ಬೆಂಗಳೂರು: ಆನ್ ಲೈನ್ ಜೂಜಾಟ ನಿಷೇಧಿಸುವ ಸಂಬಂಧ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕರ್ನಾಟಕ ಪೊಲೀಸ್ ತಿದ್ದುಪಡಿ ಕಾಯಿದೆಯನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ.
ಮುಂಬೈನಲ್ಲಿ ಕೇಂದ್ರ ಕಚೇರಿ ಹೊಂದಿರುವ ಆಲ್ ಇಂಡಿಯಾ ಗೇಮಿಂಗ್ ಫೆಡರೇಷನ್ ಒಳಗೊಂಡು ಇತರೆ ಖಾಸಗಿ ಕಂಪೆನಿಗಳು ಸಲ್ಲಿಸಿರುವ ಮನವಿಗಳ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ನೇತೃತ್ವದ ವಿಭಾಗೀಯ ಪೀಠವು ತೀರ್ಪನ್ನು ಕಾಯ್ದಿರಿಸಿತ್ತು.
ಇಂದು ತೀರ್ಪು ಪ್ರಕಟಿಸಿದ ವಿಭಾಗೀಯ ಪೀಠ, ಕರ್ನಾಟಕ ಪೊಲೀಸ್ ತಿದ್ದುಪಡಿ ಕಾಯಿದೆಯ ಆಕ್ಷೇಪಿತ ಸೆಕ್ಷನ್ ಗಳನ್ನು ರದ್ದುಪಡಿಸಿ, 120 ಪುಟಗಳ ತೀರ್ಪು ಪ್ರಕಟಿಸಿದೆ.
ಕರ್ನಾಟಕ ಪೊಲೀಸ್ ತಿದ್ದುಪಡಿ ಕಾಯಿದೆಯ ಕಾಯಿದೆಯ ನಿರ್ದಿಷ್ಟ ಸೆಕ್ಷನ್ ಗಳನ್ನು ಅಸಾಂವಿಧಾವಿಕ ಎಂದು ಹೇಳಲಾಗಿದೆಯೇ ವಿನಃ ಇಡೀ ಕಾನೂನನ್ನು ರದ್ದುಪಡಿಸಲಾಗಿಲ್ಲ ಎಂದು ಹೈಕೋರ್ಟ್ ಸ್ಪಷ್ಪಪಡಿಸಿದೆ.
ಪೋಕರ್, ಚೆಸ್, ರಮ್ಮಿ, ಫ್ಯಾಂಟಸಿ ಆಟಗಳು (ಫ್ಯಾಂಟಸಿ ಕ್ರಿಕೆಟ್, ಫುಟ್ ಬಾಲ್ ಮತ್ತು ಬ್ಯಾಸ್ಕೆಟ್ ಬಾಲ್), ತಾತ್ಕಾಲಿಕ ಆಟಗಳು ಮತ್ತು ಇ-ಕ್ರೀಡೆಗಳು ಕೌಶಲ್ಯ ಸಂಬಂಧಿಸಿದ್ದಾಗಿವೆ ಎಂದು ಹಲವು ನ್ಯಾಯಾಲಯಗಳು ಹೇಳಿವೆ. ಕೆಲವು ಆಟಗಳು ಹಣದ ಅಪಾಯವನ್ನು ಒಳಗೊಂಡಿವೆಯಾದರೂ ಅವು ಜೂಜಾಟಕ್ಕೆ ಸಂಬಂಧಿಸಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು.
ಫೆಡರೇಷನ್ ಆಫ್ ಇಂಡಿಯನ್ ಫ್ಯಾಂಟಸಿ ಸ್ಪೋರ್ಟ್ಸ್ (ಎಫ್ ಐಎಫ್ ಎಸ್) ಪ್ರತಿನಿಧಿಸಿದ್ದ ಹಿರಿಯ ವಕೀಲ ಮುಕುಲ್ ರೋಹಟ್ಗಿ ಅವರು “ಅರ್ಜಿದಾರರು ಪ್ರವರ್ತಕರಾಗಿರುವ ಫ್ಯಾಂಟಸಿ ಆಟಗಳು ಕರ್ನಾಟಕ ಪೊಲೀಸ್ ತಿದ್ದುಪಡಿ ಕಾಯಿದೆಯ ವ್ಯಾಪ್ತಿಗೆ ಯಾವುದೇ ರೀತಿಯಲ್ಲಿಯೂ ಒಳಪಡುವುದಿಲ್ಲ” ಎಂದು ಸಮರ್ಥಿಸಿದ್ದರು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು “ಮೂರನೇ ವ್ಯಕ್ತಿಯ ಕೌಶಲವನ್ನು ಆಧರಿಸಿ ಫ್ಯಾಂಟಸಿ ಆಟಗಳು ಜೂಜಿಗೆ ಅನುಮತಿಸುತ್ತವೆ. ಇದು ಆಯ್ಕೆಯ ಆಟಕ್ಕೆ ಸಂಬಂಧಿಸಿದ್ದಾಗಿದೆ. ಆನ್ ಲೈನ್ ಗೇಮಿಂಗ್ ಚಟುವಟಿಕೆಗಳಲ್ಲಿ ಅಪಾರ ಪ್ರಮಾಣದ ಹವಾಲಾ ಹಣವನ್ನು ಗಮನದಲ್ಲಿಟ್ಟುಕೊಂಡು ತಿದ್ದುಪಡಿ ಕಾಯಿದೆಯನ್ನು ಜಾರಿಗೊಳಿಸಲಾಗಿದೆ” ಎಂದು ಸಮರ್ಥಿಸಿದ್ದರು.
ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಆರ್ಯಂ ಸುಂದರಂ, ಸಜ್ಜನ್ ಪೂವಯ್ಯ ಮತ್ತಿತರರು ಅರ್ಜಿದಾರರ ಪರವಾಗಿ ವಾದ ಮಂಡಿಸಿದ್ದರು.
ಆನ್ ಲೈನ್ ಜೂಜಾಟ ನಿಷೇಧ: ಕರ್ನಾಟಕ ಪೊಲೀಸ್ ತಿದ್ದುಪಡಿ ಕಾಯಿದೆ ರದ್ದುಪಡಿಸಿದ ಹೈಕೋರ್ಟ್
Prasthutha|
- Advertisement -