂಬರಗಿ ಮತ್ತು ಪುಂಡರ ಗುಂಪೊಂದು ಹಲವು ಸಂಘಟನೆಗಳ ಹೆಸರಿನಲ್ಲಿ ವ್ಯಾಪಾರ ನಡೆಸದಂತೆ ಮುಸ್ಲಿಮರಿಗೆ ತಡೆವೊಡ್ಡುತ್ತಿದೆ.

ಈ ಸಂಬಂಧ ನಗರದ ಪೊಲೀಸರು ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಅವರಿಗೆ ಪರೋಕ್ಷವಾಗಿ ಬೆಂಬಲ ಸೂಚಿಸಿರುವುದು ಪೊಲೀಸರು ನಿಷ್ಕ್ರಿಯತೆಯನ್ನು ತೋರಿಸಿದೆ. ಕೆಲವು ಧಾರ್ಮಿಕ ಮತ್ತು ದತ್ತಿ ಇಲಾಖೆಯ ದೇವಸ್ಥಾನ, ಖಾಸಗಿ ಮತ್ತು ಟ್ರಸ್ಟ್ ಅಡಿಯಲ್ಲಿರುವ ಧಾರ್ಮಿಕ ಸಂಸ್ಥೆಗಳ ಬಳಿ ನಡೆಯುವ ಜಾತ್ರೆ, ದೇವರ ಉತ್ಸವದಲ್ಲಿ ಹಿಂದೂಯೇತರ ವ್ಯಾಪಾರಿಗಳು ವಹಿವಾಟು ನಡೆಸದಂತೆ ಕೆಲವು ವ್ಯಕ್ತಿಗಳು ಮತ್ತು ಸಂಘಟನೆಗಳು ತಡೆಯುತ್ತಾ ಮುಸ್ಲಿಮರಿಗೆ ಬೆದರಿಕೆ ಹಾಕುತ್ತಾ ಬಂದಿದೆ. ಇಂತಹವರ ವಿರುದ್ಧ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಲು ಅದು ಆಗ್ರಹಿಸಿದೆ.

- Advertisement -

ನಿಯೋಗದಲ್ಲಿ ಎಸ್. ಬಾಲನ್, ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್, ಹಿರಿಯ ವಕೀಲ ಹರಿರಾಮ್ ಮತ್ತಿತರರು ಇದ್ದರು.

ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News

Join Whatsapp