ಪ್ರಭುತ್ವದ ದ್ವೇಷ ಪ್ರೇಮ

Prasthutha|

ಹಿಂದೊಮ್ಮೆ ಬಿಜೆಪಿಗೆ ನೆಲೆಯೇ ಇಲ್ಲದ ಕಾಲವದು. ಏನೇ ಮಾಡಿದರೂ ಜನ ಸಾಮಾನ್ಯರು ಕಾಂಗ್ರೆಸ್‌ನ 20 ಅಂಶಗಳ ಕಾರ್ಯಕ್ರಮ ಮತ್ತು ಇಂದಿರಾ ಗಾಂಧಿಯನ್ನು ಮರೆತು ಸಂಘಪರಿವಾರ ಅಥವಾ ಭಾರತೀಯ ಜನತಾ ಪಕ್ಷದ ಹಾದಿಗೆ ಬರಲೊಲ್ಲರು. ಧರ್ಮ, ಜಾತಿ ಎಂದು ಎಷ್ಟೇ ಪ್ರಚೋದಿಸಿದರೂ ಮತ ಗಳಿಕೆಯ ಪ್ರಮಾಣ ಶೇ.2 ರಷ್ಟನ್ನು ದಾಟುತ್ತಿರಲಿಲ್ಲ. ಇನ್ನು ಗೆಲ್ಲುವ ಮಾತಂತೂ ದೂರ ಬಿಡಿ.

- Advertisement -

ಇದಕ್ಕಿದ್ದಂತೆ ಶಿವಮೊಗ್ಗದಲ್ಲಿ ಸಣ್ಣ ಕಾರಣಕ್ಕೆ ಎರಡು ಕೋಮಿನ ಯುವಕರ ನಡುವೆ ಗಲಾಟೆಯೊಂದು ನಡೆಯುತ್ತದೆ. ಅದು ಅನಪೇಕ್ಷಣೀಯವಾಗಿ ಕೋಮು ಸಂಘರ್ಷಕ್ಕೆ ತಿರುತ್ತದೆ. ಒಂದೆರಡು ದಿನಗಳ ಕಾಲ ಬೂದಿ ಮುಚ್ಚಿದ ಕೆಂಡದಂತಿದ್ದ ಪರಿಸ್ಥಿತಿ ವಿಪರೀತಕ್ಕೆ ಹೋಗಿ ಆಕಸ್ಮಿಕವಾಗಿ ಒಬ್ಬರ ಕೊಲೆಯಾಗಿ ಬಿಡುತ್ತದೆ. ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ.

ಕೊಲೆಯಾದವರ ಸ್ನೇಹ ಬಳಗದವರು ದುಃಖತಪ್ತರಾಗಿ ಆ ಕಾಲದ ಮಹಾನ್ ನಾಯಕರೆಂದು ಬಿಂಬಿಸಿಕೊಂಡಿದ್ದ ಪುಡಿ ರಾಜಕಾರಣಿಯ ಬಳಿ ಧಾವಿಸುತ್ತಾರೆ. ನಮ್ಮವನನ್ನು ಹೊಡೆದು ಹಾಕಿ ಬಿಟ್ಟರು ಎಂದು ಸಂಕಟ ತೋಡಿಕೊಳ್ಳುತ್ತಾರೆ. ಸಾರ್ವಜನಿಕವಾಗಿ ಎಲ್ಲರನ್ನು ಸಮಾಧಾನ ಮಾಡಿ ಕಳುಹಿಸಿದ ಸೋಕಾಲ್ಡ್ ಮಹಾನ್ ನಾಯಕರು ಎಲ್ಲರೂ ಮುಂದೆ ಹೋದ ಮೇಲೆ ಹಿಂದೆ ಉಳಿದಿದ್ದ ಒಂದಿಬ್ಬರು ಪ್ರಮುಖರನ್ನು ಕರೆದು ಹೆಣ ಬಿದ್ದಿದೆ ಎಂದರೆ ‘ನಮಗೆ ಒಳ್ಳೆಯ ಕಾಲ ಬರುತ್ತಿದೆ’ ಎಂದು ಅರ್ಥ. ಶವವನ್ನು ಜಿಲ್ಲಾಧಿಕಾರಿ ಕಚೇರಿ ಮುಂದೆ ಇಟ್ಟು ಪ್ರತಿಭಟನೆಗೆ ಸಿದ್ಧವಾಗಿರಿ ಎಂದು ಅಪ್ಪಣೆ ಕೊಡುತ್ತಾರೆ.

- Advertisement -

ಆವರೆಗೂ ಶೋಕದ ಮಡುವಿನಂತಾಗಿದ್ದ ಬಳಗಕ್ಕೆ ಇದ್ದಕ್ಕಿದ್ದಂತೆ ವಿದ್ಯುತ್ ಸಂಚಾರವಾಗುತ್ತದೆ. ಮಹಾನ್ ನಾಯಕರ ರಾಜಕೀಯ ಲೆಕ್ಕಾಚಾರದ ದಿಗ್ಧದರ್ಶನವಾದವರಂತೆ ಶಿವಮೊಗ್ಗ ಹಿಂದುತ್ವದ ಉಬ್ಬುವಿಕೆಯಲ್ಲಿ ಬಿಕ್ಕಳಿಸುತ್ತದೆ. ಗಲ್ಲಿಯೊಂದರಲ್ಲಿ ವೈಯಕ್ತಿಕ ಕಾರಣಕ್ಕೆ ನಡೆದ ಗಲಭೆಗೆ ಕೋಮು ಬಣ್ಣ ಹಚ್ಚಿ ನಿಧಾನವಾಗಿ ಪಕ್ಷ ಕಟ್ಟಲಾರಂಭಿಸುತ್ತಾರೆ. ಅನಾದಿ ಕಾಲದಿಂದಲೂ ಅನ್ಯ ಸಮುದಾಯದತ್ತ ಬೆರಳು ತೋರಿಸುತ್ತಾ ಹಿಂದುತ್ವ ಅಪಾಯದಲ್ಲಿದೆ ಎಂದು ಬೆದರು ಬೊಂಬೆಯಾಟ ಆಡುತ್ತಲೇ ಇದ್ದಾರೆ. ಇದೇ ಹೆಸರಿನಲ್ಲಿ ಹಲವಾರು ಗಲಭೆ ಮಾಡಿ ಹೆಣ ಕೆಡವಿದ್ದಾರೆ. ಅದರ ಮೇಲಿನ ಹೂ ಬಾಡುವ ಮುನ್ನವೇ ರಾಜಕೀಯ ಲೆಕ್ಕಾಚಾರದಲ್ಲಿ ತಮ್ಮ ಬೆಳೆಬೇಯಿಸಿಕೊಂಡಿದ್ದಾರೆ. ಈವರೆಗಿನ ಎಲ್ಲಾ ಗಲಭೆಗಳಲ್ಲೂ ಪ್ರಾಣ ಕಳೆದುಕೊಂಡವರು, ಕ್ರಿಮಿನಲ್ ಕೇಸಿಗೆ ಬಲಿ ಪಶುಗಳಾದವರು ಮಾತ್ರ ಬಡ ಹಾಗೂ ದುರ್ಬಲ ವರ್ಗದವರೇ ಎಂಬುದು ಘನ ಘೋರ ಸತ್ಯ.

ಕರಾವಳಿ ನಂತರದಲ್ಲಿ ಮಲೆನಾಡು ಹಿಂದುತ್ವದ ಪ್ರಯೋಗ ಶಾಲೆಯಾಗಿದೆ. ಅದಕ್ಕಾಗಿ ಬಾಬಾಬುಡಾನ್‌ಗಿರಿ – ದತ್ತಪೀಠ ಸಂಘರ್ಷ ಜೀವಂತವಾಗಿಡಲಾಗಿದೆ. ಶಿವಮೊಗ್ಗದಲ್ಲಿ ಕೋಮುಗಲಭೆಗಳಿಂದಲೇ ಹಲವು ನಾಯಕರು ಬೆಳೆದು ಬಂದಿದ್ದಾರೆ.

ಯಡಿಯೂರಪ್ಪ ಮುಖ್ಯವಾಹಿನಿಗೆ ಬಂದ ಮೇಲೆ ಮಲೆನಾಡಿನಲ್ಲಿ ಕುದಿಯುತ್ತಿದ್ದ ಕೋಮು ಕುಲುಮೆ ಕೊಂಚ ತಣ್ಣಗಾಗಿತ್ತು. ಅಧಿಕಾರಕ್ಕಾಗಿ ಯಡಿಯೂರಪ್ಪ ಎಂದಿಗೂ ಹೆಣ ದಾಟಿ ರಾಜಕೀಯ ಮಾಡುವ ದುಸ್ಸಾಹಸಕ್ಕೆ ಕೈಹಾಕಲಿಲ್ಲ. ಜನರ ಸಮಸ್ಯೆಗಳನ್ನು ಮುಂದಿಟ್ಟುಕೊಂಡೇ ಹೋರಾಟ ಮಾಡಿಯೇ ಬಿಜೆಪಿ ಕಟ್ಟಿದರು, ಮುಖ್ಯಮಂತ್ರಿಯೂ ಆದರು. ಒಂದು ಹಂತದಲ್ಲಿ ಕೋಮು ಸಂಘರ್ಷಕ್ಕೆ ಬಿಜೆಪಿಯಲ್ಲಿ ಹುನ್ನಾರಗಳು ನಡೆದಾಗ ಇದೇ ಯಡಿಯೂರಪ್ಪ ಭಿನ್ನ ನಿಲುವು ತಳೆದಿದ್ದರು. ಹಾಗೆಂದು ಯಡಿಯೂರಪ್ಪ ಜಾತ್ಯತೀತ ನಾಯಕರಲ್ಲ. ಆದರೆ ಅಧಿಕಾರದ ಹಪಾಹಪಿಗಾಗಿ ಹೆಣ ಬೀಳಲಿ ಎಂದು ಕಾಯುತ್ತಿರಲಿಲ್ಲ ಅಷ್ಟೆ.

ಅದೃಷ್ಟವೋ, ದುರದೃಷ್ಟವೋ ಯಡಿಯೂರಪ್ಪ ನಂತರದ ಉತ್ತರಾಧಿಕಾರಿಯಾಗಿ ಬಸವರಾಜ ಬೊಮ್ಮಾಯಿ ಪ್ರತಿಷ್ಠಾಪಿಸಲ್ಪಟ್ಟಿದ್ದಾರೆ. ಹಗಲಿರುಳು ದುಡಿದು, ಬೆವರಿಳಿಸಿ, ಗಲಾಟೆ ಗದ್ದಲಗಳಿಗೆ ಎದೆಕೊಟ್ಟು, ಪೊಲೀಸ್ ಏಟು ತಿಂದು, ಕೇಸು ಹಾಕಿಸಿಕೊಂಡು, ಪೋಸ್ಟ್ ಅಂಟಿಸಿ, ಬಾವುಟ ಹಿಡಿದು ಬಾಯಿ ಬಡಿದುಕೊಂಡು ಪಕ್ಷ ಕಟ್ಟಿ ಬಿಜೆಪಿ ಅಧಿಕಾರಕ್ಕೆ ತಂದವರು ಕೈ ಕೈ ಹಿಸುಕಿಕೊಳ್ಳುವಂತಾಗಿದೆ.

ಮೂಲ ನಿವಾಸಿ ನಾಯಕರು ಮಾಡಿದ ಅನಾಚಾರಗಳೋ ಅಥವಾ ಭ್ರಷ್ಟಾಚಾರಗಳೋ ಏನೋ ಒಂದು ಕಾರಣವನ್ನಂತೂ ನೀಡಿ ಹೈಕಮಾಂಡ್ ಮುಖ್ಯಮಂತ್ರಿ ಗಾದಿಯಿಂದ ಎಲ್ಲರನ್ನೂ ದೂರ ಇಟ್ಟಿದೆ. ವಲಸಿಗ ನಾಯಕ ಬಸವರಾಜ ಬೊಮ್ಮಾಯಿಗೆ ಅಧಿಕಾರ ನೀಡಿದೆ. ಸದ್ಯಕ್ಕೆ ಅನಿವಾರ್ಯವಾಗಿ ಬೊಮ್ಮಾಯಿ ಅವರನ್ನು ಒಪ್ಪಿಕೊಂಡರೂ ಮುಂದಿನ ಚುನಾವಣೆ ವೇಳೆಗೆ ನಾಯಕತ್ವ ಬದಲಾಗಲೇಬೇಕು ಎಂಬ ಒತ್ತಾಸೆ ಸಂಘಪರಿವಾರ ಮತ್ತು ಮೂಲ ನಿವಾಸಿಗಳಲ್ಲಿ ಬಲವಾಗಿದೆ. ಆದರೆ ಬೊಮ್ಮಾಯಿ ಬದಲಾವಣೆ ಮಾತ್ರ ಲಿಂಗಾಯಿತ ಸಮುದಾಯಕ್ಕೆ ಬೇಸರವಾಗದಂತೆ ನಡೆಯಬೇಕು. ಅದಕ್ಕೆ ಸಂಘ ಪರಿವಾರಕ್ಕೆ ಕಾಣಸಿಕ್ಕಿರುವುದು ಅದೇ ಹಳೆಯ ಅಜೆಂಡಾ ಹಿಂದುತ್ವ.

ಯಾವುದೇ ಹೊಸ ಔಷಧಿಗಳು ತಯಾರಾದಾಗ ಅವನ್ನು ಮೊದಲು ಪ್ರಾಣಿಗಳ ಮೇಲೆ ಪ್ರಯೋಗ ಮಾಡಲಾಗುತ್ತದೆ. ಅದೇ ರೀತಿ ಬಿಜೆಪಿಯ ನಾಯಕತ್ವ ಬದಲಾವಣೆ ಎಂಬ ಹೊಸ ಚಿಕಿತ್ಸಾ ಪದ್ಧತಿಯನ್ನು ಜಾರಿಗೊಳಿಸಲು ಶೂದ್ರ ಸಮುದಾಯದ ಕೆ.ಎಸ್.ಈಶ್ವರಪ್ಪ ಅವರನ್ನು ಬಳಕೆ ಮಾಡಿಕೊಳ್ಳಲಾಗಿದೆ.

ಅದಕ್ಕಾಗಿಯೇ ಕರಾವಳಿಯಲ್ಲಿ ಅನಗತ್ಯವಾಗಿ ಹಿಜಾಬ್ ಗಲಾಟೆ ಶುರುವಾಗಿ, ರಾಜ್ಯಾದ್ಯಂತ ರಣರಂಗದ ವಾತಾವರಣ ನಿರ್ಮಾಣ ಮಾಡಲಾಗಿದೆ. ಕೇಸರಿ ಬಾವುಟಗಳ ಚಳುವಳಿ ಕಾಡ್ಗಿಚ್ಚಾಗುತ್ತದೆ. ಧಾರ್ಮಿಕ ಆಚರಣೆಯ ಭಾಗವಾಗಿ ಹೆಣ್ಣು ಮಕ್ಕಳು ಧರಿಸುತ್ತಿದ್ದ ಹಿಜಾಬ್ ಬೆನ್ನತ್ತಿ ರಾಜಕೀಯ ಮಾಡುವ ಕೀಳು ಮಟ್ಟಕ್ಕೆ ಒಂದು ರಾಷ್ಟ್ರೀಯ ಪಕ್ಷದ ನಾಯಕರು ಬಂದು ನಿಂತಿದ್ದಾರೆ.

ಕೇಸರಿ ಶಾಲನ್ನು ಹಿಜಾಬ್‌ಗೆ ಪ್ರತ್ಯುತ್ತರ ಎಂದು ಬಿಂಬಿಸಲಾಗಿದೆ. ಕೇಸರಿ ಶಾಲು ಹಾಕಬೇಡಿ ಎಂದು ಯಾರು ಕೂಡ ಹೇಳದೆ ಇದ್ದರೂ, ಅವರು ಹಿಜಾಬ್ ಹಾಕಿದ್ದಕ್ಕೆ, ಇವರು ಕೇಸರಿ ಶಾಲು ಧರಿಸಿದ್ದಾರೆ ಎಂದು ಬೊಬ್ಬೆ ಹಾಕಲಾಗುತ್ತದೆ. ಕೇಸರಿ ಶಾಲನ್ನು ಹಾಕಿಕೊಂಡು ಬರಲಿ, ಹಿಜಾಬ್ ಧರಸಿ ಬರಲು ಅವಕಾಶ ಇರಲಿ ಎಂಬ ವಾದ ಮುನ್ನೆಲೆಗೆ ಬರುವ ವೇಳೆಗೆ ರಾಜ್ಯ ಸರ್ಕಾರ ಹಲವು ನ್ಯಾಯಾಲಯಗಳ ಆದೇಶಗಳನ್ನು ನೆಪ ಮಾಡಿಕೊಂಡು ಸುತ್ತೋಲೆಯೊಂದನ್ನು ಹೊರಡಿಸುತ್ತದೆ.

ಆ ಗಲಾಟೆ ನ್ಯಾಯಾಲಯದ ಮೆಟ್ಟಿಲು ಹತ್ತಿ ಪರಿಸ್ಥಿತಿ ಶಾಂತವಾಗುವ ವೇಳೆಯಲ್ಲಿ ಮತ್ತೆ ಸಚಿವ ಈಶ್ವರಪ್ಪ ಕೆಂಪುಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುವ ಹೇಳಿಕೆ ನೀಡುತ್ತಾರೆ. ರಾಷ್ಟ್ರಧ್ವಜಕ್ಕೆ ಅಪಮಾನವಾಗಿದೆ. ಆ ಕಾರಣಕ್ಕಾಗಿ ಈಶ್ವರಪ್ಪ ಅವರನ್ನು ಸಂಪುಟದಿಂದ ಕೈ ಬಿಡಬೇಕು, ದೇಶದ್ರೋಹ ಆರೋಪದಡಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಕಾಂಗ್ರೆಸ್ ಪಟ್ಟು ಹಿಡಿಯುತ್ತದೆ. ಈಶ್ವರಪ್ಪ ಭಾವನಾಜೀವಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ಅದರ ಹೊರತು ಕೇಸರಿ ಧ್ವಜ ಹಾರಿಸುವ ಅಭಿಪ್ರಾಯ ಈಶ್ವರಪ್ಪ ಅವರದಲ್ಲ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಸಮರ್ಥಿಸಿಕೊಳ್ಳುತ್ತಾರೆ. ಅದೇ ಸಮಯದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸಿ.ಟಿ.ರವಿ ಹೊರಗಡೆ ಮಾಧ್ಯಮಗಳ ಎದುರು ನಿಂತು ‘ರಾಷ್ಟ್ರಧ್ವಜಕ್ಕಿಂತ ಸ್ವಲ್ಪ ಕೆಳಗೆ ಕೇಸರಿ ಧ್ವಜ ಹಾರಿಸಿದರೆ ತಪ್ಪೇನು‘ ಎಂದು ಪ್ರಶ್ನಿಸುತ್ತಾರೆ.

ಕಾಂಗ್ರೆಸ್‌ಗೆ ಕೇಸರಿ ಧ್ವಜದ ಹಿಂದಿನ ಹುನ್ನಾರ ಅರ್ಥೈಸುವಿಕೆ ಸಾಧ್ಯವಾಗಿದೆ. ಆದರೆ ಅದನ್ನು ಜನರಿಗೆ ಸರಿಯಾಗಿ ಅರ್ಥ ಮಾಡುವಲ್ಲಿ ಸಂಪೂರ್ಣ ವಿಫಲವಾಗುತ್ತಿದೆ. ಒಟ್ಟಾರೆ ಏಳು ದಿನಗಳ ವಿಧಾನ ಮಂಡಲದ ಕಲಾಪದಲ್ಲಿ ಮೊದಲೆರಡು ದಿನ ಮಾತ್ರ ಸುಗಮ ಕಲಾಪ ನಡೆಯಿತು. ಫೆಬ್ರವರಿ 9 ರಂದು ಬುಧವಾರ ಕಾಂಗ್ರೆಸ್ ಈಶ್ವರಪ್ಪ ಅವರ ಹೇಳಿಕೆಯನ್ನು ಪ್ರಸ್ತಾಪಿಸಿ ವಿಧಾನಸಭೆ ಮತ್ತು ವಿಧಾನ ಪರಿಷತ್ ಎರಡರಲ್ಲೂ ಪ್ರಸ್ತಾಪಿಸಿ ಧರಣಿ ಆರಂಭಿಸಿತ್ತು. ಅದೇ ದಿನದಿಂದಲೇ ಅಹೋರಾತ್ರಿ ಧರಣಿ ನಡೆಸಬೇಕು ಎಂಬ ನಿರ್ಧಾರವನ್ನು ವಿಧಾನ ಪರಿಷತ್‌ನಲ್ಲಿ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಘೋಷಿಸಿದರು. ಆದರೆ ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಅಹೋರಾತ್ರಿ ಧರಣಿಯನ್ನು ಒಂದು ದಿನಕ್ಕೆ ಮುಂದೂಡಿದರು. ಗುರುವಾರವೂ ಉಭಯ ಸದನಗಳಲ್ಲಿ ವಾಗ್ವಾದಗಳು ಜೋರಾಗಿಯೇ ನಡೆದವು. ಈಶ್ವರಪ್ಪ ಅವರನ್ನು ಗುರಿಯಾಗಿಸಿಕೊಂಡು ವಾಗ್ಬಾಣಗಳು ವಿನಿಮಯವಾದವು. ಕಾಂಗ್ರೆಸ್ ಈಶ್ವರಪ್ಪ ಅವರನ್ನು ದೇಶದ್ರೋಹಿ ಎಂದು ಜರಿದರೆ, ಬಿಜೆಪಿಗರು ಕಾಂಗ್ರೆಸ್‌ನಿಂದ ನಾವು ದೇಶ ಭಕ್ತಿ ಕಲಿಯಬೇಕಿಲ್ಲ ಎಂದು ತಿರುಗೇಟು ನೀಡಿದರು. 

ರಾಷ್ಟ್ರದ್ರೋಹದ ಆರೋಪಕ್ಕೆ ಬಿಜೆಪಿ ಒಳಗೊಳಗೆ ಜರ್ಝರಿತವಾಗಿತ್ತು. ಜಮ್ಮುಕಾಶ್ಮಿರದಲ್ಲಿ ಧ್ವಜಾರೋಹಣ ಮಾಡಲು ಹೋಗುವಾಗ ಬಿಜೆಪಿ ನಾಯಕರ ರಕ್ಷಣೆಗೆ ಇಡೀ ಸೇನೆಯನ್ನೇ ಕಾವಲಿಗೆ ನಿಲ್ಲಿಸಿಕೊಂಡಿದ್ದನ್ನು, ಭದ್ರತಾ ಕೋಟೆಯಲ್ಲಿ ಬಾವುಟ ಹಾರಿಸಿದ್ದನ್ನೇ ಸಾಧನೆ ಎಂದು ಬಿಂಬಿಸಿಕೊಳ್ಳಬೇಡಿ ಎಂದು ಕಾಂಗ್ರೆಸಿಗರು ಹೇಳಿದರಾದರೂ ಅದು ಯಾರಿಗೂ ಕೇಳಿಸಲಿಲ್ಲ. ಇನ್ನೂ ಈದ್ಗಾ ಮೈದಾನದ ಹೋರಾಟಕ್ಕೆ ರಾಷ್ಟ್ರಪ್ರೇಮ ಕಾರಣವಲ್ಲ, ಬದಲಾಗಿ ಕೋಮು ಗಲಭೆ ಮತ್ತು ರಾಜಕೀಯ ಲೆಕ್ಕಾಚಾರಗಳಿದ್ದವು ಎಂದು ಗಟ್ಟಿಧ್ವನಿಯಲ್ಲಿ ಹೇಳುವ ನಾಯಕರೇ ಕಾಂಗ್ರೆಸ್‌ನಲ್ಲಿ ಇಲ್ಲ.

ಬಿಜೆಪಿಯ ಮಾತೃಸಂಸ್ಥೆ ಸಂಘ ಪರಿವಾರದ ಕಚೇರಿಯ ಮೇಲೆ 52 ವರ್ಷ ರಾಷ್ಟ್ರಧ್ವಜ ಹಾರಿಸದೇ ಇದ್ದಿದ್ದನ್ನು ಪ್ರಶ್ನಿಸಲಾಯಿತಾದರೂ ಅದು ಯಾರಿಗೂ ಕೇಳಿಸಲಿಲ್ಲ. ಸಂಘ ಪರಿವಾರದ ದೇಶಭಕ್ತಿಯೇ ಬೂಟಾಟಿಕೆ (ಹಿಪೋಕ್ರಸಿ) ಎಂಬುದನ್ನು ದೃಢ ಧ್ವನಿಯಲ್ಲಿ ಹೇಳುವ ನಾಯಕರೇ ಪ್ರತಿಪಕ್ಷಗಳಲ್ಲಿ ಇಲ್ಲ. ಜೆಡಿಎಸ್‌ನ ಕುಮಾರಸ್ವಾಮಿ ಅವರು ಕಳೆದ ಮೂರು ತಿಂಗಳ ಹಿಂದೆ ವಿಧಾನ ಪರಿಷತ್ ಚುನಾವಣೆ ವೇಳೆ ಸರಣಿ ಟ್ವೀಟ್ ಮೂಲಕ ಸಂಘಪರಿವಾರವನ್ನು ಜರಿದಿದ್ದರು. ಆದರೆ ಇದ್ದಕ್ಕಿದ್ದಂತೆ ಸಂಘ ಪರಿವಾರದ ಬಗ್ಗೆ ಮೃದು ಧೋರಣೆ ಅನುಸರಿಸಲಾಂಭಿಸಿದರು.

ಕಾಂಗ್ರೆಸ್ ರಾಜಕೀಯ ಲಾಭಕ್ಕಾಗಿ ಸದನದ ಸಮಯ ಹಾಳು ಮಾಡಿ ಧರಣಿ, ಗದ್ದಲ, ಗಲಾಟೆ ಮಾಡಿತ್ತೇ ಹೊರತು ಕೆಂಪುಕೋಟೆಯ ಕೇಸರಿ ಧ್ವಜ ಹಿಂದಿನ ಉದ್ದೇಶವನ್ನು ಕರಾರುವಕ್ಕಾಗಿ ಜನರಿಗೆ ವಿವರಿಸಲು ವಿಫಲವಾಯಿತು.

ಕೇಸರಿ ಧ್ವಜ ಎಂದರೆ ಮನುವಾದ ಪ್ರತಿಪಾದನೆ.  ಧರ್ಮಾಂಧತೆ ಧ್ವಜ ದೇಶದ ಹೆಮ್ಮೆಯ ಕೆಂಪುಕೋಟೆಯ ಮೇಲೆ ಹಾರಾಡಲು ಸಾಧ್ಯ, ಮನು ಪ್ರತಿಪಾದಿಸಿದ ಧರ್ಮ ಗ್ರಂಥ ಸಂವಿಧಾನದ ಸ್ಥಾನದಲ್ಲಿ ಪ್ರತಿಷ್ಠಾಪನೆಯಾಗಲು ಸಾಧ್ಯ. ಒಂದು ವೇಳೆ ಅದು ಘಟಿಸಿದ್ದೆ ಆದರೆ ದೇಶ ಮತ್ತೊಮ್ಮೆ ಭಯಂಕರವಾದ ಗುಲಾಮಗಿರಿಗೆ ತಳ್ಳಲ್ಪಡುತ್ತದೆ. ಶೇ.97 ರಷ್ಟು ಜನರ ಹಕ್ಕುಗಳು ನಿರಾಯಾಸವಾಗಿ ದಮನಗೊಳ್ಳುತ್ತವೆ. ಸಂಸತ್‌ನಲ್ಲಿ ಪೂರ್ಣ ಪ್ರಮಾಣದ ಬಹುಮತ ಇದೆ ಎಂಬ ಕಾರಣಕ್ಕೆ ರಾತ್ರೋರಾತ್ರಿ ಜಿಎಸ್‌ಟಿ ಜಾರಿ ಮಾಡಲಾಗುತ್ತಿದೆ, ನೋಟ್ ಅಮಾನ್ಯಗೊಳಿಸಲಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದಿದ್ದಾರೆ ಎಂಬ ನೆಪದಲ್ಲಿ ಮೇಲ್ವರ್ಗದ ಜನರಿಗೆ ಶೇ.10 ರಷ್ಟು ಮೀಸಲಾತಿ ದಯಪಾಲಿಸಲಾಗುತ್ತದೆ. ಸಿಎಎ ಜಾರಿಗೆ ತರಲಾಗುತ್ತದೆ. ಉದ್ಯಮಿಗಳಿಗೆ ಲಾಭ ಮಾಡಿಕೊಡಲು ಮೂರು ಕೃಷಿ ಕಾನೂನುಗಳನ್ನು ಬದಲಾವಣೆ ಮಾಡಲಾಗುತ್ತದೆ. ಸಂವಿಧಾನ ಇದ್ದಾಗಲೇ ಇಷ್ಟು ಅವಾಂತರ ಸೃಷ್ಟಿಸುವವರು, ಕೇಂದ್ರದ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುವವರು ಪ್ರಜಾಪ್ರಭುತ್ವ ನಶಿಸಿದರೆ ಹಿಟ್ಲರ್‌ಗಿಂತಲೂ ಕ್ರೂರಿ ಸರ್ವಾಧಿಕಾರಿಯಾಗುವುದರಲ್ಲಿ ಅನುಮಾನವೇ ಇಲ್ಲ. ದೇಶದ ಮುಕ್ಕಾಲು ಪಾಲು ಜನ ಅಧಿಕಾರದಿಂದ ಹೊರಗುಳಿಯಬೇಕಾಗುತ್ತದೆ, ಆಡಳಿತದಲ್ಲಿ ಪಾಲುದಾರಿಕೆಯೇ ಇಲ್ಲದೆ ಹೋಗಬಹುದು. ಈಶ್ವರಪ್ಪ ಅವರ ಹೇಳಿಕೆಯನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಅದನ್ನು ತಡೆಯದಿದ್ದರೆ ಮುಂದೊಂದು ದಿನ ಭಾರತವೂ ಆಫ್ಘಾನಿಸ್ತಾನದ ಮಾದರಿಯಲ್ಲಿ ಧರ್ಮ ಸಂಕಟಕ್ಕೆ ಸಿಲುಕುವ ದಿನಗಳು ದೂರವಿಲ್ಲ. ಕಾಂಗ್ರೆಸಿಗರು ವಾಸ್ತವಗಳನ್ನು ಸರಿಯಾಗಿ ಹೇಳಲಿಲ್ಲ. ಕೇವಲ ಈಶ್ವರಪ್ಪ ಅವರನ್ನು ದೇಶದ್ರೋಹಿ ಎಂದು ಘೋಷಣೆ ಕೂಗಿದ್ದು ಬಿಟ್ಟರೆ ಫಲಿತಾಂಶವೇನು ಕಾಣಲಿಲ್ಲ.

ಸಾಮಾನ್ಯವಾಗಿ ವಿರೋಧ ಪಕ್ಷಗಳು ಶಾಂತಿಭಂಗ ಉಂಟು ಮಾಡಿ ಸರ್ಕಾರಕ್ಕೆ ಮತ್ತು ಮುಖ್ಯಮಂತ್ರಿಯವರಿಗೆ ಕೆಟ್ಟ ಹೆಸರು ತರಲು ಷಡ್ಯಂತ್ರ ರೂಪಿಸುತ್ತವೆ. ಆದರೆ ಪ್ರಸ್ತುತ ಪರಿಸ್ಥಿತಿ ಮಾತ್ರ ಭಿನ್ನ. ಸರ್ಕಾರವೇ ಕಾನೂನು ಸುವ್ಯವಸ್ಥೆ ಕದಡಲು ಯತ್ನಿಸುತ್ತದೆ. ಹಿಜಾಬ್ ವಿಷಯದಲ್ಲಿ ಬಿಜೆಪಿ ಶಾಸಕರೇ ಸಭೆ ನಡೆಸಿ ಶಾಲಾ ಕಾಲೇಜು ಮುಖ್ಯಸ್ಥರಿಗೆ ಸೂಚನೆ ನೀಡಿ ಕಾಲೇಜಿನ ಗೇಟು ಹಾಕಿಸಿ, ಮಕ್ಕಳನ್ನು ರಸ್ತೆಯಲ್ಲಿ ನಿಲ್ಲಿಸಿ ಸಂಕಟ ಪಡುವಂತೆ ಮಾಡುತ್ತಾರೆ. ಆಡಳಿತಾರೂಢ ಪಕ್ಷದ ಅಂಗಸಂಸ್ಥೆಗಳೇ ಮುಂದೆ ನಿಂತು ಗಲಭೆ ಸೃಷ್ಟಿಸುತ್ತವೆ. ಖಾಸಗಿಯಾಗಿ ಬಿಜೆಪಿ ನಾಯಕರನ್ನು ಕೇಳಿದರೆ, ಇದನ್ನೆಲ್ಲಾ ವಿರೋಧ ಪಕ್ಷದವರು ಮಾಡಬೇಕಿತ್ತು, ಅವರಿಗೆ ವಯಸ್ಸಾಗಿದೆ, ರಾಜಕೀಯ ಮಾಡುವ ತಾಕತ್ತಿಲ್ಲ ಅದಕ್ಕೆ ನಾವೇ ಮಾಡುತ್ತಿದ್ದೇವೆ. ಮುಂದೆ ವಿರೋಧ ಪಕ್ಷವೂ ಬಿಜೆಪಿಯೇ, ಸರ್ಕರವೂ ಬಿಜೆಪಿಯದೇ ಇರುತ್ತದೆ ನೋಡುತ್ತಿರಿ ಎಂದು ಹೇಳುತ್ತಾರೆ. ಕಾಂಗ್ರೆಸ್ ನಾಯಕರ ನಿರಾಸಕ್ತಿ ಧೋರಣೆ ನೋಡಿದರೆ ಅದು ಸಾಧ್ಯವೆನಿಸುತ್ತದೆ. ವಿಧಾನಮಂಡದಲ್ಲೂ ಬಿಜೆಪಿ ನಾಯಕರು ಅದರಲ್ಲೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಕಾಂಗ್ರೆಸ್ ಹಿಜಾಬ್ ಗಲಾಟೆಯಲ್ಲಿ ಹೈರಾಣಾಗಿ ಗತ್ಯಂತರವಿಲ್ಲದೆ ಈಶ್ವರಪ್ಪ ಅವರ ಹೇಳಿಕೆಯನ್ನು ಹಿಡಿದುಕೊಂಡು ಮುಖಮುಚ್ಚಿಕೊಳ್ಳುತ್ತಿದೆ ಎಂದು ಚುಚ್ಚಿದ್ದಾರೆ. ಕಾಂಗ್ರೆಸ್‌ಗೆ ಈಗಲೂ ಹಿಜಾಬ್ ವಿಷಯದಲ್ಲಿ ಏನು ಹೇಳಬೇಕು ಎಂದು ಅರ್ಥವಾಗದೆ ಗೊಂದಲದಲ್ಲಿದೆ. ಈಶ್ವರಪ್ಪ ಅವರು ಕೆಂಪುಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುವುದಾಗಿ ಹೇಳಿದಾಗಲೂ ಪ್ರಬಲ ಪ್ರತಿಪಕ್ಷವಾಗಿ ಕೆಲಸ ಮಾಡಲಾಗದೆ ತಿಣಕಾಡಿದೆ.  ಈಶ್ವರಪ್ಪ ಅನಗತ್ಯವಾಗಿ ವಿವಾದಗಳನ್ನು ಮೈಮೇಲೆ ಎಳೆದುಕೊಂಡ ಹಿನ್ನೆಲೆಯೂ ಕಾಂಗ್ರೆಸಿಗರಿಗೆ ಅರ್ಥವಾಗಲಿಲ್ಲ.

FLAG CODE OF INDIA- 2002 THE PREVENTION OF INSULTS TO NATIONAL HONOUR ACT, 1971 – ಪ್ರಕಾರ ಈಶ್ವರಪ್ಪ ಅವರ ಹೇಳಿಕೆ ರಾಷ್ಟ್ರದ್ರೋಹ ಎಂದು ಸ್ಪಷ್ಟವಾಗಿದೆ ಎಂದು ವಾದ ಮಾಡುವ ಕಾಂಗ್ರೆಸಿಗರು, ಸಂವಿಧಾನ ಉಲ್ಲಂಘನೆಯಾಗುವ ಹೇಳಿಕೆ ನೀಡಿದ ಸಚಿವ ಈಶ್ವರಪ್ಪ ಮತ್ತು ಅವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರವನ್ನೂ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬೇಕಿತ್ತು. ಆದರೆ ಹಾಗಾಗಲಿಲ್ಲ. ಮೂಲಗಳ ಪ್ರಕಾರ ಈಶ್ವರಪ್ಪ ಅವರ ವಿರುದ್ಧ ಕ್ರಮವಾಗುವುದು ಪ್ರತಿಪಕ್ಷದ ನಾಯಕರಿಗೆ ಬೇಕಿಲ್ಲ. ಹಾಗೇಯೇ ಹಿಜಾಬ್ ವಿಷಯ ಚರ್ಚೆಯಾಗುವುದು ಬೇಕಿರಲಿಲ್ಲ. ಅದಕ್ಕೆ ಕಾಲಹರಣ ಮಾಡಲು ಈಶ್ವರಪ್ಪ ಅವರನ್ನು ನೆಪ ಮಾಡಿಕೊಂಡು ವಿಧಾನಸೌಧವನ್ನು ಲೀಲಾ ಪ್ಯಾಲೇಸ್ ಹೋಟೆಲ್ ಎಂದು ಭಾವಿಸಿ ಐದು ದಿನ ಮಲಗಿ ಸುಧಾರಿಸಿಕೊಂಡರು. ವಿವಾದಿತ ಹೇಳಿಕೆ ನೀಡಿದ ಈಶ್ವರಪ್ಪ ಅವರಿಗೆ ಕನಿಷ್ಠ ಬುದ್ದಿ ಹೇಳುವ ಪ್ರಯತ್ನವೂ ಬಿಜೆಪಿ ಮತ್ತು ಸಂಘ ಪರಿವಾರದಲ್ಲಿ ನಡೆದಿಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವ ಹೇಳಿಕೆ ಬೇಜವಾಬ್ದಾರಿಯಿಂದ ಕೂಡಿದೆ ಎಂದು ಹೇಳಿದ್ದಾರೆ. ರಾಷ್ಟ್ರೀಯ ನಾಯಕತ್ವವೇ ಹೇಳಿಕೆಯನ್ನು ಒಪ್ಪದಿದ್ದಾಗಲೂ ರಾಜ್ಯ ನಾಯಕರು ಈಶ್ವರಪ್ಪ ಅವರ ಬೆಂಬಲಕ್ಕೆ ನಿಲ್ಲುತ್ತಾರೆ. ಈ ರೀತಿಯ ದ್ವಂದ್ವಗಳ ಮೂಲಕ ಪ್ರತಿಪಕ್ಷಗಳನ್ನಷ್ಟೆ ಅಲ್ಲ, ರಾಜ್ಯದ ಪ್ರಜ್ಞಾವಂತರನ್ನೂ ಬಿಜೆಪಿ ಮೂರ್ಖರನ್ನಾಗಿಸುತ್ತಿದೆ.

ಕಾಂಗ್ರೆಸ್ ಈಶ್ವರಪ್ಪ ಅವರೊಬ್ಬರಿಗೆ ನೇತು ಹಾಕಿಕೊಳ್ಳದೆ ಇಡೀ ಸರ್ಕಾರವನ್ನೇ ವಜಾಗೊಳಿಸುವಂತೆ ಪಟ್ಟು ಹಿಡಿಯಬೇಕು ಎಂದು ಕೆಲ ನಾಯಕರು ಸಲಹೆ ಮಾಡಿದರು. ಆದರೆ ಅದಕ್ಕೆ ಕಾಂಗ್ರೆಸ್‌ನಲ್ಲಿದ್ದು ಬಿಜೆಪಿ ಜೊತೆ ಅನಧಿಕೃತ ಹೊಂದಾಣಿಕೆ ರಾಜಕೀಯ ಮಾಡುವ ಕೆಲ ನಾಯಕರು ಸಮ್ಮತಿಸಲಿಲ್ಲ. ತಿಪ್ಪರಲಾಗ ಹಾಕಿದರು ಈಶ್ವರಪ್ಪ ಅವರ ವಿರುದ್ಧ ಬಿಜೆಪಿ ಕ್ರಮ ಕೈಗೊಳ್ಳುವುದಿಲ್ಲ ಎಂಬ ಸತ್ಯಗೊತ್ತಿದ್ದರೂ ಉದ್ದೇಶಪೂರ್ವಕವಾಗಿ ಸದನದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಲಾಗಿದೆ.

ಪ್ರತಿಪಕ್ಷದ ಶಾಸಕರು ವಿಧಾನ ಮಂಡಲದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾಗಲೂ ಈಶ್ವರಪ್ಪ ತಲೆ ಕೆಡಿಸಿಕೊಳ್ಳದೆ ಶಿವಮೊಗ್ಗದಲ್ಲಿ ನಡೆದ ಬಜರಂಗದಳದ ಮಾಜಿ ಕಾರ್ಯಕರ್ತನ ಕೊಲೆ ಪ್ರಕರಣದಲ್ಲಿ ರಾಜಕಾರಣ ಮಾಡಲು ಹೋದರು. ಪದೇ ಪದೇ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು ಮತ್ತು ಪ್ರತಿ ಪಕ್ಷಕ್ಕೆ ಸವಾಲು ಹಾಕುತ್ತಲೇ ಹೋದರು.

ಶಿವಮೊಗ್ಗದಲ್ಲಿ ಖಾಸಗಿ ವಿಚಾರಕ್ಕೆ ನಡೆದ ಹರ್ಷನ ಕೊಲೆ ಪ್ರಕರಣವನ್ನು ಎರಡು ಕೋಮುಗಳ ನಡುವೆ ದ್ವೇಷ ಸೃಷ್ಟಿಸಲು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಹಲವಾರು ದಲಿತರು ಹತ್ಯೆಯಾದಾಗ, ಹೆಣ್ಣು ಮಕ್ಕಳ ಅತ್ಯಾಚಾರವಾದಾಗ ಯಾವ ಸಚಿವನೂ ಹೋಗಿ ಹತ್ತು ಲಕ್ಷ ರೂಪಾಯಿಗಳ ದೇಣಿಗೆ ನೀಡಲಿಲ್ಲ. ಹರ್ಷ ರೌಡಿ ಶೀಟರ್  ಆಗಿದ್ದ ವ್ಯಕ್ತಿ. ಆತನ ಕೊಲೆಯ ನಂತರ ಶವ ಮೆರವಣಿಗೆಯಲ್ಲಿ ಸಚಿವರು, ಸಂಸದರು ಮುಂದಾಳಾಗಿ ನಿಲ್ಲುವುದಕ್ಕೆ ಯಾವ ಕಾನೂನಿನಲ್ಲಿ ಸಮರ್ಥನೆಯಿದೆ ಎಂದು ಗೊತ್ತಾಗುತ್ತಿಲ್ಲ.

ಈ ಎಲ್ಲಾ ಅವಾಂತರಗಳನ್ನು ಈಶ್ವರಪ್ಪ ಪ್ರಜ್ಞಾಪೂರ್ವಕವಾಗಿಯೇ ಮಾಡುತ್ತಿದ್ದಾರೆ. ಶತಾಯಗತಾಯ ಬಸವರಾಜ ಬೊಮ್ಮಾಯಿ ಅವರನ್ನು ಮುಂದಿನ ಚುನಾವಣೆಯ ವೇಳೆಗೆ ನೇಪಥ್ಯಕ್ಕೆ ಸರಿಸಲು ಸಂಘಪರಿವಾರಕ್ಕೆ ಸಾಥ್ ನೀಡುತ್ತಿದ್ದಾರೆ. ಅದಕ್ಕಾಗಿಯೇ ತಮ್ಮ ಸರ್ಕಾರದ ವಿರುದ್ಧವೇ ಶವಯಾತ್ರೆಯಲ್ಲಿ ಭಾಗವಹಿಸುತ್ತಾರೆ. ಕೊಲೆ ನಡೆದ ತಕ್ಷಣವೇ ಕೋಮು ಪ್ರಚೋದಿತ ಹೇಳಿಕೆ ನೀಡಿ ಜನರನ್ನು ಕೆರಳಿಸುವ ಪ್ರಯತ್ನ ಮಾಡುತ್ತಾರೆ.

ಇನ್ನೂ ಸಂಘಪರಿವಾರ ಮತ್ತು ಬಿಜೆಪಿ ಪ್ರತಿಪಾದಿಸುತ್ತಿರುವ ದೇಶಪ್ರೇಮವೇ ಮಾರುಕಟ್ಟೆಯ ಸರಕಾಗಿದೆ. ಸ್ವತಂತ್ರ ಪೂರ್ವದಲ್ಲಿ ಬ್ರಿಟಿಷ್ ಆಡಳಿತದಲ್ಲಿ ಆಧಿಕಾರಿಗಳಾಗಿದ್ದ ಬಹಳಷ್ಟು ಮಂದಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ. ಜನಸಂಘ ಅಥವಾ ಅದರ ಅಂಗಸಂಸ್ಥೆಗಳ ಯಾರು ಕೂಡ ಸ್ವಾತಂತ್ರ್ಯಕ್ಕಾಗಿ ತ್ಯಾಗ ಅಥವಾ ಬಲಿದಾನ ಮಾಡಲಿಲ್ಲ ಎಂಬುದನ್ನು ಇತಿಹಾಸ ಸ್ಪಷ್ಟ ಪಡಿಸುತ್ತಿದೆ. ಬೀಡಾಡಿಯಾಗಿ ಬ್ರಿಷರ ಜೊತೆಗಿದ್ದವರಿಗೆ ಸ್ವಾತಂತ್ರ್ಯ ನಂತರ ಅಸ್ತಿತ್ವದ ಭಯ ಕಾಡಿತ್ತು. ಅದಕ್ಕಾಗಿ ಹಿಂದು ಮಹಾಸಭಾದ ಹೆಸರಿನಲ್ಲಿ ಧರ್ಮ ರಕ್ಷಣೆಯ ಅಸ್ತ್ರ ಹಿಡಿದರು. ಆ ಮೂಲಕ ತನ್ನ ಸಂಘಟನೆ ಬಲ ಪಡಿಸಿಕೊಳ್ಳಲು ಯತ್ನಿಸಿತ್ತು. ಆದರೆ ಅದಕ್ಕೆ ಅಂಬೇಡ್ಕರ್, ಮಹಾತ್ಮಾ ಗಾಂಧಿಯವರಂತಹ ಮಹಾತ್ಮರು ಅವಕಾಶ ನೀಡಲಿಲ್ಲ. ಸಂಘ ಪರಿವಾರದ ಕೋಮು ಚಟುವಟಿಕೆಗಳನ್ನು ನೋಡಿ ಅದನ್ನು ನಿಷೇಧ ಮಾಡಲು ಸರ್ದಾರ್ ವಲ್ಲಭ ಭಾಯಿ ಪಟೇಲ್ ಮುಂದಾಗಿದ್ದರು. ಅಂದು ಸಂಘಪರಿವಾರಕ್ಕೆ ಜೀವದಾನ ಮಾಡಿದ್ದೇ ನೆಹರು ಅವರು. ಮಾಹಾತ್ಮ ಗಾಂಧೀಜಿ ಹತ್ಯೆ ಮಾಡಿ ಅದಕ್ಕೆ ಧರ್ಮ ರಕ್ಷಣೆಯ ಲೇಪ ಹಚ್ಚಲು ಹೋದಾಗಲು ಜನ ತಿರಸ್ಕರಿಸಿದ್ದರು. ಧರ್ಮದ ಹೆಸರಿನಲ್ಲಿ ನಡೆದ ಢೋಂಗಿತನಗಳೆಲ್ಲವೂ ಗಾಂಧೀಜಿ ಹತ್ಯೆಯ ಮೂಲಕ ಜನರ ಮುಂದೆ ಬೆತ್ತಲಾದವು.

ಬಹಳಷ್ಟು ವರ್ಷಗಳ ಕಾಲ ಹಿಂದು ಮಹಾಸಭಾ ಮತ್ತು ಸಂಘ ಪರಿವಾರಕ್ಕೆ ತಲೆ ಎತ್ತಿ ನಡೆಯಲು ಅರ್ಹತೆಯೇ ಇಲ್ಲ ಎಂಬ ಪರಿಸ್ಥಿತಿ ಇತ್ತು. ಗಾಂಧೀಜಿ ಕೊಂದ ಕಳಂಕದಿಂದ ಹೊರ ಬರಲು ಸಾಧ್ಯವಾಗಲಿಲ್ಲ. ರಾಮನ ಹೆಸರಿನಲ್ಲಿ ನಡೆದ ರಥಯಾತ್ರೆಯೂ ಪರಿಣಾಮ ಬೀರಲಿಲ್ಲ. ಆಗ ಹೊಸ ತಂತ್ರಗಾರಿಕೆ ಹೆಣೆದ ಸಂಘ ಪರಿವಾರ ಇದ್ದಕ್ಕಿದ್ದಂತೆ ದೇಶ ಪ್ರೇಮದ ಮಂತ್ರ ಪಠಿಸಲಾರಂಭಿಸಿತ್ತು. ಸದಾ ವಸ್ತಲೇ ಎನ್ನುತ್ತಿದ್ದವರು ಭಾರತ್ ಮಾತಾ ಕೀ ಜೈ ಎನ್ನಲಾರಂಭಿಸಿದರು. ತ್ರಿವರ್ಣ ಧ್ವಜದಲ್ಲಿರುವ ಮೂರು ಬಣ್ಣಗಳು ಅಪಶಕುನ, ದೇಶಕ್ಕೆ ಅಪಾಯ ಎನ್ನುತ್ತಿದ್ದವರು ಕೊನೆಗೆ ಅದೇ ಧ್ವಜದ ಕೆಳಗೆ ನಿಂತು ಸಲ್ಯೂಟ್ ಹೊಡೆಯುವ ಮೂಲಕ ತಮ್ಮನ್ನು ತಾವು ದೇಶ ಭಕ್ತರೆಂದು ಘೋಷಿಸಿಕೊಂಡರು.

ಧರ್ಮ ಲೇಪಿತ ರಾಜಕಾರಣದಿಂದ ಉಳಿಗಾಲ ಇಲ್ಲ ಎಂದು ಅರಿವಾದಾಗ ಸಂಘ ಪರಿವಾರಕ್ಕೆ ಕಾಣಿಸಿದ್ದೆ ದೇಶಪ್ರೇಮದ ಮುಖವಾಡ. ಪರಿವಾರ ಪ್ರತಿಪಾದಿಸುವ ದೇಶಭಕ್ತಿಯಲ್ಲಿ ಪ್ರಾಮಾಣಿಕತೆ ಇಲ್ಲ.

ಕೇವಲ ಬಿಜೆಪಿಗೆ ಬೆಂಬಲ ನೀಡಲು, ಬಿಜೆಪಿ ನಾಯಕತ್ವವನ್ನು ಬೆಂಬಲಿಸಲು, ಚುನಾವಣೆಯಲ್ಲಿ ಗೆಲ್ಲಲು ತನ್ಮೂಲಕ ಅಧಿಕಾರ ಹಿಡಿಯಲು ಕೋಟ್ಯಂತರ ಹಿಂದುಗಳ ಧಾರ್ಮಿಕ ಭಾವನೆಗಳನ್ನು ಬಿಜೆಪಿಗೆ ರಾಜಕೀಯಕ್ಕೆ ಅಡಮಾನ ಮಾಡಲಾಗುತ್ತಿದೆ. ಅಧಿಕಾರಕ್ಕೆ ಬಂದಾಗ ತನ್ನ ಹಿಡನ್ ಅಜೆಂಡಾವನ್ನು ಕಳ್ಳದಾರಿಯಲ್ಲಿ ಜಾರಿಗೆ ತರುವ ಹುನ್ನಾರ ನಡೆಯುತ್ತಲೇ ಇರುತ್ತದೆ.

ಮೊದಲು ಅಲ್ಪಸಂಖ್ಯಾತರನ್ನು ಗುರಿ ಮಾಡುವುದು, ನಂತರ ದಲಿತರ  ಸಾಂಸ್ಕೃತಿಕತೆ ಮತ್ತು ಮಾನಸಿಕತೆ ಮೇಲೆ ದಾಳಿ ಮಾಡುವುದು, ಕೊನೆ ಹಂತದಲ್ಲಿ ಹಿಂದುಳಿದ ವರ್ಗಗಳನ್ನು ಮೂಲೆ ಗುಂಪು ಮಾಡುವುದು ಸಂಘ ಪರಿವಾರದ ಹಿಡನ್ ಅಜೆಂಡಾ ಎಂಬುದರಲ್ಲಿ ಎರಡು ಮಾತಿಲ್ಲ. ಸಂಘ ಪರಿವಾರ ನಿಜವಾದ ದೇಶ ಭಕ್ತ ಸಂಘಟನೆಯಾಗಿ ಉಳಿದಿಲ್ಲ. ತನ್ನ ಅಸ್ತಿತ್ವ ಹಾಗೂ ಸ್ವಾರ್ಥಕ್ಕಾಗಿ ಕಾಲಕ್ಕೆ ತಕ್ಕಂತೆ    ಜನರ ಭಾವನೆಗಳನ್ನು ಮಾರುಕಟ್ಟೆ ಮಾಡುವ ಮಧ್ಯವರ್ತಿ ಸಂಸ್ಥೆಯಾಗಿದಷ್ಟೆ. ಅದನ್ನು ಪರಿವಾರ ಎಂದು ಕರೆಯುವ ಬದಲು ಮಾರುಕಟ್ಟೆ ಪ್ರೈವೆಟ್ ಲಿಮಿಟೆಡ್ ಎಂದು ಕರೆಯವುದು ಸೂಕ್ತ. ಬಿಜೆಪಿ ಪ್ರತಿಯೊಂದಕ್ಕೆ ಸಂಘ ಪರಿವಾರ ನೆರಳಿನಲ್ಲಿ ಅಡಗಿ ಕುಳಿತು ಕೊಳ್ಳುವ ಬದಲು ನೇರವಾಗಿ ರಾಜಕಾರಣ ಮಾಡಿ ಪ್ರಜಾಪ್ರಭುತ್ವವನ್ನು ಅನುಸರಣೆ ಮಾಡಲಿ. ಶಿವಮೊಗ್ಗದಲ್ಲಿ ಕಾಲೇಜಿನ ಧ್ವಜಕಂಬದ ಮೇಲೆ ಕೆಸರಿ ಧ್ವಜ ಹಾರಿಸಿದಷ್ಟು ಸುಲಭ ಅಲ್ಲ ಕೆಂಪುಕೋಟೆಯ ಮೇಲೆ ಧ್ವಜ ಹಾರಿಸುವುದು. ಭಾವೋದ್ರಿಕ್ತ ವಿಷಯಗಳನ್ನು ಬಿಟ್ಟು, ಹಣದುಬ್ಬರ, ಆರ್ಥಿಕ ಹಿಂಜರಿತ, ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಳದ ಬಗ್ಗೆ ಚರ್ಚೆ ಮಾಡುವುದು ಸೂಕ್ತವಾಗಿದೆ. ಸಾಮಾಜಿಕ ತಾಲತಾಣಗಳಲ್ಲಿ ಹೂಳಿಟ್ಟು ಸತ್ಯ ಮರೆ ಮಾಚಿ ಎಲ್ಲವೂ ಸರಿಯಿದೆ. ದೇಶ ಸಮೃದ್ಧಿಯಾಗಿದೆ ಎಂದು ಬಿಂಬಿಸಲು ಯತ್ನಿಸಲಾಗುತ್ತಿದೆ. ಈ ಹಿಂದೆ ಇಂಡಿಯಾ ಶೈನಿಂಗ್ ಎಂಬ ಘೋಷಣೆ ಮಾಡಿ ಜನರನ್ನು ಮರಳು ಮಾಡಲು ಹೋಗಿ ಮೊಟಕಿಸಿಕೊಂಡ ಬಿಜೆಪಿ ಈ ಬಾರಿ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ.

ಕೇಬಲ್ ಬಿಲ್, ಮೊಬೈಲ್ ರಿಚಾರ್ಜ್, ಪೆಟ್ರೋಲ್, ಡಿಸೇಲ್, ವಿಮೆ, ತಿನ್ನುವ ಅನ್ನಕ್ಕೂ ಜಿಎಸ್‌ಟಿ, ಕುಡಿಯುವ ನೀರಿಗೂ ಜಿಎಸ್‌ಟಿ ಹಾಕುವ ಸರ್ಕಾರ ಜನರನ್ನು ಹಾಡಹಗಲೇ ದರೋಡೆ ಮಾಡುತ್ತಿದೆ. ಪ್ರತಿ ಹಂತದಲ್ಲೂ ಹಣ ಖರ್ಚು ಮಾಡಲಾಗದೆ ಜನ ಸತ್ತು ಬದುಕುತ್ತಿದ್ದಾರೆ. ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಜನರ ತಲಾ ಆದಾಯ ಹೆಚ್ಚಾಗಿಲ್ಲ, ಬದಲಾಗಿ ಜೀವನ ನಿರ್ವಹಣಾ ವೆಚ್ಚು ದುಬಾರಿಯಾಗಿದೆ. ಆದಾಯ ಶೇ.೩೦ರಷ್ಟು ಕಡಿತವಾಗಿದ್ದರೆ, ಜೀವನ ನಿರ್ವಹಣೆ ವೆಚ್ಚಬಶೇ.೬೦ರಷ್ಟು ಹೆಚ್ಚಾಗಿದೆ. ಕೊರೊನಾ ಹೆಸರು ಹೇಳಿ ಜನ ಸಾಮಾನ್ಯರನ್ನು ದೋಚಲಾಗಿದೆ. ಕೊರೊನಾ ನಿರ್ವಹಣೆಯಲ್ಲಿ ವಿಫಲರಾದ ಪ್ರಧಾನಿಗಳ ವಿರುದ್ಧ ಬಹಳಷ್ಟು ದೇಶಗಳಲ್ಲಿ ಆಯಾ ಪ್ರಜೆಗಳು ಪ್ರತಿಭಟನೆ ನಡೆಸಿದ್ದಾರೆ. ನಮ್ಮಲ್ಲಿ ತನಿಖಾ ಸಂಸ್ಥೆಗಳಿಗೆ ಹೆದರಿ ಸಂತ್ರಸ್ತರು ಅಡಗಿ ಕುಳಿತಿದ್ದಾರೆ.

Join Whatsapp