►ಹಿಜಾಬ್ ಹಕ್ಕು ಕಸಿದುಕೊಂಡಿರುವುದು ನನ್ನ ಮನ ನೋಯಿಸಿದೆ
ಮಂಗಳೂರು: ಮೈಸೂರಿನ ಎಂ ಎಸ್ಸಿ ಬಾಟನಿ ವಿಭಾಗದ ಪರೀಕ್ಷೆಯಲ್ಲಿ ಪ್ರಥಮ ಸ್ಥಾನಿಯಾಗಿ ತೇರ್ಗಡೆಗೊಂಡು, ಏಳು ಚಿನ್ನದ ಪದಕಗಳಿಗೆ ಮತ್ತು ಎರಡು ನಗದು ಉಡುಗೊರೆಗೆ ಹಿಜಾಬ್ ಧಾರಿಣಿ ವಿದ್ಯಾರ್ಥಿನಿಯೊಬ್ಬರು ಭಾಜನರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಲಮೀಯ ಮಜೀದ್ ಅಭೂತಪೂರ್ವ ಯಶಸ್ಸನ್ನು ಗಿಟ್ಟಿಸಿದ ವಿದ್ಯಾರ್ಥಿನಿಯಾಗಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು ‘ಹಿಜಾಬ್ ಹಕ್ಕು ಕಸಿದುಕೊಂಡಿರುವುದು ನನ್ನ ಮನ ನೋಯಿಸಿದೆ. ಹಿಜಾಬ್ ಧರಿಸಿಯೇ ನಾನು ಶಾಲೆ–ಕಾಲೇಜಿಗೆ ಹೋಗಿದ್ದೆ. ನನ್ನಂಥ ಹಲವು ಹುಡುಗಿಯರ ಅವಕಾಶವನ್ನೇ ಈಗ ಕಿತ್ತುಕೊಂಡು ಅನ್ಯಾಯವೆಸಗಿದ್ದಾರೆ ಎಂಬ ಭಾವನೆ ಮೂಡಿದೆ’ ಎಂದು ಹೇಳಿದರು
ಎಸ್ಸೆಸ್ಸೆಲ್ಸಿ ಬಳಿಕದ ತರಗತಿಗಳಿಗಾದರೂ ಹಿಜಾಬ್ ಧರಿಸಲು ಅವಕಾಶ ನೀಡಬೇಕಿತ್ತು. ನಮಗೂ ಒಂದು ಜೀವನ ಶೈಲಿಯಿದ್ದು, ಅದನ್ನು ಗೌರವಿಸಬಹುದೆಂಬ ನಿರೀಕ್ಷೆ ಇಟ್ಟುಕೊಂಡಿದ್ದೆ. ಆದರೆ, ಹೊರಗಡೆ ಹಿಜಾಬ್ ಧರಿಸಿ ಓಡಾಡುವವರನ್ನೂ ಅನುಮಾನದಿಂದ ನೋಡುವಂಥ ಪರಿಸ್ಥಿತಿಗೆ ತಂದಿಟ್ಟಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಜೀವನ ಪದ್ಧತಿ ಹಾಗೂ ಶಿಕ್ಷಣ– ಇವೆರಡರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿ ಎಂದು ಹೇಳಿರುವುದರಿಂದ ಬದುಕು ಅಯೋಮಯವಾಗಿದೆ. ಇಂಥ ಆಯ್ಕೆಯ ಅನಿವಾರ್ಯ ನಮಗ್ಯಾಕೆ?’ ಎಂದು ಪ್ರಶ್ನಿಸಿದರು.
ಬಿಪಿಸಿಎಲ್ ನ ನಿವೃತ್ತ ಉದ್ಯೋಗಿಯಾಗಿರುವ ಎಸ್.ಎ.ಮಜೀದ್ ಹಾಗೂ ಆಫಿಯಾ ಶೇಕ್ ದಂಪತಿಗಳ ಮಗಳಾಗಿರುವ ಲಮೀಯ ವಿಜ್ಞಾನಿಯಾಗುವ ಬಯಕೆ ಹೊಂದಿದ್ದಾರೆ. ಈ ದಂಪತಿಯ ಇನ್ನಿಬ್ಬರು ಪುತ್ರಿಯರು ಎಂಜಿನಿಯರ್ ಗಳಾಗಿದ್ದಾರೆ.