ಸಭಾಪತಿಯಿಂದ ಕಾಶ್ಮೀರಿ ಫೈಲ್ಸ್ ಚಿತ್ರ ವೀಕ್ಷಣೆಯ ಪ್ರಕಟಣೆ ವಿರೋಧಿಸಿ ಮೇಲ್ಮನೆಯಲ್ಲಿ ಕಾಂಗ್ರೆಸ್ ಧರಣಿ

Prasthutha|

►ಕಾಶ್ಮೀರಿ ಫೈಲ್ಸ್ ಬದಲು ಸೌಹಾರ್ದ ಸಂದೇಶವಿರುವ “ಬಾಬು ಭಜರಂಗಿ” ಪ್ರದರ್ಶಿಸಿ ಎಂದ ಬಿ.ಕೆ.ಹರಿಪ್ರಸಾದ್

- Advertisement -

ಬೆಂಗಳೂರು: ಕಾಶ್ಮೀರಿ ಫೈಲ್ಸ್ ಚಿತ್ರ ವೀಕ್ಷಣೆಯ ಪ್ರಕಟಣೆಯನ್ನು ನಿಷ್ಟಕ್ಷಪಾತವಾಗಿ ವರ್ತಿಸಬೇಕಾಗಿದ್ದ ಸಭಾಪತಿ ಹೊರಡಿಸಿರುವುದು ಸರಿಯಲ್ಲ ಎಂದು ಆಕ್ಷೇಪಿಸಿ ಕಾಂಗ್ರೆಸ್ ಸದಸ್ಯರು ವಿಧಾನ ಪರಿಷತ್ ನಲ್ಲಿ ಧರಣಿ ನಡೆಸಿದ ಪ್ರಸಂಗ ಮಂಗಳವಾರ ನಡೆಯಿತು.

  ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿ ಅವರು, ಕಾಶ್ಮೀರಿ ಫೈಲ್ಸ್ ಚಿತ್ರ ವೀಕ್ಷಣೆಗೆ ಸರ್ಕಾರ ನಗರದ ವಿವಿಧ ಚಿತ್ರಮಂದಿರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಸಂಜೆ 6.30ರ ನಂತರ ಆಸಕ್ತರು ಸದಸ್ಯರು ಚಿತ್ರ ವೀಕ್ಷಣೆ ಮಾಡಬಹುದು ಎಂದು ಆಹ್ವಾನಿಸಿದರು.

- Advertisement -

ಇದಕ್ಕೆ ಆಕ್ಷೇಪಿಸಿದ ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ , ಚಿತ್ರ ವೀಕ್ಷಣೆಯ ಪ್ರಕಟಣೆಯನ್ನು ಸರ್ಕಾರ ಬೇಕಿದ್ದರೆ ಹೊರಡಿಸಲಿ, ನಿಷ್ಪಕ್ಷಪಾತವಾಗಿ ವರ್ತಿಸಬೇಕಿರುವ ಸಭಾಪತಿ ಪೀಠದಿಂದ ಇಂತಹ ಪ್ರಕಟಣೆ ಹೊರಡಬಾರದು. ಫರ್ಜಾನ ಹಾಗೂ ವಾಟರ್ ಎಂಬ ಚಿತ್ರಗಳು ಇವೆ, ಅವುಗಳನ್ನು ತೋರಿಸುತ್ತಿರಾ ಎಂದು ಹರಿಹಾಯ್ದರು.

ಸರ್ಕಾರ ಬಲವಂತವಾಗಿ ಏಕೆ ಈ ಚಿತ್ರವನ್ನು ತೋರಿಸುತ್ತಿದೆ ಎಂದು ಹರಿಪ್ರಸಾದ್ ಪ್ರಶ್ನಿಸಿದಾಗ, ಕಾಂಗ್ರೆಸ್ ನ ಸಲೀಂ ಅಹ್ಮದ್  ಬಜೆಟ್ ಮೇಲೆ ಚರ್ಚೆ ಮಾಡುವುದನ್ನು ಬಿಟ್ಟು ಸಿನಿಮಾ ತೋರಿಸುತ್ತಿರುವುದು ಏಕೆ ಎಂದರು. ಸಚಿವ ಸೋಮಶೇಖರ್, ಇಷ್ಟ ಇದ್ದರು ಸಿನಿಮಾ ನೋಡಲಿ, ಬೇಡವಾದವರು ಬಿಡಲಿ, ಯಾರಿಗೂ ಕಡ್ಡಾಯವಿಲ್ಲ ಎಂದು ಸಮರ್ಥನೆ ನೀಡಿದರು.

ಇದರಿಂದ ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ಗದ್ದಲ ಉಂಟಾಯಿತು. ಬಾಬು ಭಜರಂಗಿ ಎಂಬ ಸಿನಿಮಾ ಇದೆ ಅದರಲ್ಲಿ ಸೌಹಾರ್ದತೆಯ ಸಂದೇಶವಿದೆ. ಅದನ್ನು ತೋರಿಸಿ. ಬಿಜೆಪಿ ದ್ವೇಷ ಬೀತ್ತುವ ಕೆಲಸ ಮಾಡುತ್ತಿದೆ. ಅಸೂಯೆ ಭಾವನೆ ಮೂಡಿಸಲು ಪ್ರಯತ್ನಿಸುತಿದೆ ಎಂದು ಆರೋಪಿಸಿದರು.

ಸಭಾಧ್ಯಕ್ಷ ಪೀಠದಿಂದ ಹೊರಡಿಸಲಾದ ಪ್ರಕಟಣೆಯನ್ನು ಹಿಂಪಡೆಯಬೇಕು ಎಂದು ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದು, ಸಭಾಪತಿ ಪೀಠದ ಮುಂದಿನ ಬಾವಿಗಿಳಿದು ಧರಣಿ ನಡೆಸಿದರು.

ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, ನಿಮ್ಮ ಆರ್ಭಟ ಇಲ್ಲಿ ನಡೆಯುವುದಿಲ್ಲ. ಪಂಚರಾಜ್ಯ ಚುನಾವಣೆಯಲ್ಲಿ ಜನ ನಿಮಗೆ ಉತ್ತರ ಕೊಟ್ಟಿದ್ದಾರೆ. ಕಾಶ್ಮೀರಿ ಫೈಲ್ ಚಿತ್ರಕ್ಕೆ ವಿರೋಧ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಪ್ರತ್ಯುತ್ತರಿಸಿದರು.

ಸರ್ಕಾರ ಹಲವು ಪ್ರಕಟಣೆಗಳನ್ನು ಕಳುಹಿಸುತ್ತದೆ. ಅದನ್ನು ನಾನು ಓದುವುದು ಅನಿವಾರ್ಯ ಎಂದು ಸಭಾಪತಿ ಸ್ಪಷ್ಟನೆ ನೀಡಿದರು.

ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ , ವಿರೋಧ ಪಕ್ಷದವರು ವಿರೋಧ ಮಾಡುತ್ತಿರುವುದೇಕೆ ಎಂದೇ ಅರ್ಥವಾಗುತ್ತಿಲ್ಲ. ವಿಪಕ್ಷ ನಾಯಕರು ತಾಳ್ಮೆಯಿಂದ ವರ್ತಿಸಬೇಕು. ಮೀತಿ ಮೀರಿ ಮಾತನಾಡಬಾರದು ಎಂದು ಹೇಳಿದರು.

ನಾವು ಯಾವ ಸಿನಿಮಾ ನೋಡಬೇಕು ಎಂಬುದನ್ನು ಸದನದಲ್ಲಿ ಹೇಳುವ ಹಾಗಿಲ್ಲ. ಅದು ನಮ್ಮ ಸ್ವಾತಂತ್ರ್ಯ. ವಿಧಾನಸಭೆಯಲ್ಲಿ ಕೆಲವರು ಆಕ್ಷೇಪಾರ್ಹ ಚಿತ್ರಗಳನ್ನು ನೋಡಿದ್ದಾರೆ. ಹಾಗಾದರೆ ನಾವು ಆ ಚಿತ್ರಗಳನ್ನು ನೋಡಬೇಕೇ? ಸರ್ಕಾರ ಜನರ ಸೇವೆ ಮಾಡಲು ಇರುವುದು, ಪಿಕ್ಚರ್ ತೋರಿಸಲು ಇರುವುದಲ್ಲ ಎಂದಾಗ, ಸಚಿವ ಭೈರತಿ ಬಸವರಾಜ್ ಮಾತನಾಡಿ, ಇದೇ ಧೋರಣೆಯಿಂದಾಗಿ ಕಾಂಗ್ರೆಸ್ ಪಂಚರಾಜ್ಯ ಚುನಾವಣೆಯಲ್ಲಿ ಸೋಲು ಕಂಡಿದೆ ಎಂದು ಮೂದಲಿಸಿದರು.

 ಹರಿಪ್ರಸಾದ್ ಅವರು, ನಿಮ್ಮ ಬಗ್ಗೆ ನಮಗೆ ಚೆನ್ನಾಗಿ ಗೊತ್ತಿದೆ ಕುಳಿತುಕೊಳ್ಳಿ. ಬಿಬಿಎಂಪಿ ಸದಸ್ಯರಾಗಲು, ಶಾಸಕರಾಗಲು ಕಾಂಗ್ರೆಸ್ ಬೇಕಿತ್ತು. ಮಂತ್ರಿಯಾಗಲಿಕ್ಕೆ ಬಿಜೆಪಿಗೆ ಹೋಗಿದ್ದಾರೆ ಎಂದಾಗ, ನ್ಯಾಯಯುತವಾಗಿ ಗೆದ್ದು ಬಂದಿದ್ದೇವೆ. ನೀವು ಏನು ಎಂಬುದು ಜನರಿಗೆ ಗೊತ್ತಿದೆ ಎಂದು ಭೈರತಿ ಪ್ರತಿಕ್ರಿಯಿಸಿದರು. ಆಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಕಲಾಪ ತಹಬದಿಗೆ ಬರದಿದ್ದಾಗ ಸಭಾಪತಿಯವರು ಕಲಾಪವನ್ನು ಕೆಲಕಾಲ ಮುಂದೂಡಿದರು. ಸದನ ಮತ್ತೆ ಸಮಾವೇಶಗೊಂಡಾಗಲೂ ಇದೇ ವಿಷಯ ಚರ್ಚೆಯಾಯಿತು. ಕಾಶ್ಮೀರದಲ್ಲಿ ಪಂಡಿತರ ಸಾವಿನ ವಿಷಯದಲ್ಲಿ ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದು ಹರಿಪ್ರಸಾದ್ ಆಕ್ಷೇಪಿಸಿದರು. ವಿವಾದ ಅನಗತ್ಯವಾಗಿ ಬೆಳೆಸುವುದು ಬೇಡ. ಇಷ್ಟವಿದ್ದರು ಸಿನಿಮಾ ನೋಡಲಿ, ಇಲ್ಲದಿದ್ದವರು ಬೇಡ ಎಂದು ಹೇಳುವ ಮೂಲಕ ಸಭಾಪತಿಯವರು ವಿವಾದಕ್ಕೆ ತೆರೆ ಎಳೆದು ಪ್ರಶ್ನೋತ್ತರವನ್ನು ಕೈಗೆತ್ತಿಕೊಂಡರು



Join Whatsapp