ಬೆಂಗಳೂರು: ಸಂಘಪರಿವಾರದವರು ಅಲ್ಪಸಂಖ್ಯಾತ ಸಮುದಾಯದ ಹೆಣ್ಣು ಮಕ್ಕಳು ಮಾತ್ರವಲ್ಲ ಎಲ್ಲಾ ಹೆಣ್ಣು ಮಕ್ಕಳ ಶತ್ರುಗಳಾಗಿದ್ದಾರೆ ಎಂದು ನ್ಯಾಷನಲ್ ವುಮೆನ್ಸ್ ಫ್ರಂಟ್ ನ ರಾಜ್ಯಾಧ್ಯಕ್ಷೆ ಫರ್ಝಾನಾ ಮುಹಮ್ಮದ್ ಕಿಡಿಕಾರಿದ್ದಾರೆ.
ಮಂಗಳವಾರ ನ್ಯಾಷನಲ್ ವುಮೆನ್ಸ್ ಫ್ರಂಟ್ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಬೆಂಗಳೂರಿನ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಆಯೋಜಿಸಿದ್ದ “ಮಹಿಳಾ ರಕ್ಷಣೆಯು ಕೇವಲ ಘೋಷಣೆಯಲ್ಲ; ಇದು ಘನತೆಯ ಹಕ್ಕು” ಎಂಬ ಸಂವಾದದಲ್ಲಿ ಮಾತನಾಡಿದರು.
ಶಿಕ್ಷಣದಲ್ಲಿ ಮುಸ್ಲಿಮ್ ಹೆಣ್ಣು ಮಕ್ಕಳ ಸಾಧನೆ ಶತ್ರಗಳ ಕಣ್ಣು ಕುಕ್ಕುವಂತೆ ಮಾಡಿದೆ. ಹಾಗಾಗಿ ಹಿಜಾಬ್ ವಿವಾದವನ್ನು ಸೃಷ್ಟಿಸಿ ಶಿಕ್ಷಣವನ್ನು ಮೊಟಕುಗೊಳಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪತ್ರಕರ್ತೆ ರುಶ್ದಾ ಖಾನ್ ಮಾತನಾಡಿ, ಹಿಜಾಬ್ ವಿವಾದದಿಂದ ಕಾಲೇಜು ಆಡಳಿತ ಮಂಡಳಿ, ತರಗತಿಯ ಸಹಪಾಠಿಗಳು ಸೇರಿದಂತೆ ಮಾಧ್ಯಮಗಳಿಂದ ಮುಸ್ಲಿಮ್ ಹೆಣ್ಣು ಮಕ್ಕಳಿಗೆ ಅವಮಾನವಾಗಿದೆ. ಬಿಜೆಪಿ ಅಧಿಕೃತ ಟ್ವಟರ್ ಖಾತೆಯಲ್ಲಿ ಅಲ್ಪ ಸಂಖ್ಯಾತ ಹೆಣ್ಣು ಮಕ್ಕಳ ಸುರಕ್ಷತೆಗೆ ಧಕ್ಕೆಯಾಗುವಂತೆ ಸಂದೇಶ ಹಾಕಲಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಂವಾದದಲ್ಲಿ ನ್ಯಾಷನಲ್ ವುಮೆನ್ಸ್ ಫ್ರಂಟ್ ನ ಲುಬ್ನಾ ಸಿರಾಜ್, ಪತ್ರಕರ್ತೆ ಎಂಎಸ್ ರುಶ್ದಾ ಖಾನ್, ಡಾ. ಅಸ್ಮಾ ಜೆಹ್ರಾ, ನೌಶಿರಾ ಬಾನು ಮತ್ತಿತರರು ಉಪಸ್ಥಿತರಿದ್ದರು.