ಉತ್ತರ ಪ್ರದೇಶದಲ್ಲಿ ನಿಜಕ್ಕೂ ಗೆದ್ದವರು ಯಾರು?

Prasthutha|

ಉತ್ತರ ಪ್ರದೇಶದಲ್ಲಿ ಜನ ಬೆಂಬಲ ಇದ್ದೂ ಅಧಿಕಾರಕ್ಕೆ ಬರುವಲ್ಲಿ ಸಮಾಜವಾದಿ ಪಕ್ಷ ವಿಫಲವಾಗಿದೆ. ಮತವಿಭಜನೆಯ ರಾಜಕೀಯ ತಂತ್ರ ಬಿಜೆಪಿಗೆ ವರವಾಗಿ ಪರಿಣಮಿಸಿ ಅಧಿಕಾರ ಗದ್ದುಗೆಗೆ ಏರಿಸಿದೆ.

- Advertisement -

ಉತ್ತರ ಪ್ರದೇಶದಲ್ಲಿ ಮಾಯಾವತಿಯವರ BSP ಒಟ್ಟು 13% ಮತಗಳನ್ನು ಪಡೆದರೂ ಆಯ್ಕೆ ಆದದ್ದು ಒಬ್ಬ ಎಮ್ಮೆಲ್ಲೆ ಮಾತ್ರ. ರಾಜಕೀಯ ತಂತ್ರಗಾರಿಕೆ ಇಲ್ಲದೆ ಕುರುಡಾಗಿ ವರ್ತಿಸಿದರೆ ಏನಾಗುತ್ತದೆ ಎನ್ನುವುದಕ್ಕೆ ಇದೊಂದು ಉದಾಹರಣೆ.

ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬರದಂತೆ ತಡೆಯುವುದೇ ಮಾಯಾವತಿ ಗುರಿಯಾಗಿತ್ತು ಎನ್ನುವುದು ಸ್ಪಷ್ಟ. ಈ ಗುರಿ ಸಾಧಿಸುವಲ್ಲಿ ಅವರು ಸಫಲರಾದರೂ, ಅವರ ಪಕ್ಷ ದಯನೀಯವಾಗಿ ನೆಲಕಚ್ಚಿರುವುದು ದುರಂತ.

- Advertisement -

122 ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷ ಟಿಕೆಟ್ ನೀಡಿದ ಜಾತಿಯ ಅಭ್ಯರ್ಥಿಗಳಿಗೇ ಬಿಎಸ್ ಪಿ ಟಿಕೆಟ್ ನೀಡಿದೆ. ಸಮಾಜವಾದಿ ಪಕ್ಷ ಮುಸ್ಲಿಮ್ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ 91 ಕ್ಷೇತ್ರಗಳಲ್ಲಿ ಬಿಎಸ್ ಪಿ ಯೂ ಮುಸ್ಲಿಮ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಈ ಎಲ್ಲ ಕ್ಷೇತ್ರಗಳಲ್ಲೂ ಸಮಾಜವಾದಿ ಪಕ್ಷ ಅಲ್ಪ ಅಂತರಗಳಿಂದ ಸೋಲು ಕಂಡಿದೆ.

ಎಲ್ಲ ಕ್ಷೇತ್ರಗಳ ಮತ ವಿಭಜನೆಯನ್ನು ಗಮನಿಸಿದಾಗ ಮತ್ತು ಸಮಾಜವಾದಿ ಪಕ್ಷದ ಅಭ್ಯರ್ಥಿಗಳು ಸೋಲು ಅನುಭವಿಸಿದ ಅಂತರವನ್ನು ಗಮನಿಸಿದಾಗ, 68 ಕ್ಷೇತ್ರಗಳಲ್ಲಿ ಬಿಎಸ್ ಪಿ ಮತ ವಿಭಜನೆಯಿಂದಾಗಿ ಸಮಾಜವಾದಿ ಪಕ್ಷದ ಅಭ್ಯರ್ಥಿಗಳು ಅಲ್ಪ ಅಂತರದಿಂದ (217 ಮತಗಳಿಂದ 1000 ಮತಗಳ ಅಂತರ) ಸೋಲು ಅನುಭವಿಸಿದ್ದಾರೆ.

ಇನ್ನು ಅಸದುದ್ದೀನ್ ಉವೈಸಿಯ AIMIM ಪಕ್ಷದ ಸ್ಪರ್ಧೆಯ ವಿಷಯ. ಉವೈಸಿ ಪಕ್ಷ ಸ್ಪರ್ಧಿಸಿದ್ದು ಒಟ್ಟು 96 ಕ್ಷೇತ್ರಗಳಲ್ಲಿ. (ಹಲವು ಪತ್ರಿಕೆಗಳಲ್ಲಿ ಬಂದಂತೆ 100 ಕ್ಷೇತ್ರ ಅಲ್ಲ.) ಇವುಗಳಲ್ಲಿ 12 ಕ್ಷೇತ್ರಗಳಲ್ಲಿ ಉವೈಸಿ ಅಭ್ಯರ್ಥಿಗಳು ಸಮಾಜವಾದಿ ಪಕ್ಷದ ಅಭ್ಯರ್ಥಿಗಳ ಸೋಲಿಗೆ ಕಾರಣರಾಗಿದ್ದಾರೆ. ಮುಸ್ಲಿಮ್ ಮತದಾರರು ಅತ್ಯಧಿಕ ಸಂಖ್ಯೆಯಲ್ಲಿರುವ ಬಿಜನೋರ್, ನಾಕುಡ್, ಕುರ್ಸಿ, ಶಹಾಗಂಜ್, ಸುಲ್ತಾನ್ ಪುರ್, ಜೌರಾಯಿ, ಮೊರಾದಾಬಾದ್ ನಗರಗಳಲ್ಲಿ ಅತ್ಯಲ್ಪ ಅಂತರದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಗಳು ಸೋತಿದ್ದು ಬಿಜೆಪಿ ಶಾಸಕರು ಆಯ್ಕೆ ಆಗಿದ್ದಾರೆ. (217 ಮತಗಳಿಂದ 1000 ಮತಗಳ ಅಂತರ!)

ಅಂದರೆ ಈ ಎರಡೂ ಪಕ್ಷಗಳ ಮತ ವಿಭಜನೆಯಿಂದಾಗಿ ಒಟ್ಟು 80 ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷ ಸೋತು ಬಿಜೆಪಿ ಗೆದ್ದಂತಾಗಿದೆ.

ಈಗ ಬಿಜೆಪಿ ಗೆದ್ದಿರುವ ಕ್ಷೇತ್ರಗಳ ಸಂಖ್ಯೆ 255. ಇದರಲ್ಲಿ 80 ಕ್ಷೇತ್ರಗಳು ಸಮಾಜವಾದಿ ಪಕ್ಷದ ಪಾಲಾಗಿದ್ದರೆ ಬಿಜೆಪಿಯ ಗೆದ್ದ ಶಾಸಕರ ಸಂಖ್ಯೆ 175 ಕ್ಕೆ ಇಳಿಯುತ್ತಿತ್ತು. ಅಖಿಲೇಶ್ ಯಾದವ್ 191 ಶಾಸಕರ ಬಲ ಪಡೆಯುತ್ತಿದ್ದರು.

ಮಸ್ಲಿಮರ ಕಥೆ

ಉತ್ತರ ಪ್ರದೇಶದಲ್ಲಿ ಮುಸ್ಲಿಮರ ಜನಸಂಖ್ಯೆ ಶೇಕಡಾ 19ರಷ್ಟಿದೆ. ಮುಸ್ಲಿಮ್ ಮತದಾರರ ಮತ ಪ್ರಮಾಣ ಗಮನಿಸಿದಾಗ ಶೇಕಡಾ 79ರಷ್ಟು ಮತದಾರರು ಈ ಸಲ ಸಮಾಜವಾದಿ ಪಕ್ಷದ ಬೆಂಬಲಕ್ಕೆ ನಿಂತಿದ್ದಾರೆ. ಉಳಿದ ಮತಗಳಲ್ಲಿ  ಸಣ್ಣ ಪಾಲು ಬಿಎಸ್ ಪಿಯದ್ದು. ಬಿಜೆಪಿಗೂ (ಕೆಲವು ಕ್ಷೇತ್ರಗಳಲ್ಲಿ ಮಾತ್ರ ) ಶೇಕಡಾ 8ರಷ್ಟು ಮುಸ್ಲಿಮರ ಮತ ಬಿದ್ದಿದೆ. (ಇದು CSDS- Lokaneethi ಸಮೀಕ್ಷೆ ಆಧಾರಿತ)

ಉತ್ತರ ಪ್ರದೇಶ ಅಸೆಂಬ್ಲಿಗೆ ಈ ಸಲ ಒಟ್ಟು 34 ಮುಸ್ಲಿಮ್ ಅಭ್ಯರ್ಥಿಗಳು ಶಾಸಕರಾಗಿ ಆಯ್ಕೆಯಾಗಿದ್ದಾರೆ. ( ಹಿಂದೆ 40ರಿಂದ 60 ಮುಸ್ಲಿಂ ಶಾಸಕರು ಆಯ್ಕೆ ಆದದ್ದುಂಟು.) ಇದರಲ್ಲಿ 31 ಮಂದಿ ಸಮಾಜವಾದಿ ಪಕ್ಷ ಮತ್ತು 3 ಮಂದಿ RLD ಪಕ್ಷದವರು. ಬಿಜೆಪಿ ಒಬ್ಬ ಮುಸ್ಲಿಂ ಅಭ್ಯರ್ಥಿಗೂ ಟಿಕೆಟ್ ನೀಡಿಲ್ಲ. ಅದರ ಮಿತ್ರ ಪಕ್ಷ ಅಪ್ನಾ ದಳ್- ಎಸ್ ಒಂದು ಟಿಕೆಟ್ ನೀಡಿತ್ತು. ಆ ಅಭ್ಯರ್ಥಿ  ಸೋತಿದ್ದಾನೆ.

ಯಾದವರ ಕಥೆ

2011ರ ಜನಗಣತಿ ಪ್ರಕಾರ ಯಾದವರ ಜನಸಂಖ್ಯೆ ಶೇಕಡಾ 15. ಯಾದವ ಸಮುದಾಯದ ಒಟ್ಟು 27 ಜನರು ಈ ಸಲ ಗೆದ್ದಿದ್ದಾರೆ.

ಗೆದ್ದವರು ಯಾರು?

ಈ ಸಲದ ಚುನಾವಣೆಯಲ್ಲಿ ಖಂಡಿತವಾಗಿಯೂ ಗೆದ್ದವರು ಬ್ರಾಹ್ಮಣರು. ರಾಜ್ಯದಲ್ಲಿ ಅವರ ಜನಸಂಖ್ಯೆ ಶೇಕಡಾ 10 ರಷ್ಟಿದೆ. ಅವರು ಒಟ್ಟು 52 ಜನರು ಶಾಸಕರಾಗಿ ಆಯ್ಕೆ ಆಗಿದ್ದಾರೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸಮುದಾಯ ಠಾಕೂರ್. ಶೇಕಡಾ 9.5 ರಷ್ಟು ಜನಸಂಖ್ಯೆ ಇದೆ. ಕೇಂದ್ರ ಸಚಿವ ರಾಜನಾಥ್ ಸಿಂಗ್ ಪ್ರಭಾವಿ ಠಾಕೂರ್ ನಾಯಕ. ಈ ಸಲದ ಚುನಾವಣೆಯಲ್ಲಿ ಈ ರಾಜಪೂತ್ ಸಮುದಾಯದ 49 ಶಾಸಕರು ಆಯ್ಕೆ ಆಗಿದ್ದಾರೆ.

ಮೇಲ್ಜಾತಿಯ ಬನಿಯಾ/ ಕತ್ರಿ ಸಮುದಾಯದ ಜನಸಂಖ್ಯೆ ಶೇಕಡಾ 5 ಕ್ಕಿಂತ ಕಡಿಮೆ ಇದ್ದರೂ ಚುನಾವಣೆಯಲ್ಲಿ ಆ ಸಮುದಾಯದ 21 ಜನ ಶಾಸಕರಾಗಿ ಆಯ್ಕೆ ಆಗಿದ್ದಾರೆ.

ದಲಿತರ ಕಥೆ

ರಾಜ್ಯದಲ್ಲಿ ದಲಿತ ಸಮುದಾಯದ ಒಟ್ಟು ಜನಸಂಖ್ಯೆ ಶೇಕಡಾ 21. ಅಸೆಂಬ್ಲಿಯಲ್ಲಿ 84 SC ಮತ್ತು 2 ST ಸೀಟುಗಳು reserve ಆಗಿವೆ.

ದಲಿತ ಸಮುದಾಯದಲ್ಲಿ ಅತ್ಯಧಿಕ ಜನಸಂಖ್ಯೆ ಇರುವುದು ಜಾಟವ್/ ಚಮ್ಮಾರ ಸಮುದಾಯದ್ದು. ಈ ಸಮುದಾಯದ ಜನಸಂಖ್ಯೆ ಶೇಕಡಾ 11 ರಷ್ಟಿದ್ದು ಈ ಸಲ 29 ಸ್ಥಾನಗಳನ್ನು ಗೆದ್ದಿದ್ದಾರೆ. ಪಾಸಿ ಸಮುದಾಯ 27 ಸ್ಥಾನಗಳನ್ನು ಗೆದ್ದಿದೆ.

ದಲಿತ ಮೀಸಲು ಕ್ಷೇತ್ರದಲ್ಲಿ ಈ ಸಲ ಒಟ್ಟು 63 ಸ್ಥಾನಗಳನ್ನು ಬಿಜೆಪಿ+ ಮಿತ್ರಪಕ್ಷಗಳು ಗೆದ್ದಿವೆ. ಕಳೆದ ಸಲ ಗೆದ್ದ ಸ್ಥಾನಗಳಿಗೆ ಹೋಲಿಸಿದರೆ 11 ಸ್ಥಾನ ಕಡಿಮೆ ಆಗಿದೆ.

ದಲಿತ ಮೀಸಲು ಕ್ಷೇತ್ರಗಳಲ್ಲಿ ಸಮಾಜವಾದಿ + ಮಿತ್ರ ಪಕ್ಷಗಳು ಈ ಸಲ 20 ಸ್ಥಾನಗಳನ್ನು ಗೆದ್ದಿವೆ. ಕಳೆದ ಸಲಕ್ಕೆ ಹೋಲಿಸಿದರೆ ಇದು ಹೆಚ್ಚಾಗಿದೆ. ಕಳೆದ ಸಲ ಸಮಾಜವಾದಿ ಪಕ್ಷ 7 ಮೀಸಲು ಸ್ಥಾನಗಳನ್ನು ಮಾತ್ರ ಗೆದ್ದಿತ್ತು. ಆಗ ಜೊತೆಗಿದ್ದ ಕಾಂಗ್ರೆಸ್ ಒಂದೂ ಗೆದ್ದಿರಲಿಲ್ಲ.

ಕಳೆದ ಸಲ ಮಾಯಾವತಿಯವರ ಬಿಎಸ್ ಪಿ 2 ಮೀಸಲು ಕ್ಷೇತ್ರಗಳಲ್ಲಿ ಗೆದ್ದಿತ್ತು. ಈ ಸಲ ಅದು ಒಟ್ಟಾರೆ  ಒಂದೇ ಕ್ಷೇತ್ರ ಗೆದ್ದಿದ್ದು ಅದೂ ಮೇಲ್ಜಾತಿ ಅಭ್ಯರ್ಥಿ!

ಹಿಂದುಳಿದ ವರ್ಗಗಳಲ್ಲಿ ಕುರ್ಮಿ ಜನರು ಶೇಕಡಾ 5 ರಷ್ಟಿದ್ದಾರೆ. ಬಹುತೇಕ ಈ ಸಮುದಾಯ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದು ಕುರ್ಮಿ- ಸೈಂತ್ಯಾರ್ ಹಿಂದುಳಿದ ಸಮುದಾಯದ 40 ಶಾಸಕರು ಆಯ್ಕೆ ಆಗಿದ್ದಾರೆ.

ಧಾರ್ಮಿಕ ಅಲ್ಪಸಂಖ್ಯಾತ ಸಿಖ್ ಸಮುದಾಯಕ್ಕೆ ಸೇರಿದ ಒಬ್ಬ ಈ ಸಲ ಶಾಸಕರಾಗಿದ್ದು,  ಬಿಜೆಪಿ ಟಿಕೆಟ್ ನಲ್ಲಿ ಗೆದ್ದಿದ್ದಾರೆ.

ಈ ಸಲ ಬಿಜೆಪಿಯಿಂದ ಗೆದ್ದ ಮೇಲ್ಜಾತಿ ಅಭ್ಯರ್ಥಿಗಳ ಒಟ್ಟು ಸಂಖ್ಯೆ 117 ಸಮಾಜವಾದಿ ಪಕ್ಷದಿಂದ ಗೆದ್ದ ಮೇಲ್ಜಾತಿಯವರು 11. ಜಾತಿ ರಾಜಕೀಯವೇ ಮುಖ್ಯವಾಗಿರುವ ಉತ್ತರ ಪ್ರದೇಶದಲ್ಲಿ ಯೋಗಿಯ ಹಿಂದುತ್ವ ಗೆಲುವು ಸಾಧಿಸಿತೇ? ಅಥವಾ ಒಡೆದು ಆಳುವ ಬ್ರಾಹ್ಮಣರ ಚುನಾವಣಾ ತಂತ್ರ ಗೆದ್ದಿತೆ? ಉತ್ತರ ನೀವೇ ಕಂಡುಕೊಳ್ಳಿ.

(ಲೇಖಕರ ಫೇಸ್ ಬುಕ್ ವಾಲ್ ನಿಂದ)

Join Whatsapp