ಕರಾಚಿ ಮುಂದೊಂದು ದಿನ ಭಾರತದ ಭಾಗವಾಗಲಿದೆ : ದೇವೇಂದ್ರ ಫಡ್ನವೀಸ್

Prasthutha|

ನಾಗ್ಪುರ : ಪಾಕಿಸ್ತಾನದ ಕರಾಚಿ ಮುಂದೊಂದು ದಿನ ಭಾರತದ ಭಾಗವಾಗಲಿದೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ಫಡ್ನವೀಸ್ ಅವರ ಈ ಹೇಳಿಕೆಯ ಬಗ್ಗೆ ವ್ಯಂಗ್ಯವಾಡಿರುವ ಮಹಾರಾಷ್ಟ್ರ ಸರಕಾರದ ಸಚಿವ ನವಾಬ್ ಮಲಿಕ್, ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶವನ್ನು ವಿಲೀನ ಮಾಡುವ ‘ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ನಿರ್ಧಾರವನ್ನು’ ಎನ್ ಸಿಪಿ ಸ್ವಾಗತಿಸುತ್ತದೆ ಎಂದಿದ್ದಾರೆ.

ಶಿವಸೇನಾ ನಾಯಕರೊಬ್ಬರು ಇತ್ತೀಚೆಗೆ ಮುಂಬೈಯಲ್ಲಿ ‘ಕರಾಚಿ ಸ್ವೀಟ್ಸ್’ ಬೇಕರಿ ಹೆಸರು ಬದಲಾಯಿಸುವಂತೆ ಒತ್ತಾಯಿಸಿದ ಘಟನೆಯ ಹಿನ್ನೆಲೆಯಲ್ಲಿ ಫಡ್ನವೀಸ್ ಈ ಹೇಳಿಕೆ ಹೊರಬಂದಿತ್ತು.

- Advertisement -

“ನಾವು ಅಖಂಡ ಭಾರತದ ಬಗ್ಗೆ ವಿಶ್ವಾಸ ಹೊಂದಿದ್ದೇವೆ. ಮುಂದೊಂದು ದಿನ ಕರಾಚಿ ಭಾರತದ ಭಾಗವಾಗಲಿದೆ ಎಂಬ ಭರವಸೆಯನ್ನೂ ನಾವು ಹೊಂದಿದ್ದೇವೆ’’ ಎಂದು ಫಡ್ನವಿಸ್ ಪತ್ರಕರ್ತರೊಂದಿಗೆ ಮಾತನಾಡುತ್ತಾ ತಿಳಿಸಿದ್ದರು.

ಫಡ್ನವೀಸ್ ರ ಈ ಹೇಳಿಕೆಯನ್ನು ಎನ್ ಸಿಪಿ ಬೆಂಬಲಿಸಲಿದೆ ಎಂದು ಸಚಿವ ನವಾಬ್ ಮಲಿಕ್ ಹೇಳಿದ್ದಾರೆ. “ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ವಿಲೀನವಾಗಬೇಕೆಂದು ನಾವು ಹೇಳುತ್ತಾ ಬಂದಿದ್ದೇವೆ. ಬರ್ಲಿನ್ ಗೋಡೆ ಧ್ವಂಸಗೊಳ್ಳಬಹುದಾದರೆ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಯಾಕೆ ಒಂದಾಗಬಾರದು? ಬಿಜೆಪಿ ಈ ಮೂರು ದೇಶಗಳನ್ನು ಒಂದುಗೂಡಿಸಲು ಬಯಸುವುದಾದರೆ, ನಾವು ಖಚಿತವಾಗಿ ಅದನ್ನು ಸ್ವಾಗತಿಸುತ್ತೇವೆ’’ ಎಂದು ನವಾಬ್ ಮಲಿಕ್ ತಿಳಿಸಿದ್ದಾರೆ.

- Advertisement -