ರಾಮನಗರ: ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ರೇಷ್ಮೆಗೂಡು ಖರೀದಿಗೆ ರೀಲರ್ ಗಳು ಬಾರದ ಹಿನ್ನೆಲೆಯಲ್ಲಿ ಬೆಂಗಳೂರು- ಮೈಸೂರು ಹೆದ್ದಾರಿ ತಡೆದು ರೈತರು ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆಯಿತು.
ಹಿಜಾಬ್ ತೀರ್ಪು ವಿರೋಧಿಸಿ ಮುಸ್ಲಿಂ ಸಂಘಟನೆಗಳು ಕರೆ ನೀಡಿದ್ದ ಕರ್ನಾಕಟ ಬಂದ್ ಹಿನ್ನೆಲೆಯಲ್ಲಿ ಚನ್ನಪಟ್ಟಣದ ರೇಷ್ಮೆ ಮಾರುಕಟ್ಟೆಗೆ ಮುಸ್ಲಿಂ ರೀಲರ್ ಗಳು ಆಗಮಿಸಿರಲಿಲ್ಲ. ಪರಿಣಾಮ ರೈತರ ರೇಷ್ಮೆಗೂಡು ಖರೀದಿಗೆ ರೀಲರ್ಸ್ ಮುಂದಾಗಿಲ್ಲ. ಸ್ಥಳಕ್ಕೆ ಆಗಮಿಸಿದ ಚನ್ನಪಟ್ಟಣ ಪೊಲೀಸರು, ರೈತರನ್ನು ಸಮಾಧಾನಪಡಿಸಿದರು.
ಕೂಡಲೇ ರೇಷ್ಮೆ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಆಗ್ರಹಿಸಿ, ರೇಷ್ಮೆಗೂಡು ಖರೀದಿಗೆ ಬದಲಿ ವ್ಯವಸ್ಥೆ ಮಾಡಲು ರೇಷ್ಮೆ ಬೆಳೆಗಾರರು ಒತ್ತಾಯಿಸಿದರು. ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಪೊಲೀಸರಿಂದ ರೈತರ ಮನವೊಲಿಸುವ ಕಾರ್ಯ ನಡೆಯಿತು. ಆದರೂ, ರೇಷ್ಮೆ ಹರಾಜು ಆಗದ ಹಿನ್ನೆಲೆಯಲ್ಲಿ ರೈತರು ಮನೆಯತ್ತ ಗೂಡು ಕೊಂಡೊಯ್ದರು. ಬದಲಿ ವ್ಯವಸ್ಥೆ ಮಾಡುವುದಾಗಿ ರೈತರಿಗೆ ಅಧಿಕಾರಿಗಳು ಮನವಿ ಮಾಡಿದರು.