ಉಡುಪಿ : ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿ ಹೈಕೋರ್ಟ್ ಆದೇಶ ಹೊರಡಿಸಿರುವ ಬೆನ್ನಲ್ಲೇ ಬುಧವಾರ ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅನುಮತಿ ನಿರಾಕರಿಸಿದ್ದರಿಂದ ಒಂಬತ್ತು ವಿದ್ಯಾರ್ಥಿನಿಯರು ಪರೀಕ್ಷೆ ಬಹಿಷ್ಕರಿಸಿ ಮನೆಗೆ ತೆರಳಿದ್ದಾರೆ.
ಕಾಲೇಜ್ ಗೆ ಹಿಜಾಬ್ ಧರಿಸಿಕೊಂಡು ಬಂದ ವಿದ್ಯಾರ್ಥಿನಿಯರೊಂದಿಗೆ ಹಿಜಾಬ್ ತೆಗೆದು ತರಗತಿಗೆ ಪ್ರವೇಶಿಸುವಂತೆ ಪ್ರಾಂಶುಪಾಲರು ಸೂಚನೆ ನೀಡಿದ್ದು, ಇಬ್ಬರು ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ತರಗತಿ ಪ್ರವೇಶಿಸಿದರೆ, ಉಳಿದವರು ನಿರಾಕರಿಸಿ ವಾಪಸ್ ತೆರಳಿದ್ದಾರೆ.
ಹೈಕೋರ್ಟ್ ಆದೇಶದಂತೆ ಹಿಜಾಬ್ ಧರಿಸಲು ಅವಕಾಶ ಇಲ್ಲ ಎಂದು ವಿದ್ಯಾರ್ಥಿನಿಯರಿಗೆ ತಿಳಿ ಹೇಳಲಾಯಿತಾದರೂ ಒಪ್ಪದ ಕಾರಣ ಪ್ರವೇಶ ನಿರಾಕರಿಸಲಾಯಿತು ಎಂದು ಪ್ರಾಂಶುಪಾಲ ಡಾ.ಅನಿಲ್ ಕುಮಾರ್ ತಿಳಿಸಿದರು.
‘ಹಿಜಾಬ್ ಬದುಕಿನ ಭಾಗವಾಗಿದ್ದು, ನಮಗೆ ಶಿಕ್ಷಣ ಮತ್ತು ಹಿಜಾಬ್ ಎರಡೂ ಬೇಕು’ಎಂದು ವಿದ್ಯಾರ್ಥಿನಿಯರು ಹೇಳಿದ್ದಾರೆ.