‘ಹಿಂದೂ ಸಮಾಜ ಬಹಳ ನೋವನ್ನು ಉಂಡಿದೆ’ ಎಂದು ನಿನ್ನೆ ಉಡುಪಿಯ ಸ್ವಾಮಿಯೊಬ್ಬರು ಹೇಳಿದ್ದಾರೆ (ಸಾಮಾಜಿಕ ಸಾಮರಸ್ಯಕ್ಕೆ ನೆರವಾಗುವಂತೆ ಕೋರಿ ಕೆಲವರು ಮನವಿ ಪತ್ರ ಕೊಟ್ಟಾಗ).
ಅವರು ಹೇಳಿದ್ದರಲ್ಲಿ ಸತ್ಯಾಂಶವಿದೆ. ಹಿಂದೂ ಸಮಾಜ ನೋವನ್ನು ಉಂಡಿದೆ. ಆದರೆ ಪ್ರಶ್ನೆ ಇರುವುದು ಈ ನೋವನ್ನು ಕೊಟ್ಟವರು ಯಾರು? ಹಿಂದೂಗಳೇ ಅಥವಾ ಬೇರೆಯವರೇ? ಮತ್ತು ಈ ನೋವನ್ನು ಉಂಡವರು ಯಾರು? ಎನ್ನುವುದು.
ನಾನು ಯಾವ ನೋವನ್ನು ಉಂಡಿದ್ದೇನೆ ಮತ್ತು ಯಾರಿಂದ ಎಂದು ತಿಳಿಯಲು ಹೀಗೇ ಸುಮ್ಮನೆ ನೆನಪಿನ ದೋಣಿಯಲ್ಲಿ ಹಿಂದೆ ಹಿಂದೆ ಹೋದೆ.
ಆಗ ನನಗೆ ಏಳರ ಹರೆಯ. ಅಪ್ಪ ಅರಣ್ಯ ಇಲಾಖೆಯ ಉದ್ಯೋಗಿಯಾಗಿದ್ದ. ನಾವು ಅವಿಭಜಿತ ದಕ್ಷಿಣ ಕನ್ನಡದ ದಕ್ಷಿಣ ಭಾಗದವರಾದರೂ ವರ್ಗಾವಣೆ ಆಗುತ್ತಾ ಆಗುತ್ತಾ ಉತ್ತರದ ತುದಿ ತಲಪಿದ್ದೆವು. ಕ್ವಾರ್ಟರ್ಸ್ ಸೌಲಭ್ಯ ಇಲ್ಲದ ಕಾರಣ ಒಂದು ಹುಲ್ಲಿನ ಗುಡಿಸಲಿನಲ್ಲಿ ಬಾಡಿಗೆಗೆ ಇದ್ದೆವು. ಒಂದು ದಿನ ಆ ಗುಡಿಸಲಿನ ಮಾಲೀಕ ಶಾಸ್ತ್ರಿಗಳು ಸಮಾರಾಧನೆಯ ಊಟಕ್ಕೆ ಕರೆದಿದ್ದರು. ಸರಕಾರಿ ಉದ್ಯೋಗಿಯ ಮನೆಯವರೇ ಅದರೂ ನಮಗೆ ಅಂಗಳದ ಮೂಲೆಯಲ್ಲಿ ಊಟಕ್ಕೆ ಎಲೆ ಹಾಕಿದ್ದು ನೆನಪಿದೆ. ಊಟ ಆದ ಬಳಿಕ ಉಂಡ ಜಾಗವನ್ನು ಅಮ್ಮ ದನದ ಸೆಗಣಿಯಿಂದ ಶುದ್ಧಗೊಳಿಸಿದ್ದೂ ನೆನಪಿದೆ.
ಶಾಲೆಯಲ್ಲಿ ಮಿತ್ಯಂತ ಮಾಸ್ಟ್ರು ತರಗತಿಯಲ್ಲಿ ಎಲ್ಲ ಮಕ್ಕಳ ಎದುರೇ ‘ಗೋಡಾ ಮೈದಾನ್ ಮೆ ಹೆ’ ಎಂದು ಜಾತಿ ನಿಂದನೆ ಮಾಡುತ್ತಿದ್ದರು (ಗೌಡ ಸಮುದಾಯಕ್ಕೆ ಸೇರಿದವನಾದುದರಿಂದ). ಎಷ್ಟಾದರೂ ಜಾತಿಯಲ್ಲಿ ನಮಗಿಂತ ಅವರು ತುಂಬಾ ಮೇಲಿನವರಲ್ಲವೇ? ಅಲ್ಲದೆ ಮೇಸ್ಟ್ರು ಎಂಬ ಅಧಿಕಾರ ಬೇರೆ.
ಹೆಡ್ ಮಾಸ್ತರ್ ಮುಚ್ಚಿಂತಾಯರು ನಮ್ಮನ್ನು ಯಾವತ್ತೂ ಮುಟ್ಟುತ್ತಿಲಿಲ್ಲ. ನಾವು ಬೀಗದ ಕೀ ತಂದು ಕೊಟ್ಟರೆ (ಶಾಲೆಯ ಕೆಲವು ತರಗತಿಗಳು ಒಂದಷ್ಟು ದೂರದಲ್ಲಿದ್ದವು, ಅವುಗಳಿಗೆ ಬೀಗ ಹಾಕುತ್ತಿದ್ದುದು ನಾವು ವಿದ್ಯಾರ್ಥಿಗಳೇ) ಅದನ್ನು ಒಂದೆಡೆ ಇರಿಸಲು ಹೇಳಿ, ಅದಕ್ಕೆ ನೀರು ಪ್ರೋಕ್ಷಿಸಿ ಶುದ್ಧಗೊಳಿಸಿ ಆಮೇಲೆ ಪಡೆದುಕೊಳ್ಳುತ್ತಿದ್ದರು.
ಕಾರ್ಕಳದ ಭಟ್ಟರು ಸಣ್ಣ ಪ್ರೊಮೋಶನ್ ನೀಡಿ ಜಗಲಿಯಲ್ಲಿ ಊಟ ಹಾಕುತ್ತಿದ್ದರು. ಆದರೆ ಅಲ್ಲೂ ಕೊನೆಗೆ ದನದ ಸೆಗಣಿಯಿಂದ ಜಾಗ ಶುದ್ಧಗೊಳಿಸುವುದು ಅನಿವಾರ್ಯವಾಗಿತ್ತು.
ಈ ಯಾವುದೇ ಜಾತಿ ಶ್ರೇಷ್ಠರ ಮನೆಯ ಹಜಾರದಾಚೆ ನಮಗೆ ಪ್ರವೇಶ ಇರಲಿಲ್ಲ. ಒಟ್ಟಿಗೆ ಕುಳಿತು ಊಟ ಮಾಡುವುದು ದೂರದ ಮಾತು. ಅವರು ಮತ್ತು ನಾವು ‘ಎಲ್ಲರೂ ಹಿಂದೂ ಎಲ್ಲರೂ ಒಂದು’ ಎಂದು ಕೆಲವರು ಹೇಳುತ್ತಾರೆ. ಸ್ವಾಮಿಯ ಪ್ರಕಾರ ನಾವೆಲ್ಲರೂ ಹಿಂದೂ ಸಮಾಜದವರು.
ಇದಕ್ಕೆ ಭಿನ್ನವಾಗಿ ಕಾರ್ಕಳದ ಮುಶ್ತಾಕ್ ಅಹಮದ್ ನ ಮನೆ ಮತ್ತು ನಮ್ಮ ಮನೆ ಬೇರೆ ಅನಿಸುತ್ತಿರಲಿಲ್ಲ. ಅಷ್ಟರ ಮಟ್ಟಿನ ಆತ್ಮೀಯತೆ. ಅವರ ಅಡುಗೆ ಮನೆಯ ಒಳಗೂ ನಮಗೆ ಪ್ರವೇಶ ಇತ್ತು. ರಮ್ಜಾನ್ ದಿನ ಒಟ್ಟಿಗೆ ಕುಳಿತು ಊಟ ಮಾಡುತ್ತಿದ್ದೆವು.
ಮನೆಗೆ ಮೀನು ಮಾರಿಕೊಂಡು ಬರುವ ರೆಹಮಾನ್ ನಮಗೆ ಬೇರೆಯವ ಅನಿಸಿಯೇ ಇಲ್ಲ. ಅವ ಮನೆಗೆ ಕರೆದು ಊಟ ಹಾಕಿದ್ದೂ ಇದೆ, ಮನೆಗೇ ತಂದು ಕೊಟ್ಟದ್ದೂ ಇದೆ.
ಫರ್ಜಾನಾ ಆಶ್ರಫ್ ರಮ್ಜಾನ್ ದಿನ ಬಿರಿಯಾನಿ ಮತ್ತು ನನಗೆ ಇದುವರೆಗೆ ಗೊತ್ತೇ ಇಲ್ಲದ ಖಾದ್ಯಗಳನ್ನು ಮನೆಗೇ ತಂದು ತಿನಿಸಿದ್ದಿದೆ.
ಕಣಂಜಾರಿನ ಇನಾಸ್ ಮಿನೆಜಸ್ ನ ಕ್ರಿಸ್ ಮಸ್ ಹಬ್ಬಕ್ಕೆ ನಾನು ಖಾಯಂ ಅತಿಥಿ.
ಮಂಗಳೂರಿನ ಮ್ಯಾಕ್ಸಿಂ ಡಿಸೋಜಾ- ಆಗ್ನೆಸ್ ಮನೆ ನಮ್ಮ ಮನೆಯೇ ಆಗಿಬಿಟ್ಟಿತ್ತು, ಆಗಿದೆ. ಕ್ಯಾಂಟೀನ್ ನಲ್ಲಿ ಆತ ಚಿಕನ್ ಕರಿ ತಿನ್ನುವಾಗ ಪೀಸ್ ಎಲ್ಲ ಅವನಿಗಿಟ್ಟು ಅದರ ಸಾರು ನಾನು ತೆಗೆದುಕೊಳ್ಳುವಷ್ಟು ಆತ್ಮೀಯತೆ ಇತ್ತು.
ಉದ್ಯೋಗದ ಕಾರಣ ಮಂಗಳೂರಿನ ಕ್ವಾರ್ಟರ್ಸ್ ನಲ್ಲಿ ನೆಲೆಸಲು ಹೋದಾಗ ಮೊದಲ ದಿನದಿಂದ ಕ್ವಾರ್ಟರ್ಸ್ ತೊರೆಯುವವರೆಗೂ ಪ್ರೀತಿಯ ಧಾರೆಯೆರೆಯುತ್ತಾ ಆಗಾಗ ಹಬ್ಬದ ತಿಂಡಿ ಕೊಡುತ್ತಾ ಮನೆಯವರಂತೆ ನೋಡಿಕೊಂಡದ್ದು ವಲೇರಿಯನ್ ಮಸ್ಕರೇಞಸ್ ಮತ್ತು ರೆನಿಲ್ಡಾ ಮಸ್ಕರೇಞಸ್.
ನಾನು ತಳಜಾತಿಯವನಲ್ಲ. ನನ್ನನ್ನು ಹಿಂದೂ ಎಂದು ಕೆಲವರು ಹೇಳುತ್ತಾರೆ. ನಾನು ಮೇಲೆ ಉಲ್ಲೇಖಿಸಿದ ಜಾತಿಶ್ರೇಷ್ಠರನ್ನೂ ಹಿಂದೂ ಎನ್ನುತ್ತಾರೆ. ಹಾಗಿದ್ದೂ ನಮ್ಮವರಿಂದಲೇ ಜಾತಿಯ ಅವಮಾನದ ನೋವನ್ನು ಅನುಭವಿಸುವಂಥಾದುದು ಹೇಗೆ? ಅಸ್ಪೃಶ್ಯತೆಯ ಭಾವನೆ ಅನುಭವಿಸುವಂಥಾದುದು ಹೇಗೆ? ನನ್ನ ಸ್ಥಿತಿಯೇ ಹೀಗಿರಬೇಕಾದರೆ ಇನ್ನು ತೀರಾ ತಳಸಮುದಾಯದವರ ಅನುಭವ ಹೇಗಿರಬಹುದು? ಆ ತಳ ಸಮುದಾಯದವರೂ ಹಿಂದೂ ಸಮಾಜದವರೇ? ಇವರು ಹೇಳುವ ಹಿಂದೂ ಸಮಾಜದಲ್ಲಿ ಪ್ರತಿಯೊಂದು ಜಾತಿಯವರನ್ನೂ ಅದರ ಮೇಲಿನ ಜಾತಿಯವರು ಅಮಾನವೀಯವಾಗಿ ನಡೆಸಿಕೊಂಡಿಲ್ಲವೇ?
ನಿಜ, ಹಿಂದೂ ಸಮಾಜ ತುಂಬಾ ನೋವನ್ನು ಉಂಡಿದೆ. ಆದರೆ ಪ್ರಶ್ನೆ ಇರುವುದು ಆ ನೋವನ್ನು ನೀಡಿದವರು ಯಾರು? ಹೊರಗಿನವರೋ ಅಥವಾ ಒಳಗಿನವರೋ? ಮತ್ತು ಆ ನೋವನ್ನು ನಿಜವಾಗಿ ಉಂಡವರು ಯಾರು? ಎನ್ನುವುದು.
(ಶ್ರೀನಿವಾಸ ಕಾರ್ಕಳ ಅವರ ಫೇಸ್ಬುಕ್ ವಾಲ್ ನಿಂದ)