ಎರಡು ತಿಂಗಳ ಹೆಣ್ಣು ಮಗು ಮೈಕ್ರೋವೇವ್‍ ಓವೆನ್’ನಲ್ಲಿ ಶವವಾಗಿ ಪತ್ತೆ !

Prasthutha|

ನವದೆಹಲಿ: ಎರಡು ತಿಂಗಳು ಪ್ರಾಯದ ಹೆಣ್ಣು ಮಗುವಿನ ಮೃತದೇಹವು ಮೈಕ್ರೋವೇವ್ ಓವೆನ್’ನಲ್ಲಿ ಪತ್ತೆಯಾಗಿರುವ ಆಘಾತಕಾರಿ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ.
ದಕ್ಷಿಣ ದೆಹಲಿಯ ಚಿರಾಗ್ ಪ್ರದೇಶದ ಗುಲ್ಶನ್ ಕೌಶಿಕ್ ಹಾಗೂ ಡಿಂಪಲ್ ಕೌಶಿಕ್ ದಂಪತಿಗೆ 4 ವರ್ಷದ ಮಗನಿದ್ದು, ಕಳೆದ ಜನವರಿಯಲ್ಲಿ ಹೆಣ್ಣು ಮಗುವೊಂದು ಜನಿಸಿತ್ತು. ಆದರೆ ಹೆಣ್ಣು ಮಗುವಿನ ಬಗ್ಗೆ ಅಸಮಾಧಾನ ಹೊಂದಿದ್ದ ತಾಯಿ, ಈ ವಿಚಾರದಲ್ಲಿ ಪ್ರತಿನಿತ್ಯ ಪತಿಯ ಜೊತೆ ಜಗಳವಾಡುತ್ತಿದ್ದರು ಎನ್ನಲಾಗಿದೆ. ಮಗುವಿನ ಸಾವಿನ ಬಗ್ಗೆ ಪೊಲೀಸರಿಗೆ ನೆರೆಹೊರೆಯವರು ಮಾಹಿತಿ ನೀಡಿದ್ದಾರೆ. ಘಟನೆ ನಡೆದ ಮನೆಯ ಹೊರಭಾಗದಲ್ಲಿ ಬೀಗ ಹಾಕಲಾಗಿತ್ತು. ಮನೆಯ ಒಳಗಡೆ ಡಿಂಪಲ್ ಕೌಶಿಕ್ ಹಾಗೂ ಆಕೆಯ ಅತ್ತೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. “ನಾವು ಗಾಜು ಒಡೆದು ಕೋಣೆಗೆ ಪ್ರವೇಶಿಸಿದ ವೇಳೆ ಮಹಿಳೆ ತನ್ನ ಮಗನೊಂದಿಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಳು, ಆದರೆ ಎರಡು ತಿಂಗಳ ಮಗು ಅನನ್ಯಾ ಕಾಣೆಯಾಗಿತ್ತು. ಮಗುವನ್ನು ಮನೆಯಲ್ಲಿ ಹುಡುಕಿದಾಗ 2ನೇ ಮಹಡಿಯಲ್ಲಿದ್ದ ಮೈಕ್ರೋವೇವ್‍ ಓವನ್’ನಲ್ಲಿ ಪತ್ತೆಯಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಹೆಣ್ಣು ಮಗುವಿನ ಜನನದ ಬಳಿಕ ತಮ್ಮ ಪತಿಯೊಂದಿಗೆ ಮಗುವಿನ ತಾಯಿ ದಿನನಿತ್ಯ ಜಗಳವಾಡುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.




Join Whatsapp