ಬೆಂಗಳೂರು : ಕೋವಿಡ್ 19 ಸಂಕಷ್ಟದ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಈ ವರ್ಷದ ಅಂತ್ಯದ ವರೆಗೂ ಶಾಲೆಗಳನ್ನು ತೆರೆಯುವುದಿಲ್ಲ ಎಂದು ಇಂದು ಸರಕಾರ ಘೋಷಿಸಿದೆ. ಡಿ.31ರ ವರೆಗೂ ಶಾಲೆಗಳನ್ನು ತೆರೆಯುವುದಿಲ್ಲ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಡಿಸೆಂಬರ್ ಅಂತ್ಯದಲ್ಲಿ ಸಭೆಯನ್ನು ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಕೋವಿಡ್ 19 ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸಭೆ ಆರಂಭದಲ್ಲಿ ಪದವಿ ಕಾಲೇಜುಗಳ ಬಗ್ಗೆ ಚರ್ಚೆ ನಡೆಯಿತು. ಎಷ್ಟು ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಿದ್ದಾರೆ. ಪರೀಕ್ಷೆ ಮಾಡಿಸಿದಾಗ ಎಷ್ಟು ವಿದ್ಯಾರ್ಥಿಗಳಿಗೆ ಸೋಂಕು ಬಂದಿದೆ ಎನ್ನುವುರ ಬಗ್ಗೆ ಚರ್ಚೆ ನಡೆಯಿತು.
ಈ ವೇಳೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ವರದಿಯನ್ನು ಸಚಿವ ಸುರೇಶ್ ಕುಮಾರ್ ಸಿಎಂಗೆ ಸಲ್ಲಿಸಿದರು. ಶಾಲೆಗೆ ಮಕ್ಕಳನ್ನು ಕಳುಹಿಸಲು ಪೋಷಕರು ಹಿಂಜರಿಯುತ್ತಿದ್ದು, ಶಿಕ್ಷಕರಿಗೂ ಶಾಲೆಗಳಿಗೆ ಬರಲು ತೊಂದರೆಗಳಾಗುತ್ತಿವೆ ಎಂದು ಚರ್ಚೆಯ ನಡುವೆ ಕೇಳಿಬಂದವು.
ಸಭೆಯಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್, ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು. ಆರೋಗ್ಯ ಸಚಿವ ಡಾ. ಸುಧಾಕರ್ ವೀಡಿಯೊ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗವಹಿಸಿದರು.
ಡಿಸೆಂಬರ್ ತಿಂಗಳಲ್ಲಿ ಕೊರೊನ ಎರಡನೇ ಅಲೆ ಅಪ್ಪಳಿಸಲಿದೆ. ಇದು ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ನಮ್ಮ ರಾಜ್ಯದಲ್ಲಿ ಈಗಾಗಲೇ ಚಳಿಗಾಲ ಆರಂಭವಾಗಿದೆ. ಹೀಗಾಗಿ ಡಿಸೆಂಬರ್ ಅಂತ್ಯದ ವರೆಗೂ ತಜ್ಞರು ಕೂಡ ಶಾಲೆ ಆರಂಭ ಬೇಡ ಎಂಬ ಸಲಹೆ ನೀಡಿದ್ದಾರೆ ಎಂದು ಸುಧಾಕರ್ ಅವರು ತಿಳಿಸಿದರು.