ತಮ್ಮ ವಿರುದ್ಧ 70 ಕ್ಷುಲ್ಲಕ ದೂರು ನೀಡಿದ ವ್ಯಕ್ತಿಯನ್ನು ಕ್ಷಮಿಸಿದ ಅಝೀಮ್ ಪ್ರೇಮ್ ಜೀ: ಸುಪ್ರೀಂಕೋರ್ಟ್ ಶ್ಲಾಘನೆ

Prasthutha|

ನವದೆಹಲಿ: ವಿಪ್ರೋ ಮಾಜಿ ಅಧ್ಯಕ್ಷ ಅಝೀಮ್ ಪ್ರೇಮ್ ಜಿ ವಿರುದ್ಧ ಸುಮಾರು 70 ಪ್ರಕರಣಗಳನ್ನು ದಾಖಲಿಸಿದ್ದ ಆರ್ ಸುಬ್ರಮಣಿಯನ್ ವಿರುದ್ಧ ಹೂಡಲಾಗಿದ್ದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ್ದ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಮೂರು ವರ್ಷಗಳ ಕಾಲ ಅಮಾನತಿನಲ್ಲಿರಿಸಿದೆ. 

- Advertisement -

ಸುಬ್ರಮಣಿಯನ್ ಅವರು ತಾವು ಸಲ್ಲಿಸಿದ್ದ ದೂರು ಕ್ಷುಲ್ಲಕ ಎಂದು ಒಪ್ಪಿಕೊಂಡು ಪ್ರೇಮ್ ಜೀ ಅವರಲ್ಲಿ ಬೇಷರತ್ ಕ್ಷಮೆ ಯಾಚಿಸಿದ್ದರಿಂದ ಪ್ರೇಮ್ ಜೀ ವಿರುದ್ಧ ಅವರು ಸಲ್ಲಿಸಿದ್ದ ವಿವಿಧ ಕ್ರಿಮಿನಲ್ ಮೊಕದ್ದಮೆಗಳನ್ನು ಕೂಡ ನ್ಯಾಯಾಲಯ ರದ್ದುಪಡಿಸಿತು.

ದೂರುದಾರರ ನಡೆಯನ್ನು ಸಹಾನುಭೂತಿಯಿಂದ ಕಂಡ ಮತ್ತು ಅವರನ್ನು ಕ್ಷಮಿಸಲು ಒಪ್ಪಿದ ಪ್ರೇಮ್ ಜೀ ಅವರನ್ನು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಮತ್ತು ಎಂ ಎಂ ಸುಂದರೇಶ್ ಅವರಿದ್ದ ಪೀಠ ಇದೇ ಸಂದರ್ಭದಲ್ಲಿ ಶ್ಲಾಘಿಸಿತು.

- Advertisement -

ಅಜೀಂ ಪ್ರೇಮ್ ಜೀ ಅವರು ಪ್ರಕರಣದ ಬಗ್ಗೆ ರಚನಾತ್ಮಕ ನಿಲುವು ತಳೆದಿದ್ದಾರೆ. ಅದರಲ್ಲಿಯೂ ಸುಬ್ರಮಣಿಯನ್ ಅವರು ಎದುರಿಸಿದ ಹಣಕಾಸಿನ ಸಮಸ್ಯೆಗಳ ದೃಷ್ಟಿಯಿಂದ ಅವರ ಹಿಂದಿನ ನಡೆಯನ್ನು ಕ್ಷಮಿಸಲು ಒಪ್ಪಿದ್ದಾರೆ ಎಂಬುದನ್ನು ತಿಳಿಯಲು ನಾವು ಹರ್ಷ ಪಡುತ್ತೇವೆ ಎಂದು ನ್ಯಾಯಾಲಯ ಹೇಳಿದೆ.

ಕ್ಷುಲ್ಲಕ ಪ್ರಕರಣ ದಾಖಲಿಸಿ ಕರ್ನಾಟಕ ಹೈಕೋರ್ಟ್ನಿಂದ ಜನವರಿಯಲ್ಲಿ ನ್ಯಾಯಾಂಗ ನಿಂದನೆ ಶಿಕ್ಷೆಗೆ ಗುರಿಯಾಗಿದ್ದ ಸುಬ್ರಮಣಿಯನ್ ಅವರು ಪ್ರೇಮ್ ಜೀ ಅವರ ಬಳಿ ಬೇಷರತ್ ಕ್ಷಮೆ ಯಾಚಿಸಬೇಕು ಎಂದು ಪೀಠ ಸೂಚಿಸಿತ್ತು. ಇತ್ತ ರಾಮಸುಬ್ರಮಣಿಯನ್ ಬಗ್ಗೆ ಸಹಾನುಭೂತಿಯ ನಿಲುವು ತಳೆಯುವಂತೆ ಪ್ರೇಮ್ ಜೀ ಪರ ವಕೀಲ ಮುಕುಲ್ ರೋಹಟ್ಗಿ ಅವರಿಗೆ ನ್ಯಾಯಾಲಯ ತಿಳಿಸಿತ್ತು.



Join Whatsapp