ಗೋ ಹತ್ಯೆ ನಿಷೇಧದಿಂದ ರಾಜ್ಯದ ಬೊಕ್ಕಸಕ್ಕೆ ಭಾರೀ ಹೊರೆ, ರೈತರ ಬದುಕು ದುಸ್ತರ

Prasthutha|

►27,250 ಕೋಟಿ ರೂ. ಮೌಲ್ಯದ ಗೋ ಮಾಂಸ ಉತ್ಪಾದನೆಗೆ ಕಡಿವಾಣ 

- Advertisement -

ಬೆಂಗಳೂರು: ಗೋಹತ್ಯೆ ನಿಷೇಧ ಜಾರಿಗೊಳಿಸುವುದನ್ನು ಪುನರ್ ಪರಿಶೀಲನೆ ನಡೆಸುವಂತೆ ಹಣಕಾಸು ಇಲಾಖೆ ನೀಡಿದ ಎಚ್ಚರಿಕೆಯನ್ನೂ ಲೆಕ್ಕಿಸದೆ, ಸರ್ಕಾರ ಅದನ್ನು ಜಾರಿ ಮಾಡಿರುವುದರಿಂದ ಹಾಗೂ  ವಯಸ್ಸಾದ ಮತ್ತು ಬೀದಿಗೆ ಬಿಟ್ಟಿರುವ ಹಸುಗಳಿಗಾಗಿ ಪ್ರತಿಯೊಂದು ಜಿಲ್ಲೆಯಲ್ಲೂ ಗೋಶಾಲೆ ಆರಂಭಿಸಬೇಕಾಗಿರುವುದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಭಾರಿ ಹೊರೆಯಾಗಿದೆ. ಆರೆಸ್ಸೆಸ್ ನ ಅಜೆಂಡಾವಾದ ಗೋ ಹತ್ಯೆ ನಿಷೇಧದಿಂದಾಗಿ ರಾಜ್ಯದ ರೈತರ ಬದುಕಿನ ಮೇಲೆ ದುಷ್ಪರಿಣಾಮ ಬೀರಿರುವುದರ ಜೊತೆಗೆ ರಾಜ್ಯದ ಬೊಕ್ಕಸಕ್ಕೂ ಹಾನಿಯಾಗಿದೆ.

ಕೋಮು ಧ್ರುವೀಕರಣಕ್ಕಾಗಿ ಆರೆಸ್ಸೆಸ್ ರೂಪಿಸಿದ ಗೋ ಮಾತೆ ಪವಿತ್ರ ಎಂಬ ಅಜೆಂಡಾದ ಜಾರಿಗಾಗಿ ಗೋ ಹತ್ಯೆ ನಿಷೇಧ ಅನುಷ್ಠಾನಗೊಳಿಸುವುದಾಗಿ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿತ್ತು. ಆದರೆ ಇದರಿಂದ ಉಂಟಾಗಬಹುದಾದ ದುಷ್ಪರಿಣಾಮಗಳ ಅಧ್ಯಯನ ನಡೆಸದೆ ರಾಜ್ಯ ಸರ್ಕಾರ ಕಾಯ್ದೆಯನ್ನು ಜಾರಿಗೆ ತಂದಿದೆ. ಆದರೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಗೋ ಹತ್ಯೆ ನಿರಾತಂಕವಾಗಿ ನಡೆಯುತ್ತಿದ್ದು, ಟನ್ ಗಟ್ಟಲೆ ಗೋ ಮಾಂಸ ವಿದೇಶಗಳಿಗೆ ರಫ್ತಾಗುತ್ತಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಹೆಚ್ಚಿನ ವರಮಾನ ಹರಿದುಬರುತ್ತಿದೆ.

- Advertisement -

ವಾಸ್ತವ ಹೀಗಿದ್ದರೂ ಕರ್ನಾಟಕ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿ ರಾಜ್ಯದ ಬೊಕ್ಕಸಕ್ಕೆ ಭಾರೀ ಹೊಡೆತ ಬೀಳುವಂತೆ ಮಾಡಿದೆ.   ಈ ಕಾನೂನು ಜಾರಿ ಮಾಡುವ ಬಗ್ಗೆ ಪುನರ್ ಪರಿಶೀಲನೆ ನಡೆಸುವಂತೆ 2021ರ ಡಿಸೆಂಬರ್ ನಲ್ಲಿ ಹಣಕಾಸು ಇಲಾಖೆ ಸಲಹೆ ನೀಡಿತ್ತು. ರಾಜ್ಯದ ಜನರ ಮೂಲಸೌಕರ್ಯ, ಅಗತ್ಯ ಕಾಮಗಾರಿ, ಸರ್ಕಾರಿ ನೌಕರರ ವೇತನ ಸೇರಿದಂತೆ ಅಗತ್ಯ ವಲಯಗಳಿಗೆ ಹಣ ಹೊಂದಿಸಲು ಸಾಧ್ಯವಾಗದೇ ಇರುವಾಗ ಈ ರೀತಿ ಗೋ ಸಂರಕ್ಷಣೆಯ ಹೆಸರಿನಲ್ಲಿ ಅನಗತ್ಯ ವೆಚ್ಚ ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹಣಕಾಸು ಇಲಾಖೆ ಸರ್ಕಾರಕ್ಕೆ ತಿಳಿಸಿತ್ತು.  ಆದರೆ, ರಾಜ್ಯ ಸರ್ಕಾರ ತನ್ನ ಹಠಮಾರಿ ಧೋರಣೆಯಿಂದಾಗಿ ಕಾಯ್ದೆ ಜಾರಿಗೆ ತರಲು ಮುಂದಾಯಿತು. ಇದರಿಂದ ದುಷ್ಪರಿಣಾಮವನ್ನು ರಾಜ್ಯದ ಜನರು ಅನುಭವಿಸಬೇಕಾಗಿದೆ.

ಪ್ರತಿಯೊಂದು ಜಾನುವಾರು ನಿರ್ವಹಣೆಗೆ ದಿನಕ್ಕೆ 70 ರೂ. ಬೇಕಾಗುತ್ತದೆ. ರಾಜ್ಯದಲ್ಲಿ 2,417 ಗೋಶಾಲೆಗಳ ಅಗತ್ಯವಿದ್ದು, ಪ್ರತಿ 200 ಹಸುಗಳನ್ನು ಒಳಗೊಂಡ ಒಂದು ಗೋಶಾಲೆ ಸ್ಥಾಪನೆಗೆ 1 ಕೋಟಿ 50 ಲಕ್ಷ ರೂ. ಬೇಕಾಗುತ್ತದೆ. ಗೋಶಾಲೆ ಸ್ಥಾಪನೆಗೆ ಪ್ರತಿ ಜಿಲ್ಲೆಗೆ 30 ಲಕ್ಷದಿಂದ  53.50 ಲಕ್ಷ ರೂ. ಹಣ ಬಿಡುಗಡೆ ಮಾಡಿದೆ. ಅಲ್ಲದೆ, ಮೂಲಸೌಕರ್ಯ ಸೃಷ್ಟಿಗೆ ಒಟ್ಟು 1,208.50 ಕೋಟಿ ರೂ. ಬೇಕಾಗುತ್ತದೆ. ಇದರಿಂದ 27,250 ಕೋಟಿ ರೂ. ಮೌಲ್ಯದ ಗೋ ಮಾಂಸ ಉತ್ಪಾದನೆಗೆ ಕಡಿವಾಣ ಬೀಳಲಿದೆ. ಆದರೆ, ಗೋಮಾಂಸ ಮಾರುವವರಿಗೆ ಪರಿಹಾರವಾಗಿ 519.36 ಕೋಟಿ ರೂ.  ನೀಡುವ ಜವಾಬ್ದಾರಿಯೂ ಸರ್ಕಾರಕ್ಕಿದೆ. ಉತ್ತರ ಪ್ರದೇಶದಲ್ಲಿ ಬೀಡಾಡಿ ದನಗಳದ್ದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದ್ದು, ಅದನ್ನು ನಿರ್ವಹಿಸಲಾಗದೆ ಸರ್ಕಾರ ಕೈಚೆಲ್ಲಿ ಕೂತಿದೆ. ಗೋ ಹತ್ಯೆ ನಿಷೇಧ ಜಾರಿಯಿಂದಾಗಿ ಒಟ್ಟಾರೆ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದ್ದು, ಜನರ ತೆರಿಗೆ ಹಣ ಗೋವುಗಳ ಹೆಸರಿನಲ್ಲಿ ಉಳ್ಳವರ, ಮಠ ಮಾನ್ಯಗಳ ಕೈ ಸೇರುವುದರಲ್ಲಿ ಯಾವುದೇ ಸಂಶಯವಿಲ್ಲ.



Join Whatsapp