ಶ್ರೀನಗರ : ಕಳೆದ ಜು. 18ರಂದು ಸೇನೆಯು ನಡೆಸಿದ ದಾಳಿಯಲ್ಲಿ ಮೃತಪಟ್ಟಿರುವ ಮೂವರು ಅಪರಿಚಿತ ಶಂಕಿತ ಉಗ್ರರು ಸಾಮಾನ್ಯ ಕಾರ್ಮಿಕರು ಎಂದು ಈಗ ಅವರ ಕುಟುಂಬಸ್ಥರು ಪ್ರತಿಪಾದಿಸಿದ್ದಾರೆ. ಜಮ್ಮು ಕಾಶ್ಮೀರದ ಶೋಫಿಯಾನ್ ಜಿಲ್ಲೆಯಲ್ಲಿ ನಡೆದಿದ್ದ ಗುಂಡಿನ ಚಕಮಕಿಯಲ್ಲಿ ಮೂವರು ಅಪರಿಚಿತ ಉಗ್ರರು ಮೃತಪಟ್ಟಿದ್ದಾರೆ ಎಂದು ಸೇನೆ ಹೇಳಿತ್ತು. ಇದೀಗ ಮೃತರ ಫೋಟೊಗಳನ್ನು ನೋಡಿ, ಅವರು ತಮ್ಮ ಸಂಬಂಧಿಕರು, ಸಾಮಾನ್ಯ ಕಾರ್ಮಿಕರು, ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದರು ಎಂದು ರಜೌರಿಯ ಕುಟುಂಬವೊಂದು ಹೇಳಿದೆ.
ಕುಟುಂಬಸ್ಥರ ಆಪಾದನೆಗಳು ನಿಜವೇ ಆಗಿದ್ದಲ್ಲಿ, ಇದು 2000ರಲ್ಲಿ ಅನಂತನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಐವರು ನಾಗರಿಕರನ್ನು ಹತ್ಯೆಗೈದು, ಅವರನ್ನು ಉಗ್ರರೆಂದು ಗುರುತಿಸಲಾದ ಮತ್ತು ಮೂವರು ನಾಗರಿಕರು ಹತ್ಯೆಯಾದ 2010ರ ಮಚಿಲ್ ಎನ್ ಕೌಂಟರ್ ಪ್ರಕರಣದ ಸಾಲಿಗೆ ಈ ಪ್ರಕರಣವೂ ಸೇರುತ್ತದೆ.
ಯುವಕರ ಕುಟುಂಬವು ಗುರುವಾರ ನಾಪತ್ತೆ ಪ್ರಕರಣ ದಾಖಲಿಸಿದೆ. ಇಮ್ತಿಯಾಜ್ ಅಹಮದ್ ಎಂಬಾತ ಶೋಫಿಯಾನ್ ನಲ್ಲಿ ಒಂದು ತಿಂಗಳಿನಿಂದ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಕೆಲವು ದಿನಗಳ ಹಿಂದೆ ತಮ್ಮ ಮಗ ಅಬ್ರಾರ್ ಮತ್ತು ನಾದಿನಿಯ ಮಗನನ್ನು ಆತ ಕೆಲಸಕ್ಕಾಗಿ ಕರೆಸಿಕೊಂಡಿದ್ದ. ಜು.16ರಂದು ಅವರು ಶೋಫಿಯಾನ್ ಗೆ ಹೊರಟಿದ್ದರು. ಅದರ ನಂತರ ಅವರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಜು.18ರಂದು ತಾನು ಮಗನಿಗೆ ಫೋನ್ ಮಾಡಿದ್ದೆ. ಆದರೆ, ಫೋನ್ ಸ್ವಿಚ್ ಆಫ್ ಆಗಿತ್ತು ಎಂದು ಅಬ್ರಾರ್ ನ ತಂದೆ ಮುಹಮ್ಮದ್ ಯೂಸಫ್ ಹೇಳಿದ್ದಾರೆ.
ಜು.18ರಂದು ನಡೆದ ಎನ್ ಕೌಂಟರ್ ನಲ್ಲಿ ಮಡಿದವರ ಫೋಟೊಗ್ರಾಫ್ ಗಳನ್ನು ಗಮನಿಸಿ, ಅದು ತಮ್ಮ ಮಕ್ಕಳು ಎಂಬುದನ್ನು ಗುರುತಿಸಬಲ್ಲೆ ಎಂದು ಅವರು ತಿಳಿಸಿದ್ದಾರೆ. ಶೋಫಿಯಾನ್ ಗೆ ತೆರಳಲು ರಜೌರಿ ಜಿಲ್ಲಾಡಳಿತದಿಂದ ಅನುಮತಿ ಕೋರಿದ್ದೇನೆ ಎಂದೂ ಅವರು ಹೇಳಿದ್ದಾರೆ.
ನಾವು ಬಡವರು, ಅವರು ಕೆಲಸಕ್ಕಾಗಿ ಹೋಗಿದ್ದಾರೆ. ದೂರದಿಂದಲೂ ನಮಗೆ ಉಗ್ರರ ಸಂಪರ್ಕವಿಲ್ಲ ಎಂದು ಯೂಸಫ್ ಹೇಳಿದ್ದಾರೆ. ಅವರು ಕೊರೊನಾ ಕ್ವಾರಂಟೈನ್ ನಲ್ಲಿದ್ದಾರೆ ಎಂದುಕೊಂಡಿದ್ದೆವು. ಅವರು ಎಲ್ಲಿದ್ದಾರೆಂದು ಗೊತ್ತಿಲ್ಲ. ಹೀಗಾಗಿ ಈಗ ನಾವು ಪೊಲೀಸ್ ದೂರು ನೀಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಜು.18ರಂದು ಜಮ್ಮು ಕಾಶ್ಮೀರ ಪೊಲೀಸರು ಶೋಫಿಯಾನ್ ನ ಅಂಶಿಪೋರಾ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ್ದರು. ಸೇನೆಯೂ ಬಳಿಕ ಅವರೊಂದಿಗೆ ಕೈಜೋಡಿಸಿತ್ತು. ಈ ವೇಳೆ ಮೂವರು ಅಪರಿಚಿತ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಭದ್ರತಾ ಸಿಬ್ಬಂದಿ ಪ್ರತಿಪಾದಿಸಿದ್ದರು.