ಹೊಸದಿಲ್ಲಿ : ವಿದೇಶಿ ದೇಣಿಗೆಗೆ ಕೇಂದ್ರ ಸರಕಾರ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಿದೆ. ಈ ನಿಟ್ಟಿನಲ್ಲಿ ವಿದೇಶಿ ಕೊಡುಗೆ ನಿಯಂತ್ರಣ ನಿಯಮಗಳನ್ನು ತಿದ್ದಿಪಡಿ ಮಾಡಲಾಗಿದ್ದು, ಅಧಿಸೂಚನೆ ಹೊರಡಿಸಲಾಗಿದೆ. ಇದರ ಪ್ರಕಾರ ಇನ್ನು ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು, ಸರಕಾರಿ ನೌಕರರು ಮತ್ತು ಯಾವುದೇ ರಾಜಕೀಯ ಪಕ್ಷದ ಸದಸ್ಯರಿಗೆ ವಿದೇಶಿ ನೆರವು ಪಡೆಯುವುದನ್ನು ನಿರ್ಬಂಧಿಸಲಾಗಿದೆ.
ಕನಿಷ್ಠ ಮೂರು ವರ್ಷಗಳಿಂದ ಅಸ್ತಿತ್ವದಲ್ಲಿರುವ ಮತ್ತು ಸ್ವಯಂಸೇವಕ ಕೆಲಸಕ್ಕಾಗಿ 15 ಲಕ್ಷ ರೂ. ಖರ್ಚು ಮಾಡಿದ ಸ್ವಯಂಸೇವಕ ಸಂಸ್ಥೆಗಳಿಗೆ ಮಾತ್ರ ಈಗ ವಿದೇಶಿ ದೇಣಿಗೆಯನ್ನು ಪಡೆಯಲು ಅವಕಾಶವಿರುತ್ತದೆ. ರೈತರು, ವಿದ್ಯಾರ್ಥಿಗಳು ಮತ್ತು ರಾಜಕೀಯೇತರ ಧಾರ್ಮಿಕ ಸಂಸ್ಥೆಗಳಿಗೆ ವಿದೇಶಿ ದೇಣಿಗೆಯ ನಿಬಂಧನೆಗಳಲ್ಲಿ ವಿನಾಯಿತಿ ನೀಡಲಾಗುತ್ತದೆ. ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ ಅಧಿಸೂಚನೆಯಲ್ಲಿ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆಯಡಿ ನೋಂದಾಯಿಸಲು ಇಚ್ಛಿಸುವ ಎನ್‌ಜಿಒಗಳು ದಾನಿಗಳಿಂದ ವಿದೇಶಿ ದೇಣಿಗೆಯ ಮೊತ್ತ ಮತ್ತು ಅದು ಯಾವ ಕಾರ್ಯಗಳಿಗೆ ಖರ್ಚು ಮಾಡಲಾಗುತ್ತದೆ ಎಂದು ತಿಳಿಸುವ ದಾಖಲೆಯನ್ನು ತಯಾರಿಸಬೇಕು ಎಂದು ತಿಳಿಸಿದೆ.