ಬೆಂಗಳೂರು : ಐಎಂಎ ಬಹುಕೋಟಿ ಹಗರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟಿರುವ ಮಾಜಿ ಸಚಿವ ರೋಷನ್ ಬೇಗ್ ಅವರ ನಿವಾಸದ ಮೇಲೆ ಇಂದು ಬೆಳಗ್ಗಿನ ಜಾವ ಸಿಬಿಐ ದಾಳಿ ನಡೆದಿದೆ.
ದೆಹಲಿ ಮೂಲದ ಹದಿಮೂರು ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ದಾಖಲೆಗಳಿಗಾಗಿ ಶೋಧ ನಡೆಸುತ್ತಿದೆ. ಪುಲಿಕೇಶಿ ನಗರದ ಕೋಲ್ಸ್ ಪಾರ್ಕ್ ಬಳಿ ಇರುವ ಬೇಗ್ ಮನೆಯಲ್ಲಿ ದಾಖಲೆಗಳ ಪರಿಶೀಲನೆ ಕಾರ್ಯ ಮುಂದುವರಿದಿದೆ.
ಬೆಳಗಿನ ಜಾವ ಇಬ್ಬರು ಮಹಿಳಾ ಅಧಿಕಾರಿಗಳು ಸೇರಿದಂತೆ ಸಿಬಿಐ ಅಧಿಕಾರಿಗಳ ತಂಡ ರೋಷನ್ ಬೇಗ್ ಮನೆ ಮೇಲೆ ದಾಳಿ ನಡೆಸಿದೆ. ತಂಡ ಮನೆಯವರ ಮೊಬೈಲ್ ಗಳನ್ನು ವಶಕ್ಕೆ ತೆಗೆದುಕೊಂಡಿದೆ.
ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ ನಿನ್ನೆಯಷ್ಟೇ ರೋಷನ್ ಬೇಗ್ ಅವರನ್ನು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ವಿಚಾರಣೆ ಬಳಿಕ, ಕೋರಮಂಗಲದಲ್ಲಿರುವ ನ್ಯಾಯಾಧೀಶರ ಮನೆ ಮುಂದೆ ಹಾಜರು ಪಡಿಸಲಾಗಿತ್ತು. ನ್ಯಾಯಾಲಯ ಬೇಗ್ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಪ್ರಸ್ತುತ ಬೇಗ್ ಅವರು ಪರಪ್ಪನ ಅಗ್ರಹಾರ ಜೈಲಿನ ಕ್ವಾರಂಟೈನ್ ಸೆಂಟರ್ ನಲ್ಲಿದ್ದಾರೆ.
ಐಎಂಎ ವಂಚನೆ ಪ್ರಕರಣದಲ್ಲಿ ಬೇಗ್ ಅವರ ಹೆಸರು ಆರಂಭದಲ್ಲೇ ಕೇಳಿ ಬಂದಿತ್ತು. ಕೋಟ್ಯಂತರ ರೂ. ಹಣ, ಚಿನ್ನಾಭರಣ ಬೇಗ್ ಅವರು ಪಡೆದಿದ್ದರು ಎಂಬ ಆರೋಪವಿದೆ.