ಮುಂಬೈ: ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿತರಾಗಿರುವ ಚಿಂತಕ, ಬರಹಗಾರ ಆನಂದ್ ತೆಲ್ತುಂಬ್ಡೆ ಅವರಿಗೆ ಮಾರ್ಚ್ 8ರಿಂದ 10ರ ವರೆಗೆ ಚಂದ್ರಾಪುರದಲ್ಲಿರುವ ತಮ್ಮ ತಾಯಿಯನ್ನು ಭೇಟಿ ಮಾಡಲು ಬಾಂಬೆ ಹೈಕೋರ್ಟ್ ಅನುಮತಿ ನೀಡಿದೆ.
ಎನ್ ಕೌಂಟರ್ ಒಂದರಲ್ಲಿ ಆನಂದ್ ಅವರ ಸಹೋದರ ಮಿಲಿಂದ್ ಅವರ ಹತ್ಯೆಯಾದ ಮೂರು ತಿಂಗಳ ಬಳಿಕ ಬಾಂಬೆ ಹೈಕೋರ್ಟ್ ವೃದ್ಧ ತಾಯಿಯನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಿದೆ.
ನ್ಯಾಯಮೂರ್ತಿಗಳಾದ ಸುನಿಲ್ ಶುಕ್ರೆ ಮತ್ತು ಜಿ.ಎ.ಸನಪ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಸಹೋದರ ಮಿಲಿಂದ್ ತೇಲ್ತುಂಬ್ಡೆ ಅವರ ನಿಧನದ ಹಿನ್ನೆಲೆಯಲ್ಲಿ ತಮ್ಮ ಕುಟುಂಬಸ್ಥರನ್ನು ಭೇಟಿ ಮಾಡಲು ಅವಕಾಶ ಕೋರಿ ಆನಂದ್ ಅರ್ಜಿ ಸಲ್ಲಿಸಿದ್ದರು.
ತಮ್ಮ ಜಾಮೀನು ಅರ್ಜಿಯಲ್ಲಿ ಆನಂದ್ ತೇಲ್ತುಂಬ್ಡೆ ಅವರು ತಮ್ಮ ಸಹೋದರನೊಂದಿಗೆ ತಮ್ಮ ಹಾಗೂ ಕುಟುಂಬದ ಒಡನಾಟವು 1990ರ ಮಧ್ಯಭಾಗದಲ್ಲಿಯೇ ನಿಂತು ಹೋಯಿತು. ಆನಂತರ ಸಹೋದರ ಮಿಲಿಂದ್ ಸಂಪರ್ಕದಲ್ಲಿ ಇರಲಿಲ್ಲ ಎಂದಿದ್ದಾರೆ. ತೇಲ್ತುಂಬ್ಡೆ ಅವರನ್ನು ಪ್ರತಿನಿಧಿಸಿರುವ ವಕೀಲ ಮಿಹಿರ್ ದೇಸಾಯಿ ಅವರು ತೇಲ್ತುಂಬ್ಡೆ ಅವರ ತಂದೆಯವರು ಕೆಲ ವರ್ಷದ ಹಿಂದೆಯೇ ಮೃತರಾಗಿದ್ದಾರೆ. ತಾಯಿಯವರಿಗೆ 92 ವರ್ಷ ವಯಸ್ಸಾಗಿದೆ. ಸಹೋದರ ಅಗಲಿರುವ ಈ ಸಂದರ್ಭದಲ್ಲಿ ತಮ್ಮ ವಯಸ್ಸಾದ ತಾಯಿಯೊಂದಿಗೆ ಹಾಗೂ ಕುಟುಂಬಸ್ಥರೊಂದಿಗೆ ಕೆಲ ಸಮಯವನ್ನು ಕಳೆಯಲು ತೇಲ್ತುಂಬ್ಡೆ ಅವರಿಗೆ ಅವಕಾಶ ಮಾಡಿಕೊಡಬೇಕು ಎಂದು ನ್ಯಾಯಾಲಯವನ್ನು ಕೋರಿದ್ದರು.