ತಿರುವನಂತಪುರಂ: ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ರಾಷ್ಟ್ರೀಯ ಸುರಕ್ಷತೆಯ ಕಾರಣ ನೀಡಿ ಮಲಯಾಳಂ ಸುದ್ದಿ ವಾಹಿನಿ ‘ಮೀಡಿಯಾಒನ್’ ಮೇಲೆ ಹೇರಿದ್ದ ನಿಷೇಧವನ್ನು ಎತ್ತಿ ಹಿಡಿದು ಇತ್ತೀಚೆಗೆ ಕೇರಳ ಹೈಕೋರ್ಟಿನ ಏಕಸದಸ್ಯ ಪೀಠ ಹೊರಡಿಸಿದ್ದ ಅದೇಶದ ವಿರುದ್ಧ ಮೀಡಿಯಾಒನ್ ಸಲ್ಲಿಸಿದ್ದ ಅಪೀಲನ್ನು ಹೈಕೋರ್ಟ್ ಇಂದು ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಎಸ್ ಮಣಿಕುಮಾರ್ ಮತ್ತು ನ್ಯಾಯಮೂರ್ತಿ ಶಾಜಿ ಪಿ ಚಲಿ ಅವರನ್ನೊಳಗೊಂಡ ವಿಭಾಗೀಯ ಪೀಠವು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಮೀಡಿಯಾ ಒನ್ ಸಂಸ್ಥೆಯ ಪ್ರಸಾರ ಕುರಿತಾದ ಪರವಾನಗಿಯನ್ನು ನವೀಕರಿಸಲು ನಿರಾಕರಿಸಿದ್ದ ಕ್ರಮವನ್ನು ಇಂದು ಎತ್ತಿ ಹಿಡಿದಿದೆ.
ಮೀಡಿಯಾ ಒನ್ ಕಳೆದ ತಿಂಗಳಿನಿಂದ ಕಾರ್ಯಸ್ಥಗಿತಗೊಂಡಿದೆ. ಕೇಂದ್ರ ಸರ್ಕಾರ ಸಲ್ಲಿಸಿದ ದಾಖಲೆಗಳನ್ನು ಪರಿಗಣಿಸಿದ ಹೈಕೋರ್ಟ್ ವಿಭಾಗೀಯ ಪೀಠವು, ಕೆಳ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ.
ನ್ಯಾಯಮೂರ್ತಿಗಳಾದ ಎಸ್.ಮಣಿಕುಮಾರ್, ಶಾಜಿ ಪಿ.ಚಾಲಿ ಅವರನ್ನೊಳಗೊಂಡ ವಿಭಾಗೀಯ ಪೀಠ ‘ನಾವು ಗೌಪ್ಯ ಕಡತಗಳನ್ನು ಪರಿಶೀಲಿಸಿದ್ದೇವೆ ಮತ್ತು ಮೀಡಿಯಾ ಒನ್ ಸುದ್ದಿವಾಹಿನಿಯ ಪ್ರಸಾರದಿಂದ ರಾಷ್ಟ್ರೀಯ ಭದ್ರತೆಗೆ ಅಪಾಯವಿದೆ ಎಂದು ಮನವರಿಕೆಯಾಗಿದೆ’ ಎಂದು ತಿಳಿಸಿದ್ದಾರೆ.
ನ್ಯಾಯಾಲಯದ ಈ ಆದೇಶದಿಂದಾಗಿ ಮೀಡಿಯಾ ಒನ್ ಸುದ್ದಿವಾಹಿನಿ ಮೇಲಿನ ನಿಷೇಧ ಮುಂದುವರಿಯಲಿದೆ. ಇದನ್ನು ಪ್ರಶ್ನಿಸಿ ಮೀಡಿಯಾ ಒನ್ ಸುದ್ದಿವಾಹಿನಿ ಸಂಸ್ಥೆಯು ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದೆ.
ಮೀಡಿಯಾ ಒನ್ ಪರವಾಗಿ ಹಿರಿಯ ವಕೀಲರಾದ ದುಶ್ಯಂತ್ ದವೆ ಅವರು ವಾದ ಮಂಡಿಸಿದ್ದರು.
ಈ ಮಧ್ಯೆ ಜಾಗತಿಕ ಪತ್ರಕರ್ತ ಸಂಸ್ಥೆಗಳು, ವಿರೋಧ ಪಕ್ಷ ಮತ್ತು ಮಾಧ್ಯಮ ಪ್ರತಿನಿಧಿಗಳು ಮೀಡಿಯಾ ಒನ್ ಸುದ್ದಿವಾಹಿನಿಯನ್ನು ಬೆಂಬಲಿಸಿದ್ದು, ಕೇಂದ್ರ ಸರ್ಕಾರ ಸರ್ವಾಧಿಕಾರ ಧೋರಣೆಗೆ ಆಕ್ರೋಶ ವ್ಯಕ್ತಪಡಿಸಿದೆ