ಬೆಂಗಳೂರು ಗಲಭೆ ಪ್ರಕರಣದ ಪ್ರಮುಖ ಆರೋಪಿ ಸಂಪತ್ ರಾಜ್ ಕೊನೆಗೂ ಬಂಧನ

Prasthutha|

ಬೆಂಗಳೂರು : ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಓರ್ವನಾದ, ತಲೆ ಮರೆಸಿಕೊಂಡಿದ್ದ ಮಾಜಿ ಮೇಯರ್ ಸಂಪತ್ ರಾಜ್ ನನ್ನು ಸಿಸಿಬಿ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.

- Advertisement -

ತೀವ್ರ ಹುಡುಕಾಟದ ನಂತರ ಸೋಮವಾರ ರಾತ್ರಿ ಸಿಸಿಬಿ ಪೊಲೀಸರು ಕೊನೆಗೂ ಸಂಪತ್ ರಾಜ್ ನನ್ನು ಬಂಧಿಸಿದ್ದಾರೆ. ಕೊರೋನಾ ಪಾಸಿಟಿವ್ ಬಂದಿದ್ದ ಕಾರಣ ಆಸ್ಪತ್ರೆ ಸೇರಿದ್ದ ಸಂಪತ್ ರಾಜ್ ಅಕ್ಟೋಬರ್ 23ರಂದು ಆಸ್ಪತ್ರೆಯಿಂದ ಪರಾರಿಯಾಗಿದ್ದ.  

ಸೋಮವಾರ ಸಂಜೆ ಸಂಪತ್ ರಾಜ್ ತನ್ನ ಪುಲಕೇಶಿ ನಗರದ ಮನೆಗೆ ಬರುವ ಖಚಿತ ಮಾಹಿತಿ ಪಡೆದ ಪೊಲೀಸರು ಆತನನ್ನು ಸೆರೆ ಹಿಡಿದಿದ್ದಾರೆ.

- Advertisement -

22 ದಿನಗಳಿಂದ ಸಂಪತ್ ರಾಜ್ ತಲೆ ಮರೆಸಿಕೊಂಡು, ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ. ಇದೀಗ ಸಿಸಿಬಿ ಪೊಲೀಸರ ಜಾಲದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೆ, ಪೊಲೀಸರ ವಶವಾಗಿದ್ದಾನೆ.

ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಎಸ್ಕೇಪ್ ಆಗುತ್ತಿದ್ದ ಸಂಪತ್ ರಾಜ್, ನಾಗರಹೊಳೆ, ಕೇರಳ ಮುಂತಾದೆಡೆಗೆ ಪ್ರಯಾಣಿಸುತ್ತಿದ್ದ ಎನ್ನಲಾಗಿದೆ. ಆದರೆ ಸೋಮವಾರವಷ್ಟೇ ಬೆಂಗಳೂರಿಗೆ ಬಂದು ಬೆನ್ಸನ್​ ಟೌನ್​ನಲ್ಲಿನ ಅಪಾರ್ಟ್​ಮೆಂಟೊಂದರಲ್ಲಿ ತಂಗಿದ್ದ ಸಂಪತ್​ ರಾಜ್​ ಕುರಿತು ಖಚಿತ ಮಾಹಿತಿ ಸಿಗುತ್ತಿದ್ದಂತೆ, ಎಸಿಪಿ ವೇಣುಗೋಪಾಲ್​ ನೇತೃತ್ವದಲ್ಲಿ ದಾಳಿ ನಡೆಸಿದ ಸಿಸಿಬಿ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಯನ್ನು ಬಂಧಿಸಿ ಅಜ್ಞಾತ ಸ್ಥಳದಲ್ಲಿ ಇರಿಸಿರುವ ಸಿಸಿಬಿ ಪೊಲೀಸರು, ಇಂದು ಮಧ್ಯಾಹ್ನ ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.

ಪ್ರಕರಣ ಸಂಬಂಧ 50 ಪುಟಗಳ ಮಧ್ಯಂತರ ದೋಷಾರೋಪ ಪಟ್ಟಿಯನ್ನು ಸಿಸಿಬಿ ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಸಿದೆ.

ಸಂಪತ್ ರಾಜ್ ನನ್ನು ಬಂಧಿಸದ ಪೊಲೀಸರ ಕಾರ್ಯ ವೈಖರಿ ಬಗ್ಗೆ ಹೈಕೋರ್ಟ್‌ ಇತ್ತೀಚೆಗೆ ಅಸಮಾಧಾನ ವ್ಯಕ್ತಪಡಿಸಿತ್ತು. ಒಬ್ಬ ರಾಜಕಾರಣಿಯನ್ನು ಬಂಧಿಸಲು ಸಾಧ್ಯವಾಗಲಿಲ್ಲವೇ ಎಂದು ಹೈಕೋರ್ಟ್‌ ಪೊಲೀಸರನ್ನು ಪ್ರಶ್ನಿಸಿತ್ತು.



Join Whatsapp